ಕೂಡಿಗೆ, ಜೂ. 23: ಕುಶಾಲನಗರ ಹೋಬಳಿ ವ್ಯಾಪ್ತಿಯು ಅರೆಮಲೆನಾಡು ಪ್ರದೇಶವಾಗಿದ್ದು, ಈ ಭಾಗದ ಸಿದ್ಧಲಿಂಗಪುರ, ತೊರೆನೂರು, ಅಳುವಾರ, 6ನೇ ಹೊಸಕೋಟೆ, ಸೀಗೆಹೊಸೂರು, ಚಿಕ್ಕತ್ತೂರು, ದೊಡ್ಡತ್ತೂರು ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಮಳೆಯಾಶ್ರಿತವಾಗಿ ಮುಸುಕಿನ ಜೋಳವನ್ನು ಬೆಳೆಯಲಾಗುತ್ತಿದೆ.

ಆದರೆ, ಈ ಸಾಲಿನಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ಉಳುಮೆ ಮಾಡಿದ ಭೂಮಿಗೆ ಮರು ಉಳುಮೆ ಮಾಡಿ, ಮುಸುಕಿನ ಜೋಳ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಜೋಳ ಬಿತ್ತನೆಗೆ ಹುಡಿಮಣ್ಣು ಯೋಗ್ಯವಾಗಿದ್ದು, ಜೋಳ ಬಿತ್ತನೆ ಮಾಡಲು ಹದವಾಗಿರುತ್ತದೆ. ಕಳೆದ ತಿಂಗಳಿನಿಂದ ಒಂದೆರಡು ದಿನ ಬಿಡುವುಕೊಟ್ಟರು ನಂತರ ಅಧಿಕವಾಗಿ ಮಳೆ ಸುರಿಯುತ್ತಿರುವದರಿಂದ ಜಮೀನಲ್ಲಿ ಜೋಳ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಅರ್ಧಭಾಗದಷ್ಟು ರೈತರು ಸಹಕಾರ ಸಂಘಗಳಿಂದ ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಖರೀದಿಸಿ ಬಿತ್ತನೆ ಮಾಡಲಾಗಿದ್ದರೂ ಮಳೆಯ ಪರಿಣಾಮದಿಂದಾಗಿ ಅರ್ಧದಷ್ಟು ಜೋಳ ಮೊಳಕೆ ಒಡೆಯದೆ ನೀರಿನಲ್ಲಿ ಕರಗುತ್ತಿದೆ. ಇದೀಗ ರೈತರು ಇತ್ತ ಜೋಳ ಬಿತ್ತನೆ ಮಾಡಲು ಮಳೆ ಬಿಡುವು ಕೊಡುವದನ್ನು ಕಾಯುತ್ತಿದ್ದಾರೆ.

ಕೃಷಿ ಇಲಾಖೆ ವತಿಯಿಂದ ಪರಿಷ್ಕøತಗೊಂಡ ಜೋಳವನ್ನು ಸಹಕಾರ ಸಂಘಗಳ ಮೂಲಕ ಸಮರ್ಪಕವಾಗಿ ರೈತರಿಗೆ ನೀಡಲಾಗಿದೆ. ಆದರೆ, ಮಳೆ ಹೆಚ್ಚಾದ್ದರಿಂದ ರೈತರು ಜೋಳವನ್ನು ಬಿತ್ತನೆ ಮಾಡಿಲ್ಲ. ಇಲಾಖೆಯ ವತಿಯಿಂದ ರೈತರಿಗೆ ಇನ್ನು ಹೆಚ್ಚು ಸಹಕಾರ ನೀಡಲಾಗುವದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್ ಅಳುವಾರದ ಜೋಳ ಬಿತ್ತನೆ ಮಾಡದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ತಿಳಿಸಿದರು.