ಸೋಮವಾರಪೇಟೆ, ಜೂ.25: ನಗರೋತ್ಥಾನ ಯೋಜನೆಯಡಿ ರೂ.1 ಕೋಟಿ 70ಲಕ್ಷ ವೆಚ್ಚದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ರೂ. 29.16ಲಕ್ಷ ವೆಚ್ಚದಲ್ಲಿ ಇಲ್ಲಿನ ವಲ್ಲಭಭಾಯಿ ಬಡಾವಣೆಯಲ್ಲಿ ಕಾಂಕ್ರೀಟ್ ಹಾಗೂ ಡಾಂಬರು ರಸ್ತೆ ನಿರ್ಮಾಣ, 11.82 ಲಕ್ಷ ವೆಚ್ಚದಲ್ಲಿ ಮಹದೇಶ್ವರ ಬಡಾವಣೆಯಲ್ಲಿ ಡಾಂಬರು, ಕಾಂಕ್ರೀಟ್ ರಸ್ತೆ ನಿರ್ಮಾಣ, ರೂ. 25 ಲಕ್ಷ ವೆಚ್ಚದಲ್ಲಿ ನೀರು ಸಂಗ್ರಹಣಾ ತೊಟ್ಟಿ, ವೆಂಕಟೇಶ್ವರ ಬ್ಲಾಕ್ ಮತ್ತು ಬಸವೇಶ್ವರ ರಸ್ತೆಗೆ 50 ಸಾವಿರ ಲೀಟರ್ ಸಾಮಥ್ರ್ಯದ ನೀರು ಸಂಗ್ರಹಣಾ ತೊಟ್ಟಿ ನಿರ್ಮಾಣ, ಮಾರುಕಟ್ಟೆ ಸಮೀಪದಲ್ಲಿ ಪೂರಕ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪಟ್ಟಣದಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರೂ.90ಲಕ್ಷ ವೆಚ್ಚದಲ್ಲಿ ಈಗಿನ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅತ್ಯಾಧುನಿಕ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವದು. ಮೇಲ್ಬಾಗದಲ್ಲಿ ಸಂತೆ ಮಾರುಕಟ್ಟೆ ನಡೆಯಲಿದೆ. ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸುತ್ತಿರುವದರಿಂದ ನಗರದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಇದರೊಂದಿಗೆ ಪಂಚಾಯಿತಿಯ ಆದಾಯವು ಹೆಚ್ಚಲಿದೆ ಎಂದು ಅಭಿಪ್ರಾಯಿಸಿದರು.
ಯಾವದೇ ಕಾಮಗಾರಿ ಕಳಪೆಯಾಗಬಾರದು, ಈ ನಿಟ್ಟಿನಲ್ಲಿ ಆಯಾ ಭಾಗದ ಸಾರ್ವಜನಿಕರೇ ಎಚ್ಚರಿಕೆ ವಹಿಸಬೇಕು. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭ ಪ.ಪಂ. ಅಧ್ಯಕ್ಷೆ ಬಿ.ಎಸ್. ವಿಜಯಲಕ್ಷ್ಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಪ.ಪಂ. ಸದಸ್ಯರು, ಮುಖ್ಯಾಧಿಕಾರಿ ನಾಚಪ್ಪ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.