ವೀರಾಜಪೇಟೆ, ಜು. 2: ವಾಹನ ಅಪರಾಧಗಳು ಕಡಿಮೆಯಾಗಲು ಚಾಲಕರು ಚಾಚು ತಪ್ಪದೆ ಕಾನೂನನ್ನು ಪರಿಪಾಲನೆ ಮಾಡಬೇಕು. ವಾಹನ ಚಾಲನೆಯ ಮೊದಲು ವಾಹನ ಅಪರಾಧದ ಕಾನೂನು ಅರಿವು ಚಾಲಕರಿಗಿರಬೇಕು ಎಂದು ಇಲ್ಲಿನ ಸಮುಚ್ಚಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು.ಕೊಡಗು ಜಿಲ್ಲಾ ಪೊಲೀಸ್, ವೀರಾಜಪೇಟೆ ಉಪ ವಿಭಾಗದ ವತಿಯಿಂದ ‘’ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಮಾಸ - 2018’’ರ ಅಂಗವಾಗಿ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸ ಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು ಮನುಷ್ಯ ಹುಟ್ಟುವಾಗಲೇ ಕಾನೂನು (ಮೊದಲ ಪುಟದಿಂದ) ಪ್ರಾರಂಭಗೊಳ್ಳುತ್ತದೆ ಪ್ರತಿಯೊಬ್ಬರು ಕಾನೂನು ಪಾಲಿಸಲೇಬೇಕಾಗಿದೆ. ಪೋಷಕರು ಮಕ್ಕಳ ಆಸೆ ಪೊರೈಸಲು ವಾಹನ ಖರೀದಿಸಿ ನೀಡುವದರಿಂದ ಅತೀ ವೇಗದ ವಾಹನ ಚಾಲನೆಯಲ್ಲಿ 18 ರಿಂದ 21 ವಯಸ್ಸಿನ ಯುವಕರು ಕೈ, ಕಾಲು, ಮುರಿದುಕೊಳ್ಳುವ ದುರ್ಘಟನೆಗಳು ಹೆಚ್ಚು ನಡೆಯುತ್ತಿದ್ದು, ನಂತರ ಪೋಷಕರುಗಳು ನ್ಯಾಯಾಲಯದಲ್ಲಿ ಬಂದು ನಿಲ್ಲುವಂತಹ ಪ್ರಸಂಗ ಹೆಚ್ಚಾಗಿದೆ. ಆದ್ದರಿಂದ ಯುವಕರು, ಯುವತಿಯರು, ವಿದ್ಯಾರ್ಥಿಗಳು ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. ಇದನ್ನು ಪೋಷಕರು ನಿಯಂತ್ರಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್.ಪಿ.ನಾಗಪ್ಪ ಮಾತನಾಡಿ ಎಲ್ಲಾ ದೇಶಗಳನ್ನು ಹೋಲಿಸಿದರೆ ವಾಹನ ಅಪಘಾತದಲ್ಲಿ ಭಾರತದಲ್ಲಿ ಒಂದು ವರ್ಷಕ್ಕೆ 1 ಲಕ್ಷ 40 ಸಾವಿರ ಮಂದಿ ಕೈ, ಕಾಲು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಪ್ರತಿದಿನ ಸರಾಸರಿ 380 ಮಂದಿ ವಾಹನ ಚಾಲಕರು ಅಪಘಾತದಿಂದ ಮೃತಪಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ರಸ್ತೆ ನಿಯಮ ನಿಬಂಧನೆಗಳನ್ನು ಪಾಲಿಸಬೇಕು ಎಂದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮದುಲೈ ಮುತ್ತು ಮಾತನಾಡಿ, ಅತಿವೇಗದ ವಾಹನ ಚಾಲನೆ ದುರಂತಕ್ಕೆ ಕಾರಣವಾಗುವದು. ವಾಹನ ಚಾಲನೆಯಲ್ಲಿ ಯಾರೂ ಕಾನೂನನ್ನು ಉಲ್ಲಂಘನೆ ಮಾಡಬಾರದು ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಎನ್.ಕುಮಾರ್ ಆರಾಧ್ಯ ಹಾಗೂ ಗೋಣಿಕೊಪ್ಪ ಸಿ ಐ ಹರಿಶ್ಚಂದ್ರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ವೀರಾಜಪೇಟೆ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಇತರರು ಉಪಸ್ಥಿತರಿದ್ದರು. ಪೊನ್ನಂಪೇಟೆ ಸಬ್ಇನ್ಸ್ಪೆಕ್ಟರ್ ಮಹೇಶ್ ಸ್ವಾಗತಿಸಿ ನಿರೂಪಿಸಿದರು. ಪೊಲೀಸ್ ಇಲಾಖೆ ವತಿಯಿಂದ ಸಂಚಾರ ನಿರ್ವಹಣೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಾಕ್ಷಚಿತ್ರ ತೋರಿಸಲಾಯಿತು.