ಉಸ್ಬೇಕಿಸ್ತಾನ್ ಪ್ರವಾಸ ಪೂರ್ತಿ ಆ ದೇಶವನ್ನು ದಶಕಗಳ ಹಿಂದೆ ಆಳಿ ಪ್ರಸಿದ್ಧಿ ಪಡೆದಿದ್ದ ಮೊಘಲರ ಅರಸ ತಿಮೂರ್ ಹೆಸರು ಕೇಳಿ ಬರುತ್ತದೆ. ಅಲ್ಲಲ್ಲಿ ವೃತ್ತಗಳಲ್ಲಿ ಆತನ ಪುತ್ಥಳಿಗಳಿವೆ.

ಉಸ್ಬೇಕಿಸ್ತಾನ್ ತಲಪಲು ವಿಮಾನಗಳಿದ್ದರೂ ಬದಲಿಸಿ ತೆರಳುವದೇ ನಮಗೆ ಇಂದು ತ್ರಾಸದಾಯಕ. ಆದರೆ, ದಶಕಗಳ ಹಿಂದೆ ಮೊಘಲರು ಅಲ್ಲಿಂದ ಬಂದು ಭಾರತವನ್ನು ವಶಪಡಿಸಿಕೊಂಡು ಆಳಿದರೆಂದರೆ ನಂಬುವದು ಕಷ್ಟ ಸಾಧ್ಯ. ತಿಮೂರ್ ನಂತರದ ಮೊಘಲರು ಭಾರತವನ್ನು ಆಳಿದರು. ಅವರುಗಳಲ್ಲಿ ಅಕ್ಬರ್ ಕೂಡ ಒಬ್ಬ. ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಫರ್.

ಅಂದು ಮೊಘಲರು ವ್ಯವಸ್ಥಿತವಾಗಿ ದರ್ಗಾಗಳನ್ನು, ಮಸೀದಿಗಳನ್ನು, ದೇಶದ 6-7 ಕಡೆ ಗೋಲಾಕಾರದ ಗೋಪುರ ಸಮೂಹದ ಮಾರುಕಟ್ಟೆ ಆವರಣಗಳನ್ನು ನಿರ್ಮಿಸಿದ್ದರು. ಉತ್ತಮ ಆಡಳಿತಗಾರ ಹಾಗೂ ಗಟ್ಟಿಗ ಎನಿಸಿಕೊಂಡಿದ್ದ ಸಾಮ್ರಾಟ ತಿಮೂರ್ ಚೀನಾ, ಭಾರತ, ಪರ್ಷಿಯಾ, ಯೂರೋಪ್, ಸಮರ್ಖಂಡ್, ಬುಕಾರಾ ಮತ್ತು ತಾಷ್ಕೆಂಟ್ ಒಂದುಗೂಡಿಸಿ ವಾಣಿಜ್ಯ ಮಾರ್ಗ ನಿರ್ಮಿಸಿದ್ದ. ಅದನ್ನು ಸಿಲ್ಕ್ ರೋಟ್ ಎಂದು ಕರೆಯುತ್ತಾರೆ. ವಾಯು ಯಾನ ಆರಂಭಗೊಂಡ ಬಳಿಕ ಈ ಮಾರ್ಗ ಚೈತನ್ಯಹೀನ ವಾಯಿತು. ವಿದೇಶಿಯರು ಇಲ್ಲಿ ಬಂಡವಾಳ ಹೂಡುವಂತೆ ಸರಕಾರ ಆಹ್ವಾನಿಸಿದರೂ ಆತಂಕ, ಕಠಿಣ ಶರತ್ತುಗಳಿಂದಾಗಿ ಇನ್ನೂ ಯಾವ ಬಲಿಷ್ಠ ರಾಷ್ಟ್ರಗಳೂ ಇಲ್ಲಿ ಉದ್ಯಮ ಆರಂಭಿಸಿದಂತಿಲ್ಲ. ಪ್ರವಾಸ ಸಂದರ್ಭ ಅಲ್ಲಿಯವರೇ ಆದ ಮೂವರು ಪ್ರವಾಸಿ ಮಾರ್ಗದರ್ಶಕರಿದ್ದರು. ನಮ್ಮ ತಂಡದ ನಾಯಕರೊಂದಿಗೆ ಚರ್ಚಿಸಿ, ಮೊದಲೇ ಎಲ್ಲೆಡೆ ಸುತ್ತಾಡಿ ನಾವು ನೋಡಲು ಸಾಧ್ಯವಾಗುವ ಸ್ಥಳಗಳು, ಊಟ, ತಿಂಡಿ, ಶೌಚ ಸ್ಥಾನಗಳನ್ನೆಲ್ಲ ನಿಗಧಿ ಮಾಡಿದ್ದರು. ನಿಗಧಿತ ಸಮಯಕ್ಕೆ ಮುಂಚೇ ಎಲ್ಲಾ ನೂರು ಮಂದಿ ತಯಾರಾಗಿ ಬಸ್ಸು ಏರುತ್ತಿದ್ದೆವು. ಬಸ್ಸಿನಲ್ಲೇ ಮೈಕ್ ಹಿಡಿದು ಹೋಗಲಿರುವ ಸ್ಥಳಗಳ ಹಿನ್ನೆಲೆ ಮತ್ತು ಮಹಿಮೆಯನ್ನು ವಿವರಿಸುತ್ತಿದ್ದರು.

