ಜಯನಗರದಲ್ಲಿ ಕಾಂಗ್ರೆಸ್‍ಗೆ ಗೆಲುವು

ಬೆಂಗಳೂರು, ಜೂ. 13: ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಜಯನಗರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಪಡೆದಿದೆ. ಸೌಮ್ಯಾ ರೆಡ್ಡಿ ಅವರಿಗೆ 54,457 ಮತಗಳು ಲಭಿಸಿದರೆ, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 51,568 ಮತಗಳನ್ನು ಪಡೆದಿದ್ದಾರೆ. ಸೌಮ್ಯಾ ರೆಡ್ಡಿ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಈ ಮೂಲಕ ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸೌಧ ಪ್ರವೇಶಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿತ್ತು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದುಕೊಂಡಿದೆ.

ನಾಲ್ವರು ಯೋಧರು ಹುತಾತ್ಮ

ಜಮ್ಮು, ಜೂ. 13: ಪಾಕಿಸ್ತಾನ ಮತ್ತು ಭಾರತದ ನಡುವಣ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಯೋಧರು (ರೇಂಜರ್ಸ್) ಮತ್ತೆ ಕದನವಿರಾಮ ಉಲ್ಲಂಘಿಸಿದ್ದಾರೆ. ಮಂಗಳವಾರ ರಾತ್ರಿ ಅವರು ನಡೆಸಿದ ಧಾಳಿಯಲ್ಲಿ ಭಾರತದ ಗಡಿ ಭದ್ರತಾ ಪಡೆಯ (ಬಿಎಸ್‍ಎಫ್) ನಾಲ್ವರು ಯೋಧರು ಬಲಿಯಾಗಿದ್ದಾರೆ. ಐವರು ಯೋಧರಿಗೆ ಗಾಯಗಳಾಗಿವೆ. ಮೃತರಲ್ಲಿ ಮೂವರು ಯೋಧರು ಮತ್ತು ಒಬ್ಬ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದ್ದಾರೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಬಿಎಸ್‍ಎಫ್ ಹೇಳಿದೆ. ಜಮ್ಮು ಪ್ರಾಂತದ ಸಾಂಬಾ ಜಿಲ್ಲೆಯ ಚಾಂಬಿಲಿಯಾಲ್ ಗಡಿ ಠಾಣೆಯನ್ನು ಗುರಿಯಾಗಿಸಿಕೊಂಡು ಧಾಳಿ ನಡೆಸಲಾಗಿದೆ. ಪಾಕ್ ಯೋಧರು ರಾತ್ರಿ 9.40ರ ಸುಮಾರಿನಲ್ಲಿ ಧಾಳಿ ಆರಂಭಿಸಿ, ಬೆಳಿಗ್ಗೆ 4.30 ರವರೆಗೂ ಧಾಳಿ ಮುಂದುವರಿಸಿದರು. ಭಾರಿ ಶಸ್ತ್ರಾಸ್ತ್ರ ಬಳಸಿದ್ದರಿಂದ ನಮ್ಮ ಯೋಧರು ಮೃತಪಟ್ಟಿದ್ದಾರೆ ಎಂದು ಬಿಎಸ್‍ಎಫ್ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಕಮಲ್ ಎನ್. ಚೌಬೆ ಮಾಹಿತಿ ನೀಡಿದ್ದಾರೆ. ಅವರು ಅಪ್ರಚೋದಿತವಾಗಿ ಧಾಳಿ ನಡೆಸಿದ್ದಾರೆ. ಹೀಗಾಗಿ ಗಡಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದ ಆಮ್ ಆದ್ಮಿ ಪ್ರತಿಭಟನೆ

