ಮಡಿಕೇರಿ, ಜೂ. 14: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಪ್ರಸಕ್ತ ಮುಂಗಾರು ಮಳೆಗಾಲ ಎದುರಿಸಲು ನಗರಸಭಾ ಆಡಳಿತ ಸನ್ನದ್ಧಗೊಂಡಿದೆ. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಈ ದಿಸೆ ಯಲ್ಲಿ ಸೂಕ್ತ ಮುಂಜಾ ಗೃತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆ ಮೇರೆಗೆ ಆಯುಕ್ತೆ ಶುಭಾ ಅವರು ಇರುವಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೊಡಗಿಸಿ ಕೊಂಡು ಮಳೆ ಹಾನಿ ಯಿಂದ ಸಂಭವಿಸಬಹು ದಾದ ಪರಿಸ್ಥಿತಿ ಎದುರಿ ಸುವಲ್ಲಿ ಕಾರ್ಯೋನ್ಮುಖ ರಾಗಿದ್ದಾರೆ.

ಈಗಾಗಲೇ ರಾಣಿಪೇಟೆ, ಜೂನಿಯರ್ ಕಾಲೇಜು, ಜಿಲ್ಲಾಧಿಕಾರಿ ಬಂಗಲೆ ಬಳಿ ಎದುರಾಗಿದ್ದ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಅಲ್ಲಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರದಂಥ ಪ್ರದೇಶಗಳಲ್ಲಿ ಬರೆ ಕುಸಿತದಿಂದ ಉಂಟಾಗಲಿದ್ದ ಹೆಚ್ಚಿನ ಸಮಸ್ಯೆ ತಪ್ಪಿಸಲು 20 ಟಾರ್ಪಲುಗಳನ್ನು ಖರೀದಿಸಿದ್ದು, ಮಣ್ಣು ಕುಸಿತ ತಡೆಗೆ ಅವುಗಳನ್ನು ಬಳಸಲಾಗುವದು ಎಂದು ಅವರು ವಿವರಿಸಿದ್ದಾರೆ.

ಆಸರೆಗೆ ಅರಿವು: ಅಪಾಯಕಾರಿ ಜನವಸತಿಗಳಿಗೆ ಆಯಾ ವಾರ್ಡ್‍ನ ಜನಪ್ರತಿನಿಧಿಗಳೊಂದಿಗೆ ಜನರಲ್ಲಿ ಅರಿವು ಮೂಡಿಸಲಾಗಿದ್ದು, ಅಗತ್ಯ ಸಂದರ್ಭ ಸಮುದಾಯ ಭವನಗಳು, ಅಂಗನವಾಡಿ ಕೇಂದ್ರಗಳನ್ನು ಬಳಸಿಕೊಂಡು ತುರ್ತು ಸೇವೆ ಒದಗಿಸಲು ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶುಭ ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ.

ಸಹಾಯವಾಣಿ: ಮಡಿಕೇರಿ ನಗರಸಭಾ ವ್ಯಾಪ್ತಿಯ ಯಾವದೇ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾದರೆ, ನಗರಸಭೆಯ ಸಹಾಯವಾಣಿ ಕೇಂದ್ರ ದೂರವಾಣಿ 08272-220111 ರಲ್ಲಿ ಯಾವದೇ ಸಮಯದಲ್ಲಿ ಸಂಪರ್ಕಿಸುವಂತೆ ಆಯುಕ್ತರು ಸಲಹೆ ನೀಡಿದ್ದಾರೆ. ಜನರಿಗೆ ವಿದ್ಯುತ್ ಸಮಸ್ಯೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೇವೆಗಳಿಗೂ ಈ ಮೇಲಿನ ಸಂಖ್ಯೆಯಲ್ಲಿ ವ್ಯವಹರಿಸಲು ಅವರು ತಿಳಿಹೇಳಿದ್ದಾರೆ.

ಪೌರಾಡಳಿತ ಸಚಿವಾಲಯದ ನಿಯಮದಂತೆ ಮಡಿಕೇರಿಯ ಜನಸಂಖ್ಯೆಗೆ ತಕ್ಕಂತೆ ಪ್ರತಿ 700 ಜನರಿಗೆ ಓರ್ವ ನೌಕರರಂತೆ ಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ. ಈ ಮಾನದಂಡ ಅನುಸರಿಸಿ ಲಭ್ಯವಿರುವ ನೌಕರರನ್ನು ಬಳಸಿಕೊಂಡು ಸಾಧ್ಯವಾದ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ನೆನಪಿಸಿದ್ದಾರೆ. ಅಲ್ಲದೆ, ಸಾರ್ವಜನಿಕರು ಕಚೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ಸಹಾಯವಾಣಿ ದೂರವಾಣಿ ಮುಖಾಂತರ ಕುಂದುಕೊರತೆಗಳ ಗಮನಸೆಳೆಯುವಂತೆ ಸಲಹೆ ನೀಡಿದ್ದಾರೆ.

ಕಾಡು ತೆರವು: ಈಗಾಗಲೇ ನಗರದ ವಿವಿಧ ಜನವಸತಿಗಳಲ್ಲಿ ರಸ್ತೆ ಬದಿ ಚರಂಡಿ, ಕಾಡುಗಳಿಂದ ಕೂಡಿರುವ ಗಿಡಗಂಟಿಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ. ಅಲ್ಲಲ್ಲಿ ಕುಸಿದಿರುವ ಮಣ್ಣು ಇತ್ಯಾದಿಗಳನ್ನು ಕೆಲವೆಡೆ ಸ್ವತಃ ಕಾರ್ಮಿಕರು ಹಾಗೂ ಅಗತ್ಯವಿರುವೆಡೆಗಳಲ್ಲಿ ಜೆ.ಸಿ.ಬಿ. ಯಂತ್ರದಿಂದ ತೆರವುಗೊಳಿಸಲು ಕ್ರಮವಹಿಸಲಾಗಿದೆ.

ಮಡಿಕೇರಿ ನಗರದ ಸ್ವಚ್ಛತೆ, ನೈರ್ಮಲೀಕರಣ, ಸೌಂದರ್ಯ ಕಾಪಾಡುವ ದಿಸೆಯಲ್ಲಿ ಸಾರ್ವಜನಿಕ ಸಹಕಾರವೂ ಅವಶ್ಯಕವೆಂದು ಅಭಿಪ್ರಾಯಪಟ್ಟಿರುವ ಆಯುಕ್ತೆ ಶುಭಾ, ಮಳೆಗಾಲದಲ್ಲಿ ಪರಿಸ್ಥಿತಿ ಸುಧಾರಣೆಗಾಗಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಸಹಾಯವಾಣಿ ಮೂಲಕ ನಾಗರಿಕರು ಸಲಹೆ, ಸೂಚನೆ ನೀಡಿದರೆ ಆ ಬಗ್ಗೆ ಗಮನಹರಿಸಲಾಗುವದು ಎಂದು ಭರವಸೆಯ ನುಡಿಯಾಡಿದ್ದಾರೆ.