ಮಡಿಕೇರಿ, ಜೂ. 13: ಪ್ರಸಕ್ತ ವರ್ಷ ಸುರಿಯುತ್ತಿರುವ ಮುಂಗಾರು ಮಳೆ ಕೊಡಗು ಜಿಲ್ಲೆಯಾದ್ಯಂತ ಹತ್ತು - ಹಲವಾರು ಅನಾಹುತಗಳನ್ನು ಸೃಷ್ಟಿಸಿದೆ. ಜೂನ್ ತಿಂಗಳ ಎರಡನೇ ವಾರದಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸಿದ್ದು, ಕೆಲವೇ ಕೆಲವು ದಿನಗಳು ಸುರಿದ ಮಳೆಗೆ ಜಿಲ್ಲೆಯ ಚಿತ್ರಣವೇ ಬದಲಾದಂತಾಗಿತ್ತು. ಈ ಪರಿಸ್ಥಿತಿಯ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲೂಕು ಕೇಂದ್ರವಾದ ವೀರಾಜಪೇಟೆ ಪಟ್ಟಣದಿಂದ ದೂರದಲ್ಲಿರುವ ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ಕಳೆದ 48 ಗಂಟೆಗಳಿಗೂ ಅಧಿಕ ಸಮಯದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಗೆ ಆ ವಿಭಾಗದ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವೆಡೆ ಮಳೆ - ಗಾಳಿಯೊಂದಿಗೆ ಸಿಡಿಲಿನ ಅಬ್ಬರವೂ ಕೇಳಿ ಬಂದಿದ್ದು, ಹಲವಾರು ಗ್ರಾಮಗಳಲ್ಲಿನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿ ಪರಿಣಮಿಸಿದೆ. ಈ ವಿಭಾಗಗಳಲ್ಲಿ ಸುಮಾರು 10 ದಿನಗಳಿಂದ ವಿದ್ಯುತ್ ಸಂಪರ್ಕವೂ ಇಲ್ಲದಂತಾಗಿದ್ದು, ಹೊರ ಪ್ರಪಂಚ ಏನಾಗುತ್ತಿದೆ ಎಂಬ ಕನಿಷ್ಟ ಅರಿವು ಕೂಡ ಇಲ್ಲದ ರೀತಿಯಲ್ಲಿ ಜನರು ಶಿಲಾಯುಗದ ಭಯಾನಕ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ.

ಜೂನ್ 10 ರಿಂದ 13ರ ತನಕ ಈ ಪರಿಸ್ಥಿತಿಯನ್ನು ಅನುಭವಿ ಸುತ್ತಿರುವ ಜನರು ಮತ್ತೆ ಮತ್ತೆ ಮುಂದುವರಿಯುತ್ತಿರುವ ಮಳೆಯಿಂದಾಗಿ ತೀರಾ ಆತಂಕದ ಸ್ಥಿತಿ ಎದುರಿಸುವಂತಾಗಿದೆ. ದಕ್ಷಿಣ ಕೊಡಗಿನ ಹುದಿಕೇರಿ, ಟಿ. ಶೆಟ್ಟಿಗೇರಿ, ಕುಟ್ಟ, ಶ್ರೀಮಂಗಲ, ಬಿರುನಾಣಿ, ಬಿ. ಶೆಟ್ಟಿಗೇರಿ, ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಈ ಸನ್ನಿವೇಶ ಉಂಟಾಗಿದೆ.