ದೆಹಲಿ, ಜೂ. 13: ಐಎಎಸ್ ಅಧಿಕಾರಿಗಳು ತಮ್ಮ ಮುಷ್ಕರ ನಿಲ್ಲಿಸುವಂತೆ ಗವರ್ನರ್ ನಿರ್ದೇಶನ ನೀಡಬೇಕು. ನಾಲ್ಕು ತಿಂಗಳಿನಿಂದ ಕೆಲಸ ಮಾಡದೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಆಮ್ ಆದ್ಮಿ ಪಕ್ಷದ ನಾಯಕರು ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಸತತ ಮೂರನೇ ದಿನವೂ ಮುಂದುವರೆದಿದೆ. ತಾ. 13 ರಂದು ಲೆಫ್ಟಿನೆಂಟ್ ಗೌರ್ನರ್ ನಿವಾಸದೆಡೆಗೆ ಆಮ್ ಆದ್ಮಿ ಪಕ್ಷದ ನಾಯಕರು ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ್ದು, ಮಾಜಿ ಕೇಂದ್ರ ಸಚಿವ, ಮಾಜಿ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಆಮ್ ಆದ್ಮಿ ಪಕ್ಷದ ನಾಯಕರಿಗೆ ಸಾಥ್ ನೀಡಿದ್ದಾರೆ. ದೆಹಲಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಲೆ. ಗವರ್ನರ್ ಕಚೇರಿಯಲ್ಲಿ ಇಡೀ ರಾತ್ರಿ ಪ್ರತಿಭಟನೆ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ನಡೆಯನ್ನು ಬಿಜೆಪಿ ಖಂಡಿಸಿದ್ದು, ದೆಹಲಿ ಸಿಎಂ ನಡೆ ಪ್ರಜಾಪ್ರಭುತ್ವದ ಅಣಕ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಭಾರತದ ಉಪ ಹೈ ಕಮಿಷನರ್‍ಗೆ ಸಮನ್ಸ್

ಜಮ್ಮು-ಕಾಶ್ಮೀರ, ಜೂ. 13: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಕದನ ವಿರಾಮ ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಭಾರತದ ಉಪ ಹೈ ಕಮೀಷನರ್‍ಗೆ ಸಮನ್ಸ್ ನೀಡಿದೆ. ಜಮ್ಮು-ಕಾಶ್ಮೀರದ ಚಾಂಬ್ಲಿಯಲ್ ಸೆಕ್ಟರ್ ಬಳಿ ಪಾಕಿಸ್ತಾನಿ ಯೋಧರು ನಡೆಸಿದ ಗುಂಡಿನ ಧಾಳಿಯಲ್ಲಿ ಗಡಿ ಭದ್ರತಾ ಪಡೆಯ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಇವರೆಲ್ಲರೂ ಬಿಎಸ್‍ಎಫ್‍ನ ಸಹಾಯಕ ಕಮಾಂಡೆಂಟ್ ಆಗಿದ್ದಾರೆ. 2003ರ ಕದನ ವಿರಾಮ ಒಪ್ಪಂದ ಅನುಷ್ಠಾನಕ್ಕೆ ಉಭಯ ದೇಶಗಳ ಉನ್ನತ ಹಿರಿಯ ಸೇನಾ ಅಧಿಕಾರಿಗಳು ಸಭೆಯ ನಡೆದಿದ್ದು ಒಂದು ವಾರದ ನಂತರ ದೊಡ್ಡ ಮಟ್ಟದ ಕದನ ವಿರಾಮ ಉಲ್ಲಂಘನೆ ನಡೆದಿದೆ. ಕದನ ವಿರಾಮ ಯಾವಾಗೂ ದ್ವಿಪಕ್ಷೀಯ ನಿರ್ಧಾರದಿಂದ ನಡೆಯಲಿದ್ದು, ಕದನ ವಿರಾಮದ ಪವಿತ್ರತೆ ಕಾಪಾಡಲು ಯಾವಾಗಲೂ ಪ್ರಯತ್ನಿಸುತ್ತೇವೆ. ಆದರೆ, ಪಾಕಿಸ್ತಾನ ಇದನ್ನು ಉಲ್ಲಂಘಿಸುತ್ತಲೇ ಇದೆ. ಕದನ ವಿರಾಮ ಇರಲಿ ಅಥವಾ ಇಲ್ಲದಿರಲಿ ನಾವು ಯಾವಾಗಲೂ ಸಿದ್ದರಿದ್ದೇವೆ. ದೇಶದ ಸಮಗ್ರತೆ ಕಾಪಾಡಲೂ ಎಲ್ಲ ಆಯುಧಗಳು ಅಗತ್ಯವಾಗಿದೆ ಎಂದು ಬಿಎಸ್‍ಎಫ್ ಎಡಿಜಿ ಕಮಲ್ ನಾಥ್ ಚೌಬೆ ಹೇಳಿದ್ದಾರೆ.