ಎರಡನೇ ದಿನದ ಪ್ರವಾಸದಲ್ಲಿ ಸ್ವಾತಂತ್ರ್ಯ ಸ್ಮಾರಕ, ಪ್ರಾಫೆಟ್ ಮಹಮ್ಮದ್‍ರ ಕೂದಲು ಇರಿಸಿರುವ ಮಸೀದಿ, ಪುರಾತನ ಕುರಾನ್ ಇರಿಸಿರುವ ಮ್ಯೂಸಿಜಿûಯಂಗೆ ಭೇಟಿ ನೀಡಿದೆವು. ಪುರಾತನ ಕುರಾನ್ ಪ್ರಾಫೆಟ್ ಮಹಮ್ಮದರ ಬಳಿಕದ ಇಮಾನ್ ಗಳಲ್ಲಿ ಒಬ್ಬರಾದ ಉಸ್ಮಾನ್ ಎಂಬವರು ಜಿಂಕೆಯ ಚರ್ಮದ ಮೇಲೆ ‘ಕ್ಯಾಲಿಗ್ರಾಫ್’ ಮಾದರಿ ಕೈಯ್ಯಲ್ಲೇ ಬರೆದುದು. ಆ ಗ್ರಂಥದಲ್ಲಿ ಏನಿಲ್ಲ, ವಿಜ್ಞಾನ, ಆಧ್ಯಾತ್ಮ, ಖಗೋಳ ಶಾಸ್ತ್ರ, ಗಣಿತಶಾಸ್ತ್ರ ಎಲ್ಲವೂ ಅಡಕವಾಗಿರುವ ಅದ್ಭುತ ಗ್ರಂಥವದು ಎಂದು ನಮ್ಮ ಪ್ರವಾಸೀ ಮಾರ್ಗದರ್ಶಕರು ಹೆಮ್ಮೆಯಿಂದ ಹೇಳುತ್ತಿದ್ದರು. ಆಗ ಮೊಘಲರು ನಿರ್ಮಿಸಿದ್ದ ಮಸೀದಿ, ದರ್ಗಾ ಇತ್ಯಾದಿ ಕಟ್ಟಡಗಳನ್ನು ಸೋವಿಯತ್ ಯೂನಿಯನ್ ಆಳ್ವಿಕೆ ಸಂದರ್ಭ ಕುದುರೆಲಾಯ ಆಗಿ, ವೈನ್ ಫ್ಯಾಕ್ಟರಿಗಳಾಗಿ ಬಳಸಿ ಹಾಳುಗೆಡಹಿತ್ತು. ಹಾಳಾದ ಸ್ಥಳಗಳ ಪುನಶ್ವೇತನ ಕಾರ್ಯ ಎಲ್ಲೆಲ್ಲೂ ನಡೆಯುತ್ತಿದೆ. ಹಾಗಾಗಿ ರಿಪೇರಿ ಕಾರ್ಯ ನಡೆಯುತ್ತಿದ್ದುದರಿಂದ ಪ್ರಾಫೆಟ್ ಮಹಮ್ಮದರ ತಲೆಕೂದಲು ನೋಡಲು ಸಾಧ್ಯವಾಗಲಿಲ್ಲ.