ವ್ಯಾಪಕ ಹಾನಿ - ಬಂದ್

ಈ ವಿಭಾಗದ ಹಲವರ ಅನುಭವದಂತೆ ಕಳೆದ ಹಲವಾರು ವರ್ಷಗಳ ಬಳಿಕ ಈ ರೀತಿಯ ಭಾರೀ ಮಳೆ ಸುರಿದಿದೆ. ಅದೂ ದಿನವೊಂದಕ್ಕೆ ಹತ್ತು ಇಂಚಿಗಿಂತಲೂ ಅಧಿಕವಾಗಿದ್ದು, ನದಿ - ತೊರೆಗಳು ಮೈದುಂಬಿ ಹರಿಯುತ್ತಿವೆ. ಇದರೊಂದಿಗೆ ಅಲ್ಲಲ್ಲಿ ಜಲದ ಬುಗ್ಗೆಗಳು ಎದ್ದು ಭೂ ಕುಸಿತ, ಬರೆ ಕುಸಿತದಂತಹ ಘಟನೆಗಳು ನಡೆದಿವೆ. ನದಿ ಸನಿಹದ ಪ್ರದೇಶಗಳ ಗದ್ದೆ, ತೋಟಗಳು, ಜಲಾವೃತ ಗೊಂಡಿವೆ. ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಕಾಫಿ ತೋಟಗಳಲ್ಲಿನ ಮಣ್ಣು ಕೊಚ್ಚಿ ಹೋಗಿದ್ದು, ಗಿಡದ ಬೇರು ಕಾಣುವಂತಹ ದೃಶ್ಯವೂ ಅಲ್ಲಲ್ಲಿ ಎದುರಾಗಿವೆ.

ಗದ್ದೆಯ ಏರಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಕೆಲವು ಮಂದಿಯ ಮನೆಗೆ ಒತ್ತಿಕೊಂಡಂತೆ ಜಲಎದ್ದ ಪರಿಣಾಮ ಮನೆಗಳು ಅಪಾಯದಂಚಿನಲ್ಲಿವೆ. ಅಲ್ಲದೆ ಮನೆಗಳ ಮೇಲೆ ಬರೆ ಕುಸಿತ ದಿಂದಲೂ ಅನಾಹುತ ಸಂಭವಿಸಿವೆ. ಭಾರೀ ಮಳೆಯಿಂದಾಗಿ ಕೃಷಿ ಫಸಲುಗಳು ಬಹುತೇಕ ನೆಲಕಚ್ಚಿವೆ. ಲಕ್ಷ್ಮಣ ತೀರ್ಥ ಹರಿಯುವ ಶ್ರೀಮಂಗಲ, ಹರಿಹರ, ಬೇಗೂರು ಕೊಲ್ಲಿಯಂತಹ ವಿಶಾಲ ಪ್ರದೇಶಗಳು ಸಂಪೂರ್ಣ

(ಮೊದಲನೇ ಪುಟದಿಂದ) ಜಲಾವೃತಗೊಂಡು ಸಮುದ್ರದ ಮಾದರಿಯಲ್ಲಿ ಕಂಡು ಬರುತ್ತಿರುವದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತೋಟಗಳಲ್ಲಿ ಮರ ಬಿದ್ದ ಪರಿಣಾಮವೂ ವ್ಯಾಪಕ ನಷ್ಟ ಸಂಭವಿಸಿದೆ.

ಮಾಕುಟ್ಟ ರಸ್ತೆ ಸಂಚಾರ ಬಂದ್

ವೀರಾಜಪೇಟೆಯಿಂದ ಮಾಕುಟ್ಟ, ಕೇರಳಕ್ಕೆ ತೆರಳುವ ರಸ್ತೆಯಲ್ಲಿ ವರುಣನ ರುದ್ರನರ್ತನದಿಂದಾಗಿ ತಾ. 12ರ ರಾತ್ರಿಯಿಂದ ಕೊಡಗು - ಕೇರಳ ಸಂಪರ್ಕ ರಸ್ತೆ ಬಂದ್ ಆಗಿತ್ತು. ಈ ರಸ್ತೆಯುದ್ದಕ್ಕೂ ನೀರು ನಿಂತ ಪರಿಣಾಮ ಹಾಗೂ ಸನಿಹದ ಹೊಳೆ ಉಕ್ಕಿ ಹರಿದಿದ್ದರಿಂದ ಈ ರಸ್ತೆಯ ಸ್ಥಿತಿ ತೀರಾ ಶೋಚನೀಯವಾಗಿದೆ. ಸುಮಾರು 30ಕ್ಕೂ ಅಧಿಕ ಮರಗಳು ಈ ರಸ್ತೆಯಲ್ಲಿ ಕಳೆದ ರಾತ್ರಿ ಬಿದ್ದಿರುವ ಕುರಿತು ವರದಿಯಾಗಿದ್ದು, ಜಲಸ್ಫೋಟದಿಂದಾಗಿ ಈ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳು ಅಲ್ಲಲ್ಲೇ ನಿಲ್ಲಬೇಕಾಗಿತ್ತು. ಈ ರಸ್ತೆಯ ಬದಿಯ ಅಂಗಡಿ ಮುಗ್ಗಟ್ಟುಗಳಿಗೂ ನೀರು ನುಗ್ಗಿದೆ. ಇಲ್ಲಿನ ಚಿತ್ರಣ ಶಿರಾಡಿಘಾಟ್‍ನ ಪರಿಸ್ಥಿತಿಯನ್ನು ನೆನಪಿಸುವಂತಾಗಿತ್ತು ಎಂದು ರಾತ್ರಿಯ ಭಯಾನ ಕ ಸನ್ನಿವೇಶವನ್ನು ಅನುಭವಿಸಿದವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಮತ್ತಷ್ಟು ವಿವರ

