ಪೊನ್ನಂಪೇಟೆ: ವಿಶ್ವ ಪರಿಸರ ದಿನಾಚರಣೆಯನ್ನು ವೀರಾಜಪೇಟೆಯ ಪ್ರಗತಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಗೆ ನೈಜತೆ ಕಲ್ಪಿಸಿದರಲ್ಲದೆ, ಪರಿಸರ ಸಂರಕ್ಷಣೆಯ ಬಗ್ಗೆ ಶಾಲೆಯಲ್ಲಿ ದಿನವಿಡೀ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಶಾಲಾ ಆವರಣದಲ್ಲಿ ಗಿಡವೊಂದನ್ನು ಸಾಂಕೇತಿಕವಾಗಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲೆ ದೊಡ್ಡ ಪ್ರಮಾಣದಲ್ಲಿದೆ. ಇದನ್ನು ಅರಿತುಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಪೀಳಿಗೆ ಬಹುದೊಡ್ಡ ದಂಡ ತೆರಬೇಕಾದಿತು ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಹಾಗೆಯೇ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಲು ವಿದ್ಯಾರ್ಥಿಗಳು ಈಗಿನಿಂದಲೇ ಪಣತೊಡಬೇಕು. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಿಂಗಳಿಗೆ ಒಂದೊಂದು ಗಿಡ ನೆಡುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ಎಂ.ಎಸ್. ಪೂವಯ್ಯ, ತುಂಗಾ ಪೂವಯ್ಯ ಸೇರಿದಂತೆ ಶಿಕ್ಷಕರು, ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಶನಿವಾರಸಂತೆ: ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನದ ಪ್ರಯುಕ್ತ ಹೊಸಳ್ಳಿ ಟಾಟಾ ಕಾಫಿ ಸಂಸ್ಥೆ ಹಾಗೂ ಶಾಲೆಯ ವತಿಯಿಂದ ಶಾಲಾ ಮೈದಾನದ ಸುತ್ತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಕಾಫಿ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಪೂಣಚ್ಚ, ಬೋಪಯ್ಯ, ಶಾಲಾ ಮುಖ್ಯ ಶಿಕ್ಷಕಿ ಗೌತಮಿ ಅಶೋಕ್, ಕವಿತ ಹಾಗೂ ತೋಟದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿದ್ದರು.*ಗೋಣಿಕೊಪ್ಪಲು: ಫಾರೆಸ್ಟ್ ಕನ್ಸರ್ವೆಷನ್ ಸೊಸೈಟಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಿತಿಮತಿ ವಲಯದ ದೇವಮಚ್ಚಿ, ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 200 ಪ್ರಬೇಧದ ಸಸಿಗಳನ್ನು ನೆಡಲಾಯಿತು.

ಗೋಣಿಕೊಪ್ಪಲು ಕಾಪ್ಸ್ ಶಾಲೆಯ ಎನ್.ಸಿ.ಸಿ. ಮತ್ತು ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಅರಣ್ಯದಲ್ಲಿ ಗಿಡಗಳನ್ನು ನೆಟ್ಟರು. ತಿತಿಮತಿ ವಲಯ ಅರಣ್ಯಾಧಿಕಾರಿ ಶಿವಶಂಕರ್ ಅರಣ್ಯದ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು, ಫಾರೆಸ್ಟ್ ಕನ್ಸರ್ವೆಷನ್ ಸೊಸೈಟಿ ಪದಾಧಿಕಾರಿಗಳು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.