ಅಂದು ಮಧ್ಯಾಹ್ನ ಜುಮಾಂಜಿ ಎಂಬ ಹೊಟೇಲಿನಲ್ಲಿ ಅಪ್ಪಟ ಉಸ್ಬೇಕಿಸ್ತಾನ ಶೈಲಿ ಊಟ ತಯಾರಾಗಿತ್ತು. ಸಸ್ಯಹಾರಿಗಳಿಗೆಲ್ಲ ರೈಸ್ ಸೂಪ್ ಮುಖ್ಯ ಆಹಾರ. ರೈಸ್ ಸೂಪ್ ಎಂದಾದರೆ ದೊಡ್ಡ ಪಿಂಗಾಣಿ ಬಟ್ಟಲಿನಲ್ಲಿ ಅಕ್ಕಿ, ತರಕಾರಿ, ಕಾಳುಗಳು, ಬೇಳೆ ಹಾಕಿ ಬೇಯಿಸಿರುತ್ತಾರೆ. ಬಿಳಿ ಅನ್ನ ಪಡೆದ ಕೆಲವರು ಅದಕ್ಕೆ ಸೂಪನ್ನೇ ಸೇರಿಸಿ ತಿಂದರು. ಅದು ಬಿಟ್ಟರೆ ಬದನೆಕಾಯಿಯೂ ಸೇರಿದಂತೆ ವಿವಿಧ ತರಕಾರಿಗಳ ಸಲಾಡ್, ಮೊಸರು ಇತ್ಯಾದಿ ಸಾಕಷ್ಟು ಆಹಾರ ಲಭ್ಯವಿತ್ತು. ಮಾಂಸಾಹಾರಿಗಳೂ ಬಾಯಿ ಚಪ್ಪರಿಸುತ್ತಿದ್ದುದ್ದನ್ನು ನೋಡುವಾಗ ಅದರಲ್ಲೂ ವಿವಿಧ ಭಕ್ಷಗಳಿದ್ದವೆಂದು ಅನಿಸಿತು. ಇನ್ನು ಅಲ್ಲಿ ಯಾವದೇ ಎಣ್ಣೆಯಿಂದ ಕರಿದ ತಿಂಡಿ-ಸಿಹಿ ತಿಂಡಿಗಳಿಲ್ಲ. ಹೆಚ್ಚಿನವೆಲ್ಲಾ ಒಣ ಹಣ್ಣು ಮತ್ತು ಬ್ರೆಡ್ ಸಂಬಂಧಿತ ತಿಂಡಿಗಳೇ.

ಉಸ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟಿನಿಂದ ಮುಂದಿನ ಸುಂದರ ನಗರಗಳಾದ ಸಮರ್ಖಂಡ್ ಮತ್ತು ಬುಖಾರಾಕ್ಕೆ ಹೊರಟೆವು. ತಾಷ್ಕೆಂಟಿನಿಂದ ಬುಲ್ಲೆಟ್ ಟ್ರೈನಿನಲ್ಲಿ ಸಮರ್ಖಂಡ್‍ಗೆ 2.15 ಗಂಟೆಯ ಪಯಣ. ಸುಸಜ್ಜಿತ ಬುಲೆಟ್‍ಟ್ರೈನ್ ಗಂಟೆಗೆ 800 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ಆದರೆ, ನಾವು ಕುಳಿತಿದ್ದಾಗ ಸುಮಾರು 400 ಕಿಲೋಮೀಟರ್ ವೇಗದಲ್ಲಿ ಓಡುತ್ತಿದ್ದರೂ ಒಳಗೆ ಅದರ ಅರಿವಾಗುತ್ತಿರಲಿಲ್ಲ. ಏರೋಪ್ಲೇನಿನ ಗಗನ ಸಖಿಯರಂತೆ ಇಲ್ಲಿಯೂ ಸಖ, ಸಖಿಯರು ಟ್ರಾಲಿಯಲ್ಲಿ ಚಹಾ, ಕಾಫಿ, ತಿಂಡಿ ತಿನಿಸುಗಳನ್ನು ತಳ್ಳಿಕೊಂಡು ಬರುತ್ತಿದ್ದರು.