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಟಿ. ಶೆಟ್ಟಿಗೇರಿಯಿಂದ ಬಿರುನಾಣಿಗೆ ತೆರಳುವ ರಸ್ತೆಯಲ್ಲಿ ಕೆ.ಕೆ.ಆರ್. ಸನಿಹ ಬರೆ ಕುಸಿದು ಸಂಪರ್ಕ ಕಡಿತ ಗೊಂಡಿತ್ತು. ಇದರಿಂದಾಗಿ ಬದಲಿ ರಸ್ತೆಯಾದ ತೆರಾಲು ಮಾರ್ಗದಲ್ಲಿ ಇಂದು ಬಸ್ ಹಾಗೂ ವಾಹನಗಳು ಸಂಚರಿಸಬೇಕಾಯಿತು. ಸ್ಥಳೀಯರು ಕುಸಿದ ಮಣ್ಣನ್ನು ಸ್ವಲ್ಪಮಟ್ಟಿಗೆ ತೆರವುಗೊಳಿಸಿದರೂ ಬೃಹತ್ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹುದಿಕೇರಿ ಮಾರ್ಗದಲ್ಲೂ ಇಂದು ಬೆಳಿಗ್ಗೆ ಅಲ್ಲಲ್ಲಿ ವಾಹನಗಳು ಸಿಲುಕಿ ಕೊಂಡಿದ್ದು ಹಾಗೂ ನೀರು ಆವರಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ಟಿ.ಶೆಟ್ಟಿಗೇರಿ ಹರಿಹರ ಮಾರ್ಗ ದಲ್ಲೂ ಗದ್ದೆಗಳು ಜಲಾವೃತಗೊಂಡಿವೆ. ಟಿ. ಶೆಟ್ಟಿಗೇರಿ - ಶ್ರೀಮಂಗಲ ಸನಿಹ ದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಬಿ.ಶೆಟ್ಟಿಗೇರಿ ವಿಭಾಗದಲ್ಲಿಯೂ ಅಲ್ಲಿನ ಕುರುಡಪೊಳೆ ಉಕ್ಕಿಹರಿದ ಪರಿಣಾಮ ಸಮಸ್ಯೆ ಎದುರಾಗಿದೆ. ಮುಖ್ಯ ರಸ್ತೆಗಳ ಬದಿಯ ಚಿತ್ರಣ ಒಂದು ರೀತಿ ಯಾದರೆ ಈ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿರುವದಾಗಿ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಅಲ್ಲಲ್ಲಿ ಡಾಂಬರು ರಸ್ತೆಗಳು ಕಿತ್ತು ಹೋಗಿವೆ. ಬಾಡಗರಕೇರಿ - ಪೊರಾಡುವಿನಲ್ಲಿ ಅಲ್ಲಿನ ನಿವಾಸಿ ಮಲ್ಲೇಂಗಡ ಪೆಮ್ಮಯ್ಯ ಎಂಬವರಿಗೆ ಸೇರಿದ ಗದ್ದೆಯಲ್ಲಿ ಹಾನಿ ಸಂಭವಿಸಿದ್ದರೆ, ಕೀರ್ತಿ ಎಂಬವರ ಮನೆಯ ಹಿಂಭಾಗಕ್ಕೆ ಬೃಹತ್ ಬರೆ ಜರಿದು ಸಮಸ್ಯೆಯಾಗಿದೆ.

