ಸೋಮವಾರಪೇಟೆ, ಜೂ. 24: ಮದುವೆಗೆ ಆಗಮಿಸಿದ ಇತ್ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ಇಂದು ಸಂಭವಿಸಿದೆ. ವಿವಾಹದ ಸಂಭ್ರಮದಲ್ಲಿದ್ದವರು ನಂತರ ಬಡಿದಾಡಿಕೊಂಡಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದೆ.

ತಾಲೂಕಿನ ಬೀಟಿಕಟ್ಟೆ ಗ್ರಾಮದ ಯುವತಿ ಹಾಗೂ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ಯುವಕನ ವಿವಾಹ ಆರತಕ್ಷತೆ ಇಲ್ಲಿನ ಮಾನಸ ಸಭಾಂಗಣದಲ್ಲಿ ಏರ್ಪಟ್ಟಿದ್ದು, ಇದರಲ್ಲಿ ಭಾಗಿಯಾಗಿದ್ದ ವಧು-ವರನ ಕಡೆಯವರಿಗೆ ಕ್ಷುಲ್ಲಕ ವಿಚಾರಕ್ಕೆ ಘರ್ಷಣೆ ಸಂಭವಿಸಿದೆ.

ವರನ ಕಡೆಯವರು ವಧುವಿನ ಕಡೆಯವರಿಗೆ ಹೊಡೆದಿದ್ದು, ಪ್ರತಿಯಾಗಿ ವರನ ಕಡೆಯವರಿಗೂ ಪೆಟ್ಟು ಬಿದ್ದಿದೆ. ಈ ಸಂದರ್ಭ ಇತರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.

ನಂತರ ವರನ ಕಡೆಯವರು ಬಸ್‍ನಲ್ಲಿ ಪಾಲಿಬೆಟ್ಟಕ್ಕೆ ತೆರಳುವ ಸಂದರ್ಭ ಸಮೀಪದ ಕೋವರ್‍ಕೊಲ್ಲಿ ಬಳಿ ಬಸ್‍ನ್ನು ಅಡ್ಡಗಟ್ಟಿದ ವಧುವಿನ ಕಡೆಯವರು, ಕೆಲ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೆಲವರು ಮಡಿಕೇರಿ ರಸ್ತೆಯಲ್ಲಿ ಓಡಿದರೆ, ಉಳಿದವರು ಕುಶಾಲನಗರ ರಸ್ತೆಯತ್ತ ಓಟಕಿತ್ತಿದ್ದಾರೆ. ನಡುರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಮಾರಾಮಾರಿಯಲ್ಲಿ ತೊಡಗಿದ್ದ ಗುಂಪಿನಿಂದಾಗಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಪ್ರಯಾಣಿಕರು ಮಾಹಿತಿ ಒದಗಿಸಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಕೈಗೆ ಸಿಕ್ಕಿದವರನ್ನು ಎತ್ತಾಕಿಕೊಂಡು ಠಾಣೆಗೆ ಕರೆತಂದು ಉಪಚರಿಸಿದ್ದಾರೆ.