ಚಹಾ ಉಸ್ಬೇಕಿಸ್ತಾನದ ರಾಷ್ಟ್ರೀಯ ಪಾನೀಯ. ಇದನ್ನು ಪಿಂಗಾಣಿ ಬಟ್ಟಲಿನಲ್ಲಿ, ಎರಡು ಕೈಯ್ಯಲ್ಲಿ ಹಿಡಿದು ಪ್ರೀತಿಯಿಂದ ಕಣ್ಮುಚ್ಚಿ ಕುಡಿಯೋದೇ ಒಂದು ಆನಂದ. ಹೆಚ್ಚಾಗಿ ಸಕ್ಕರೆ ಇಲ್ಲದ ಹಸಿರು ಟೀ ಹಂಚುತ್ತಾರೆ. ಬುಲೆಟ್ ಟ್ರೈನಿನಲ್ಲೂ ಚಹ ಉಚಿತ. ಕಾಫಿಗೆ ಐದು ಸಾವಿರ ‘‘ಸೋಮ್ಸ್’’ ಅಂದರೆ ಹೆಚ್ಚು ಕಡಿಮೆ ಭಾರತದ ಐವತ್ತು ರೂಪಾಯಿ. ನಾವಿಲ್ಲಿ ಸಮೋಸ ಮಾಡುವಂತೆ ಅಲ್ಲಿ ‘ಸೋಮ್ಸ್’ ಎಂದು ಮಾಡುತ್ತಾರೆ. ಹೇಳಿದರೆ ತರಕಾರಿ, ಇಲ್ಲದಿದ್ದರೆ ಮಾಂಸವನ್ನು ಒಳಗೆ ಸೇರಿಸಿ ಕರಿದು ನೀಡುತ್ತಾರೆ. ಮತ್ತೊಂದು ಮಸಾಲೆ ದೋಸೆ ಮಾಡುವಂತೆ ಆಲೂಗೆಡ್ಡೆ ಬೇಯಿಸಿ, ನುಣ್ಣಗೆ ಕಲಸಿ ‘ರೋಲ್’ ಮಾಡಿಯೂ ನೀಡುತ್ತಾರೆ.

ಬುಲೆಟ್ ಟ್ರೈನ್ ನಿಲ್ದಾಣ ಸಾಮಾನ್ಯ ವಿಮಾನ ನಿಲ್ದಾಣದಂತೆಯೇ ಇದೆ. ಅಲ್ಲಲ್ಲಿ ಸೆಕ್ಯುರಿಟ್ ಚೆಕ್, ಲಗೇಜ್ ಚೆಕ್ ಇತ್ಯಾದಿ ಬಳಿಕ ಕಾದು ಕೂರಬೇಕು. ರೈಲು ಬಂದು 3 ರಿಂದ 5 ನಿಮಿಷ ಮಾತ್ರ ನಿಲ್ಲುತ್ತದಷ್ಟೆ. ಅಷ್ಟರೊಳಗೆ ಒಳಗಿಂದ ಇಳಿಯುವವರು ಬಂದು ಪ್ರಯಾಣ ಮಾಡುವವರು ಹತ್ತಿ ಆಗಬೇಕು. ಸಮಯ ಆದ ಕೂಡಲೇ ಬಾಗಿಲು ತನ್ನಷ್ಟಕ್ಕೇ ಮುಚ್ಚಿಕೊಳ್ಳುತ್ತದೆ.

ಸಮರ್ಖಂಡ್ ತಾಷ್ಕೆಂಟಿನಷ್ಟು ದೊಡ್ಡದಿಲ್ಲ. ದೊಡ್ಡ ಹೊಟೇಲ್‍ಗಳೂ ಇಲ್ಲ. ಹಾಗಾಗಿ ಇಲ್ಲಿ ನಮ್ಮ ತಂಡ ಎರಡು ಹೊಟೇಲ್‍ಗಳಲ್ಲಿ ಉಳಿಯಬೇಕಾಯಿತು. ಇಲ್ಲೆಲ್ಲ ಪುರಾತನ ಸಂಸ್ಕøತಿ ಎದ್ದು ಕಾಣುತ್ತದೆ. ಹತ್ತಾರು ಮಸೀದಿಗಳು, ದರ್ಗಾಗಳು, ಹೂದೋಟಗಳು ಇದ್ದು ಜನ ಪ್ರೀತಿಹರಿಸುತ್ತಾರೆ. ಹಿಂದಿನಿಂದ ಇದು ವಾಣಿಜ್ಯ ಮಾರ್ಗ ಆಗಿದ್ದುದ್ದರಿಂದ ಅಲ್ಲಲ್ಲಿ ಕುಟುಂಬಗಳೇ ನಡೆಸುವ ‘ಚಾೈಕಾನಾಸ್’ ಚಹಾ ಕೇಂದ್ರಗಳು ಕಾಣ ಬರುತ್ತವೆ. ಇಂತಹ ಹೆಚ್ಚಿನ ಹೊಟೇಲ್‍ಗಳಲ್ಲಿ ಮಹಿಳೆಯರೇ ತಯಾರು ಮಾಡುವ ಸಾಂಸ್ಕøತಿಕ ಆಹಾರ ಲಭ್ಯ. ಮಹಿಳೆಯರು, ಅದರಲ್ಲೂ ಮಧ್ಯ ವಯಸ್ಸು ದಾಟಿದವರು ಶ್ರಮಪಟ್ಟು ದುಡಿಯುತ್ತಾರೆ. ಆದರೂ ನಗುಮುಖ, ಸೌಜನ್ಯ, ಪ್ರೀತಿ ಎದ್ದು ಕಾಣುತ್ತದೆ. ಇಲ್ಲಿ ಎರಡು ರಾತ್ರಿ ಆತಿಥ್ಯ, ಸೂಫೀ ಸಂತರುಗಳ ಸ್ಥಳಗಳಿಗೆ ಭೇಟಿ, ಸತ್ಸಂಗ ಮುಗಿಸಿ ಬುಖಾರಾ ನಗರಕ್ಕೆ ಹೊರಟೆವು. ಅಲ್ಲಿಂದ ಮತ್ತೆ ಬುಲೆಟ್‍ಟ್ರೈನಿನ ಪಯಣ.