ಇಲ್ಲದ ವಿದ್ಯುತ್ ಸಂಪರ್ಕ

ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಹಲವು ದಿನಗಳಿಂದ ಕಡಿತಗೊಂಡಿದ್ದು, ಜನತೆ ಭಾರೀ ಮಳೆಯ ನಡುವೆ ಕಾರ್ಗತ್ತಲಿನಲ್ಲಿ ದಿನದೂಡುವಂತಾಗಿದೆ. ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಥವಾ ಇತರರಿಗೆ ಮಾಹಿತಿ ಒದಗಿಸಲು ದೂರವಾಣಿ, ಮೊಬೈಲ್ ಸಂಪರ್ಕಗಳು ಇಲ್ಲದೆ ಮಳೆ ಇಳಿಮುಖವಾಗುವದನ್ನು ಕಾಯು ವಂತಾಗಿದೆ. ಕುಟ್ಟ ವಿಭಾಗದಲ್ಲಿಯೂ ಮಳೆಯಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಿವೆ. ಇನ್ನು ಬಾಳಲೆ, ಕಾನೂರು ಕಡೆಗಳಲ್ಲಿ ಮಳೆ ತುಸು ಕಡಿಮೆ ಇದ್ದರೂ ಇತರೆಡೆ ಬೀಳುವ ಮಳೆಯ ನೀರು ರಭಸದಿಂದ ಹರಿಯುತ್ತಿರುವದು ಆತಂಕ ಸೃಷ್ಟಿಸಿತ್ತು.

ಎಂಟತ್ತು ಕಿ.ಮೀ. ನಡೆದು ಬದುಕಿದೆವು...

ಕಳೆದ ರಾತ್ರಿ ಮಾಕುಟ್ಟ ರಸ್ತೆಯ ಭಯಾನಕ ಚಿತ್ರಣವನ್ನು ಅಲ್ಲಿ ಸಿಲುಕಿದ್ದ ಅಮ್ಮತ್ತಿಯ ವಿಜು ಎಂಬವರು ‘ಶಕ್ತಿ’ಯೊಂದಿಗೆ ಹಂಚಿಕೊಂಡರು. ‘ಮಾಕುಟ್ಟ ಸನಿಹದಲ್ಲಿ ಬರುವ ಆಂಜನೇಯ ದೇವಸ್ಥಾನದ ಬಳಿ ಸ್ನೇಹಿತರೊಬ್ಬರ ವಾಹನ ಅವಘಡಕ್ಕೆ ಈಡಾಗಿತ್ತು. ಇದನ್ನು ತರಲು ವೀರಾಜಪೇಟೆಯಿಂದ ಕ್ರೇನ್ ಸಹಿತವಾಗಿ ಮೂರು ವಾಹನಗಳಲ್ಲಿ ತೆರಳಲಾಗಿತ್ತು. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ನಾವು ದುರಸ್ತಿಗೀಡಾಗಿದ್ದ ವಾಹನವನ್ನು ತರಲು ಮುಂದಾಗಿದ್ದೆವು. ಈ ವೇಳೆಗೆ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಕ್ರೇನ್ ಇದ್ದ ಗಾಡಿಯ ಮುಂಭಾಗದಲ್ಲಿ ಮರವೊಂದು ಉರುಳಿ ಬಿತ್ತು. ಮತ್ತೆ ವಾಹನವನ್ನು ಹಿಂದೆ ತಂದಾಗ ಅಲ್ಲೂ ಮರವೊಂದು ಬಿದ್ದಿತು. ಪರಿಸ್ಥಿತಿ ಅಪಾಯಕಾರಿಯಾಗುತ್ತಿದ್ದಂತೆ ಮಾಕುಟ್ಟದತ್ತ ಸೇರಿಕೊಳ್ಳಲು ಮುಂದಾದೆವು. ಈ ವೇಳೆಗೆ ಕೇರಳದ ಕಡೆಯಿಂದ ಬಂದ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ನಿಲುಗಡೆಗೊಂಡಿದ್ದವು. ಭಯದ ವಾತಾವರಣದ ನಡುವೆ ಇದ್ದಾಗ ವೀರಾಜಪೇಟೆ ಕಡೆಯಿಂದ ಪೊಲೀಸರು, ಕ್ರೇನ್ ಮಾಲೀಕ ರಾಫಿ ಅವರ ಮಾಹಿತಿಯಂತೆ ಆಗಮಿಸಿದರು. ಅರಣ್ಯ ಇಲಾಖಾ ಸಿಬ್ಬಂದಿಗಳೂ ಆಗಮಿಸಿ ಸಾಕಷ್ಟು ಶ್ರಮವಹಿಸಿ ಮರ ತೆರವುಗೊಳಿಸಲು ಶ್ರಮಿಸಲಾಯಿತು.

