ಗೋಣಿಕೊಪ್ಪ ವರದಿ, ಜೂ. 20: ಜಿಲ್ಲೆಯ ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮೇಲ್ವಿಚಾರಣೆಗೆ ಒಳಪಡಿಸಿರುವ ಕ್ರಮವನ್ನು ಖಂಡಿಸಿ ತಾ. 29 ರಂದು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚೇಂದೀರ ಕಾವೇರಮ್ಮ ತಿಳಿಸಿದ್ದಾರೆ.

ರಾಜ್ಯದ ಎಲ್ಲಿಯೂ ಜಾರಿಗೆ ತರದ ಇಂತಹ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರುವದರಿಂದ ನೌಕರರು ಸಂಕಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುವದರಿಂದ ಯೋಜನೆ ಕೈಬಿಡುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೌಕರರ ಸಂಘದಿಂದ ಈ ಬಗ್ಗೆ ಗೋಣಿಕೊಪ್ಪ ಕಾವೇರಿ ಮಹಿಳಾ ಸಮಾಜದಲ್ಲಿ ಪೂರ್ವಭಾವಿ ಸಭೆ ನಡೆಸಿ ನಿರ್ಧರಿಸಲಾಗಿದೆ. ಸುಮಾರು 300 ಕ್ಕೂ ಹೆಚ್ಚು ನೌಕರರು ಸಭೆಯಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎಂದರು.

ಅಂಗನವಾಡಿ ಮೂಲಕ ಮಕ್ಕಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರದ ಯೋಜನೆಯನ್ನು ಮಕ್ಕಳ ಪೋಷಕರ ಖಾತೆಗೆ ನಗದು ರೂಪದಲ್ಲಿ ನೀಡುವದನ್ನು ಕೂಡ ಖಂಡಿಸಲಾಗುತ್ತಿದೆ. ಇದರಿಂದ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಲಿದ್ದಾರೆ. ಪೋಷಕರು ಆಹಾರ ಖರೀದಿಸುವ ಬಗ್ಗೆ ಅನುಮಾನವಿದೆ. 42 ವರ್ಷಗಳ ನಂತರ ಇಂತಹ ಯೋಜನೆ ಮೂಲಕ ತೊಂದರೆ ನೀಡಲಾಗುತ್ತಿದೆ. 2013 ರಲ್ಲಿ ಇಂತಹದ್ದೆ ನಿಯಮ ಜಾರಿಗೆ ಮುಂದಾಗಿದ್ದಾಗ ಪ್ರತಿಭಟಿಸಿ ಕೈಬಿಡಲಾಗಿತ್ತು ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ದುರ್ಗಪ್ರಸಾದ್ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರದ ಮೂಲಕ ಶಿಕ್ಷಣ ನೀಡುವ ಮಹತ್ವದ ಯೋಜನೆಯನ್ನು ಕೈಬಿಡುವ ಹುನ್ನಾರವಾಗಿ ಗ್ರಾಮ ಪಂಚಾಯಿತಿಗಳಿಗೆ ಮೇಲ್ವಿಚಾರಣೆ ನೀಡಲಾಗುತ್ತಿದೆ. ಪಂಚಾಯಿತಿ ವತಿಯಿಂದ ನೌಕರರನ್ನು ಸತಾಯಿಸುವ ಕೆಲಸ ನಡೆಯುವ ಆತಂಕವಿದೆ. ಇದು ನೌಕರರ ಮೇಲೆ ನಡೆಯುವ ಅಕ್ರಮ ಎಂದರು.

ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಮಿತ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಎಸ್.ಎಂ. ಸಾವಿತ್ರಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.