ಗೋಣಿಕೊಪ್ಪ ವರದಿ, ಜೂ. 23: ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ವತಿಯಿಂದ ಒಲಿಂಪಿಕ್ ಡೇ ಪ್ರಯುಕ್ತ ನಡೆದ ಒಲಿಂಪಿಕ್ ಓಟದಲ್ಲಿ ಕೊಡಗಿನ ಒಂದು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡರು.

ರಸ್ತೆ ಓಟವನ್ನು ಅಥ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಅದಿಲೆ ಸುಮಿರವಾಲಾ, ಟಾಟಾ ಕಾಫಿ ಲಿಮಿಟೆಡ್‍ನ ಪ್ಲಾಂಟೇಶನ್ ವಿಭಾಗದ ಹಿರಿಯ ವ್ಯವಸ್ಥಾಪಕ ಎಂ. ಬಿ. ಗಣಪತಿ, ನಿವೃತ್ತ ಅಂತರಾಷ್ಟ್ರೀಯ ಬ್ಯಾಡ್‍ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ ಉದ್ಘಾಟಿಸಿದರು.

ಕಾಲ್ಸ್ ಶಾಲಾ ಆವರಣದಿಂದ ಆರಂಭಗೊಂಡ ಓಟ ಗೋಣಿಕೊಪ್ಪ, ಅತ್ತೂರು ಮಾರ್ಗವಾಗಿ ನಡೆಯಿತು. 14 ವಯಸ್ಸು ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ಓಟದಲ್ಲಿ ಪಾಲ್ಗೊಂಡರು. 5 ಹಾಗೂ 10. ಕಿ. ಮೀ. ಎಂಬ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಓಟ ನಡೆಯಿತು. 10 ಕಿ. ಮೀ. ಓಟವು ಕಾಲ್ಸ್ ಗೋಣಿಕೊಪ್ಪ, ಅತ್ತೂರು, ಕಾಲ್ಸ್ ಶಾಲೆ, 5 ಕಿ. ಮೀ. ಓಟವು ಗೋಣಿಕೊಪ್ಪ ಪಟ್ಟಣದ ಮಾರ್ಗವಾಗಿ ಕಾಲ್ಸ್ ಶಾಲೆಯಲ್ಲಿ ಕೊನೆಗೊಂಡಿತು.

ಗೋಣಿಕೊಪ್ಪ ಲಯನ್ಸ್, ಕಾಪ್ಸ್, ಅಮ್ಮತ್ತಿ ಗುಡ್ ಶೆಫರ್ಡ್, ಅರ್ವತೋಕ್ಲು ಸರ್ವಧೈವತಾ, ಹೆಗ್ಗಳ ಸರ್ಕಾರಿ ಪ್ರೌಢÀಶಾಲೆ, ಪೊನ್ನಂಪೇಟೆ ಸಾಯಿಶಂಕರ್, ಪೊನ್ನಂಪೇಟೆ ಸೆಂಟ್ ಆಂಥೋನಿ, ಪೊನ್ನಂಪೇಟೆ ಸಂತ ಆಂಥೋನಿ, ಹಳ್ಳಿಗಟ್ಟು ಸಿಐಟಿ, ಗೋಣಿಕೊಪ್ಪ ಪ್ರೌಢÀಶಾಲೆ, ಸರ್ಕಾರಿ ಪ್ರೌಢಶಾಲೆ, ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ಹಾಗೂ ಅರಮೇರಿ ಎಸ್‍ಎಂಎಸ್ ಶಾಲೆಗಳ ಸುಮಾರು 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಮಕ್ಕಳೊಂದಿಗೆ ಓಟದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಅಶ್ವಿನಿ ಸ್ಪೋಟ್ಸ್ ಫೌಂಡೇಷನ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಪ್ರಾಂಶುಪಾಲೆ ಗೌರಮ್ಮ, ತರಬೇತುದಾರ ಚೇತನ್ ಉಪಸ್ಥಿತರಿದ್ದರು.