ಬುಖಾರಾ ಪ್ರವೇಶವೇ ಸುಂದರ. ಇಲ್ಲಿ ಎಡೆಬಿಡದೆ ಸೂಫೀ ನಕ್ಸ್‍ಬಂದಿ ಸಂತರ ಸ್ಥಳಗಳಿಗೆ ತೆರಳಿ ಹಾಡು-ಧ್ಯಾನಗಳಲ್ಲಿ ಕಳೆದೆವು. ಇಲ್ಲಿ ಮೂರು ಹೊಟೇಲ್‍ಗಳಲ್ಲಿ ಉಳಿಬೇಕಾಯಿತು. ಸುಂದರ ‘ಬeóÁರ್’ ಕಟ್ಟಡದ ಆವರಣದೊಳಗೆ ಹೊಟೇಲ್‍ಗಳಿದ್ದವು. ಉಸ್ಬೇಕಿಸ್ತಾನದ ಹಲವೆಡೆ ಇಂತಹ ಬeóÁರ್ ಕಟ್ಟಡಗಳಿವೆ. ಬೆಂಗಳೂರಿನ ಬರ್ಮಾ ಬeóÁರಿನಂತೆ ಒಳಗೊಳಗೇ ಸಣ್ಣ ಪುಟ್ಟ ಮಳಿಗೆಗಳಿರುತ್ತವೆ. ಇಲ್ಲಿ ಕನಿಷ್ಟ ದರದ ವಸ್ತುಗಳಿಂದ ಗರಿಷ್ಠದವರೆಗೆ ಸಾಮಾನ್ಯ ಎಲ್ಲಾ ವಸ್ತುಗಳೂ ದೊರೆಯುತ್ತವೆ. ನಾವು ಅಲ್ಲಿಂದ ಹೊರಡುವ ದಿನ ಅಲ್ಲಿ ಜನ-ಜಾತ್ರೆ ಏರ್ಪಟ್ಟಿತ್ತು. ನಗರವಿಡೀ ಸಂಬಾರ-ದಿನಸಿ ವಸ್ತುಗಳ ಘಮ ಹರಡಿತ್ತು. ಅಂದಿನಿಂದ ಒಂದು ವಾರ ಸಂಬಾರ-ದಿನಸಿ ವಸ್ತುಗಳ ಜಾತ್ರೆ. ಇಲ್ಲಿ ದಸರಾಕ್ಕೆ ಅಂಗಡಿ ಹಾಕಲು ಬರುವಂತೆ ದೂರದ ಹಳ್ಳಿಗಳಿಂದಲೂ ಪುಟ್ಟ ಮಕ್ಕಳು, ಮಹಿಳೆಯರು, ಕುಟುಂಬಗಳು ಸಂಸಾರ ಸಹಿತ ವ್ಯಾಪಾರಕ್ಕೆಂದು ಬಂದು ಠಿಕಾಣಿ ಹೂಡುತ್ತಿದ್ದ ದೃಶ್ಯ ಪುರಾತನ ದಿನಗಳನ್ನು ಜ್ಞಾಪಿಸುವಂತಿತ್ತು.

(ಮುಂದುವರಿಯುವದು) ? ಬಿ. ಜಿ. ಅನಂತಶಯನ