ಗೋಣಿಕೊಪ್ಪಲು, ಜೂ.30 : ಗ್ರಾಮೀಣ ಭಾಗದ ಕುಗ್ರಾಮವಾದ ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಬಡ್ಕ ಗ್ರಾಮಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಗ್ರಾಮಸ್ಥರೊಡನೆ ತೆರಳಿ ವೀಕ್ಷಣೆ ನಡೆಸಿದರು.ಇತ್ತೀಚೆಗೆ ನಡೆದ ವಿಧಾನಸಭೆಯ ಚುನಾವಣೆ ಸಂದರ್ಭ ಗೆದ್ದರೂ, ಸೋತರು ಈ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮವಹಿಸು ವದಾಗಿ ಮೇರಿಯಂಡ ಸಂಕೇತ್ ಪೂವಯ್ಯ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಸಂಜೆಯವರೆಗೆ ದಬ್ಬಡ್ಕ ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಗ್ರಾಮಸ್ಥರ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಮಾಹಿತಿ ಪಡೆದರು. ನಂತರ ದಬ್ಬಡ್ಕದ ಲ್ಲಿರುವ ಶ್ರೀದೇವಿ ಭಜನಾಮಂದಿರದಲ್ಲಿ ಗ್ರಾಮಸ್ಥರೊಂದಿಗೆ ಕುಂದುಕೊರತೆಯ ಸಭೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಈ ಸಂದರ್ಭ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ಮುಂದಿ ಟ್ಟರು. ಗ್ರಾಮದಲ್ಲಿ ನಡೆದಾಡಲು, ವಾಹನ ಸಂಚರಿಸಲು ಯೋಗ್ಯವಾದ ರಸ್ತೆಯಿಲ್ಲದೆ ಈ ಭಾಗದ ವಿದ್ಯಾರ್ಥಿ ಗಳು ಪ್ರತಿದಿನ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಕಾಡಾನೆ ಕಾಟದ ನಡುವೆಯು ಐದು ಕಿ.ಮೀ. ನಡೆದು ಶಾಲೆಗೆ ಹೋಗುವ ಪರಿಸ್ಥಿತಿಯಿದೆ. ಗ್ರಾಮದಲ್ಲಿ 181 ಕುಟುಂಬಗಳು, 380 ಮತದಾರರಿದ್ದರೂ ಈ ಭಾಗಕ್ಕೆ ಬಸ್ ವ್ಯವಸ್ಥೆಯಿಲ್ಲ. ಖಾಸಗಿ ಜೀಪ್‍ನಲ್ಲಿ ತಿಂಗಳಿಗೆ ಸಾವಿರದ ಐನೂರರಂತೆ ಹಣನೀಡಿ ಮಕ್ಕಳನ್ನು ವಿಧ್ಯಾಭ್ಯಾಸಕ್ಕೆ ಕಳುಹಿಸಬೇಕಾಗಿದೆ. ನದಿಯ ಎರಡು ಬದಿಯಲ್ಲಿಯೂ ಗ್ರಾಮಸ್ಥರು ವಾಸವಾಗಿದ್ದಾರೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಲು ಸಂಪರ್ಕ ಸೇತುವೆ ಇಲ್ಲದಾಗಿದೆ. ಮಳೆಗಾಲದಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಳ್ಳಲಿದೆ. ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಸಾಧ್ಯವಿಲ್ಲ. ಪಂಚಾಯತಿ ರಸ್ತೆಗಳೆಲ್ಲವೂ ಗುಂಡಿಬಿದ್ದು ವರ್ಷಗಳೇ ಕಳೆದಿವೆ ಎಂದು ಸಮಸ್ಯೆಗಳ ಸರಮಾಲೆಯನ್ನು ಮುಂದಿಟ್ಟರು.

ಜೆಡಿಎಸ್‍ನ ಮುಖಂಡರು ಮಾಜಿ ಪ್ರಧಾನರೂ ಆಗಿದ್ದ ಆದಂ ಈ ಭಾಗದ ಸಮಸ್ಯೆಗಳನ್ನು ಲಿಖಿತ ಮೂಲಕವಾಗಿ ಗ್ರಾಮಸ್ಥರ ಪರವಾಗಿ ಸಂಕೇತ್ ಪೂವಯ್ಯನವರಿಗೆ ನೀಡಿದರು.

