ಗೋಣಿಕೊಪ್ಪ ವರದಿ, ಜೂ. 14 : ಕಾಕೂರು ಗ್ರಾಮದ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡಿನಿಂದಾಗಿ ಲಕ್ಷಾಂತರ ಮೌಲ್ಯದ ಬೆಳೆನಾಶವಾಗಿದೆ. ಅಲ್ಲಿನ ಕಳ್ಳಿಚಂಡ ವಿಷ್ಣು ಹಾಗೂ ಬಲ್ಲಡಿಚಂಡ ಪೂಣಚ್ಚ ಎಂಬವರ ತೋಟವನ್ನು ನಾಶ ಮಾಡಿವೆ. ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆಗೆ ಮಳೆ ತೊಡಕಾಗಿದೆ.

ಕಳೆದೊಂದು ದಿನದಿಂದ ಸುಮಾರು 12 ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ಪೂಣಚ್ಚ ಅವರ 3.5 ಏಕ್ರೆ ಬಾಳೆ ತೋಟವನ್ನು ಸಂಪೂರ್ಣವಾಗಿ ತಿಂದು ಹಾಕಿದೆ. ಜಾಗದಲ್ಲಿ ನೇಂದ್ರ ಬಾಳೆ ನೆಟ್ಟು ಉತ್ತಮ ಫಸಲು ಬಂದಿತ್ತು. 400 ಬಾಳೆ ಗಿಡ, 250 ಕಾಫಿ ಗಿಡಗಳನ್ನು ನಾಶ ಪಡಿಸಿವೆ. ಇದರಿಂದ 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.

ಉಳಿದಂತೆ ಗ್ರಾಮದ ಕಾಫಿ ತೋಟದಲ್ಲಿ ಸೇರಿಕೊಂಡು ಗಿಡಗಳನ್ನು ನಾಶ ಮಾಡಿವೆ. ಧಾರಕಾರ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗಿದೆ. ಬೆಳ್ಗಗೆಯಿಂದಲೇ ಸುಮಾರು 12 ಜನರ ತಂಡ ಕಾರ್ಯಾ ಚರಣೆ ನಡೆಸಿದರು. ವಾಹನ ಸಂಚಾರ, ಜನರಿಗೆ ತೊಂದರೆಯಾಗದಿರಲಿ ಎಂದು ರಾತ್ರಿ ಕಾಡಿಗಟ್ಟುವ ಪ್ರಯತ್ನ ನಡೆಸಲಾಗುವದು ಎಂದು ಆರ್‍ಎಫ್‍ಒ ವೀರೇಂದ್ರಕುಮಾರ್ ತಿಳಿಸಿದ್ದಾರೆ. -ವರದಿ : ಸುದ್ದಿಪುತ್ರ