ಮಡಿಕೇರಿ, ಜೂ. 19: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಗೊಂಡಿರುವ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ ಕರ್ನಾಟಕ ರಾಜ್ಯದ ನೂತನ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಕೊಡಗಿನ ಗಡಿಭಾಗ ಸಂಪಾಜೆಯಲ್ಲಿ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.

ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದ ರೈತರಿಗಾಗಿರುವ ಅಪಾರ ನಷ್ಟವನ್ನು ಕೂಡಲೇ ಕೊಡಿಸಿಕೊಡುವಂತೆ, ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಯಿತು. ರೈತರಿಗೆ ನೂತನವಾಗಿ ಸಾಲ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತೀವ್ರ ಕಷ್ಟವಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು. ಆನೆ ಮಾನವ ಸಂಘರ್ಷದಲ್ಲಿ ಅಂಗವೈಫಲ್ಯತೆ ಕಂಡಿರುವ ಕುಟುಂಬಗಳಿಗೆ ವಿಶೇಷ ಪರಿಹಾರ ಒದಗಿಸುವಂತೆ ಹಾಗೂ ಆನೆ ಮಾನವ ಸಂಘರ್ಷವನ್ನು ತಪ್ಪಿಸಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಶೇಷ ವರದಿ ತರಿಸಿಕೊಳ್ಳಲು ಮನವಿ ಮಾಡಲಾಯಿತು.

ದ.ಕೊಡಗಿಗೆ ಮಾರಕವಾಗಿರುವ ರೈಲ್ವೆ ಯೋಜನೆಯ ವಿಚಾರದಲ್ಲಿ ಸರ್ವೆ ಕಾರ್ಯ ನಡೆಸಲು ಮುಂದಾಗಿದೆ. ಯಾವದೇ ಕಾರಣಕ್ಕೂ ದ. ಕೊಡಗಿನ ಮೂಲಕ ರೈಲ್ವೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಹಕರಿಸದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳುವಂತೆ, ಮನವಿ ಪತ್ರವನ್ನು ಇದೇ ಸಂದರ್ಭ ನೀಡಲಾಯಿತು. ಕಾರ್ಮಿಕ ಜಿಲ್ಲಾ ಅಧ್ಯಕ್ಷ ಪರ್ಮಾಲೆ ಗಣೇಶ್, ಕ್ಷೇತ್ರ ಅಧ್ಯಕ್ಷ, ಮತೀನ್,ನಗರ ಅಧ್ಯಕ್ಷ ಮಂಜುನಾಥ್, ಯುವ ಜೆಡಿಎಸ್ ಅಧ್ಯಕ್ಷ ಅಮ್ಮಂಡ ವಿವೇಕ್, ಮುಖಂಡರಾದ ನೂರ್ ಅಹಮದ್, ಎಸ್.ಎನ್. ರಾಜಾರಾವ್, ಸಂಜಯ್, ವಿಶ್ವ, ಕೆ.ಎಂ.ಬಿ. ಗಣೇಶ್, ಅಧಿಕಾರಿಗಳಾದ ವಿನಯ್ ಕುಮಾರ್, ಎಇಇ ಇಬ್ರಾಹಿಂ, ಉಪಸ್ಥಿತರಿದ್ದರು.