ಸೋಮವಾರಪೇಟೆ,ಜೂ.14: ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸದ್ಯ ಕಾರ್ಯಾಚರಿಸುತ್ತಿರುವ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ತಕ್ಷಣ ತೋಳೂರುಶೆಟ್ಟಳ್ಳಿಯ ಪ್ರಸಾದ್ ಪ್ರೌಢಶಾಲಾ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ತೋಳೂರುಶೆಟ್ಟಳ್ಳಿಯಲ್ಲಿರುವ ಪ್ರಸಾದ್ ಪ್ರೌಢಶಾಲೆ ಕಟ್ಟಡದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಕ್ಕೆ ಗ್ರಾಮಸ್ಥರು ಪತ್ರ ನೀಡಿದ್ದು, ಈಗಾಗಲೇ 30 ರಿಂದ 40 ಲಕ್ಷ ವೆಚ್ಚದಲ್ಲಿ ಕಟ್ಟಡದ ದುರಸ್ತಿ ಕಾರ್ಯ ನಡೆದಿದೆ.ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಸಾಮಾನ್ಯ ಸಭೆಗಳಲ್ಲಿ ಸೂಚಿಸಿದ್ದರೂ ಇದುವರೆಗೆ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವದೇ ಕ್ರಮ ವಹಿಸಿಲ್ಲ ಎಂದು ಅಭಿಮನ್ಯುಕುಮಾರ್ ಅವರು ಆರೋಪಿಸಿದ್ದಾರೆ.
ವಸತಿ ಶಾಲೆಯನ್ನು ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ವರ್ಗಾವಣೆ ಮಾಡಲು ಪ್ರಾಂಶುಪಾಲರು ಮತ್ತು ಕೆಲವು ಅಧಿಕಾರಿಗಳು ಹುನ್ನಾರ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಇದಕ್ಕೆ ಅವಕಾಶ ನೀಡಬಾರದು. ಈಗಾಗಲೇ ತೋಳೂರುಶೆಟ್ಟಳ್ಳಿ ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದು, ತಕ್ಷಣ ಶಾಲೆಯನ್ನು ತೋಳೂರುಶೆಟ್ಟಳ್ಳಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಇಲಾಖೆಯ ಉಪನಿರ್ದೇಶಕರ ಸಹಿತ ಶಾಸಕರು, ಎಂಎಲ್ಸಿ, ಜಿಲ್ಲಾಧಿಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗಳಿಗೆ ಪತ್ರ ಬರೆದಿದ್ದಾರೆ.