ಆದರೂ ಮಳೆ ಮತ್ತೆ ಹೆಚ್ಚಾಗಿ ಪರಿಸ್ಥಿತಿ ಬಿಗಡಾಯಿಸತೊಡಗಿತು. ಸಿಮೆಂಟ್ ತುಂಬಿದ್ದ ಲಾರಿಯೊಂದರ ಮೇಲೆ ಮರ ಬಿದ್ದಿದ್ದಾಗಿಯೂ ತಿಳಿಸಿದ ಅವರು ಬಳಿಕ ಅನಿವಾರ್ಯವಾಗಿ ವಾಹನಗಳನ್ನು ಅಲ್ಲೇ ಬಿಟ್ಟು ಮಳೆಯ ನಡುವೆ ವೀರಾಜಪೇಟೆಯತ್ತ ಸುಮಾರು ಎಂಟತ್ತು ಕಿ.ಮೀ. ದೂರವನ್ನು ಟಾರ್ಚ್ ಬೆಳಕಿನ ಸಹಾಯದೊಂದಿಗೆ ಕ್ರಮಿಸಿ ಪ್ರಯಾಸದಿಂದ ಮನೆ ಸೇರಬೇಕಾಯಿತು ಎಂದು ವಿಜು ಅಲ್ಲಿನ ಚಿತ್ರಣವನ್ನು ವಿವರಿಸಿದರು. ಪೊಲೀಸರು, ಅರಣ್ಯ ಇಲಾಖಾ ಸಿಬ್ಬಂದಿಗಳು ಆ ಪರಿಸ್ಥಿತಿಯಲ್ಲಿಯೂ ಅಪಾರ ಪರಿಶ್ರಮ ಪಡುತ್ತಿದ್ದುದಾಗಿ ಅವರು ಸ್ಮರಿಸಿಕೊಂಡರು.

ಮಾಕುಟ್ಟ ಮಾರ್ಗ ಬಂದ್

ಭೂ ಕುಸಿತದಿಂದ ಪೆರುಂಬಾಡಿ, ಮಾಕುಟ್ಟ ಮುಖಾಂತರ ಕೇರಳ ಸಂಪರ್ಕ ಮಾರ್ಗದಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕೇರಳದತ್ತ ಪ್ರಯಾಣಿಸುವವರು ಕುಟ್ಟ ದಾರಿಯಲ್ಲಿ ತೆರಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಜನತೆಗೆ ಸಲಹೆ ಮಾಡಿದ್ದಾರೆ. ಮಾಕುಟ್ಟ ಪೊಲೀಸ್ ಚೆಕ್‍ಪೋಸ್ಟ್ ವಲಯ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಭೂಕುಸಿತದಿಂದ ಮರಗಳು ಅಲ್ಲಲ್ಲಿ ಬಿದ್ದು ಅಪಾಯ ಪರಿಸ್ಥಿತಿ ಎದುರಾಗಿದ್ದು, ಲೋಕೋಪಯೋಗಿ, ಕಂದಾಯ ಹಾಗೂ ಅಗ್ನಿಶಾಮಕ ಇಲಾಖೆ ತ್ವರಿತ ಕಾರ್ಯದಲ್ಲಿ ತೊಡಗಿದೆ. ಸಂಪೂರ್ಣ ರಸ್ತೆ ಮಾರ್ಗ ತೆರವುಗೊಳ್ಳುವ ತನಕ ಬದಲಿ ಮಾರ್ಗ ಕುಟ್ಟಕ್ಕಾಗಿ ಸಂಚರಿಸಲು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.