ಎಂ.ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದಡ್ಕ-ಕಟ್ಟೆಪಾರೆ ರಸ್ತೆ ಅಭಿವೃದ್ಧಿ 1.ಕಿ.ಮೀ. ಆಶ್ರಮಶಾಲೆ ಕುದುರೆಪಾಯ- ಕಟ್ಟಪಳ್ಳಿ ಆಶ್ರಮಶಾಲೆ ರಸ್ತೆ ಅಭಿವೃದ್ಧಿ 10.ಕಿ.ಮೀ ಕುದುರೆಪಾಯ-ದೊಡ್ಡ ಕೂಗಲೆ ರಸ್ತೆ ಅಭಿವೃದ್ಧಿ 1.ಕಿ.ಮೀ ದಬಡ್ಕ, ಚೆಂಬು ಗ್ರಾಮದ ದಬಡ್ಕ-ಕೊಪ್ಪ ರಸ್ತೆ ಅಭಿವೃದ್ಧಿ 2.ಕಿ.ಮೀ, ದಬಡ್ಕ-ನಡುಬೆಟ್ಟು ರಸ್ತೆ ಅಭಿವೃದ್ಧಿ 2.ಕಿ.ಮೀ, ದಬಡ್ಕ-ಮುಕ್ಕಾಟಿ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ. ಯು.ಚೆಂಬು ಗ್ರಾಮದ ಕೂಡಡ್ಕ-ಪದ್ರಾಯ ಗದ್ದೆ ರಸ್ತೆ ಅಭಿವೃದ್ಧಿ 2.ಕಿ.ಮೀ, ಬಾಲಂಬಿ-ನಿಡುಂಬೆ ರಸ್ತೆ ಅಭಿವೃದ್ಧಿ 2.ಕಿ.ಮೀ, ಅನ್ಯಾಳ-ದೊಡ್ಕಜೆ ರಸ್ತೆ ಅಭಿವೃದ್ಧಿ 1.5ಕಿ.ಮೀ, ಅನ್ಯಾಳ ಹೈಸ್ಕೂಲ್ ರಸ್ತೆ ಅಭಿವೃದ್ಧಿ 2.ಕಿ.ಮೀ, ಅನ್ಯಾಳ ಉಳ್ಳಾಕುಲು-ಧರ್ಮದೈವ ದೇವಸ್ಥಾನ ರಸ್ತೆ ಅಭಿವೃದ್ಧಿ 1.5ಕಿ.ಮೀ ಅಭಿವೃದ್ಧಿ, ಧನಂಜಯ ಮತ್ತು ಕೃಷ್ಣನಾಯಕ ಮನೆಗೆ ಹೋಗುವ ತೂಗುಸೇತುವೆ ನಿರ್ಮಾಣಕ್ಕೆ ಕ್ರಮವಹಿಸಬೇಕೆಂದು ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಸಂಕೇತ್ ಅವರು ಈ ಭಾಗದಲ್ಲಿ ಚುನಾವಣಾ ಸಂದರ್ಭ ಮತ ಬಹಿಷ್ಕಾರ ಮಾತು ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ತನ್ನೊಂದಿಗೆ ಗ್ರಾಮಸ್ಥರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದೆ. ಗ್ರಾಮಸ್ಥರು ಮಾತಿಗೆ ಗೌರವ ನೀಡಿ ಮತದಾನದಲ್ಲಿ ಪಾಲ್ಗೊಂಡಿದ್ದೀರಿ, ಕೊಟ್ಟ ಮಾತಿನಂತೆ ಸೋತರೂ ಪಕ್ಷ ಅಧಿಕಾರದಲ್ಲಿರುವದರಿಂದ ಈ ಭಾಗದ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇನೆ. ತಾವು ನೀಡಿದ ಮನವಿಪತ್ರವನ್ನು ಸಂಬಂಧಪಟ್ಟ ಮಂತ್ರಿಗಳೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಹದಿನೈದು ದಿನದ ಒಳಗೆ ಮತ್ತೆ ಗ್ರಾಮಕ್ಕೆ ಆಗಮಿಸಿ ಕಾರ್ಯ ಕ್ರಮದ ವಿವರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದರು.

ಭೇಟಿ ಸಂದರ್ಭ ಗ್ರಾಮದ ಪ್ರಮುಖರಾದ ಕಿರ್ಲೆಯ ಆನಂದ, ಕೊಪ್ಪದ ಪೂವಯ್ಯ, ಪನ್ನೆಡ್ಕ ಪೊನ್ನಪ್ಪ, ಕೆದಂಬಾಡಿ ಮನೋಜ್ ಕುಮಾರ್, ಕೊಪ್ಪದ ಭುವನೇಶ್ವರ, ಬಾಲಂಬಿ ಚೆನ್ನಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಗಾಯಿತ್ರಿ, ಜೆಡಿಎಸ್‍ನ ಜಿಲ್ಲಾ ಉಪಾಧ್ಯಕ್ಷರಾದ ತಿರುಮಲ ಸಂಪಾ ಸೋನ, ಗಿರೀಶ್ ಹೊಸೂರು ಸೇರಿದಂತೆ ಹಲವು ಪ್ರಮುಖರು ಇದ್ದರು.