ಸ್ಕಾರ್ಫ್ ಕಡ್ಡಾಯ:ಹೊರಬಂದ ಆಟಗಾರ್ತಿ

ಪೂಣೆ, ಜೂ. 13: ತಲೆಗೆ ಸ್ಕಾರ್ಫ್ ಧರಿಸುವದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ. ಇರಾನ್‍ನಲ್ಲಿ ಮಹಿಳೆಯರು ತಲೆಗೆ ಸ್ಕಾರ್ಫ್ ಧರಿಸುವದು ಕಡ್ಡಾಯ. ಇದೇ ನಿಯಮವನ್ನು ಇರಾನ್ ಕ್ರೀಡಾ ಇಲಾಖೆ ಅಂತಾರಾಷ್ಟ್ರೀಯ ಚೆಸ್ ಟೂರ್ನಿಗೂ ಅಳವಡಿಸಿದ್ದು, ಇದರಿಂದ ಬೇಸತ್ತ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಇರಾನ್‍ನ ಹಮದಾನ್ನಲ್ಲಿ ತಾ. 26 ರಿಂದ ಆಗಸ್ಟ್ 4 ರವರೆಗೆ ಚೆಸ್ ಚಾಂಪಿಯನ್‍ಶಿಪ್ ನಡೆಯಲಿದೆ. ಇರಾನ್ ಕಾನೂನಿನ ಪ್ರಕಾರ ಮಹಿಳೆಯರು ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳಬೇಕಿರುವದು ಕಡ್ಡಾಯವಾಗಿದೆ. ಆದರೆ ಅದು ತಮ್ಮ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಕಾರಣದಿಂದ ನಾನು ಟೂರ್ನಿಯಲ್ಲಿ ಪಾಲ್ಗೊಳ್ಳುವದಿಲ್ಲ ಎಂದು ಸೌಮ್ಯಾ ಹೇಳಿದ್ದಾರೆ. ಈ ಕುರಿತು ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿರುವ ಸೌಮ್ಯಾ, ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ಇರಾನ್‍ನ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಸೇರಿದಂತೆ ನನ್ನ ಮೂಲ ಮಾನವ ಹಕ್ಕುಗಳನ್ನು ನೇರವಾಗಿ ಹತ್ತಿಕ್ಕುತ್ತದೆ. ಪ್ರಸ್ತುತದ ಸಂದರ್ಭದಲ್ಲಿ ನನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾನು ಇರಾನ್‍ಗೆ ತೆರಳದೆ ಇರುವದೇ ಸೂಕ್ತ ಎಂದೆನಿಸಿದೆ ಎಂದು ಹೇಳಿದ್ದಾರೆ. ಅಂತೆಯೇ ಕ್ರೀಡಾಪಟುಗಳ ಮೇಲೆ ಧಾರ್ಮಿಕ ವಸ್ತ್ರಸಂಹಿತೆಯನ್ನು ಹೇರುವದು ಸರಿಯಲ್ಲ. ಅಧಿಕೃತ ಚಾಂಪಿಯನ್‍ಶಿಪ್‍ಗಳಲ್ಲಿ ನಾವು ರಾಷ್ಟ್ರೀಯ ತಂಡದ ಧಿರಿಸು ಅಥವಾ ಕ್ರೀಡಾ ಉಡುಪನ್ನು ಧರಿಸಿರುವದನ್ನು ಆಯೋಜಕರು ನಿರೀಕ್ಷಿಸುತ್ತಾರೆ. ಆದರೆ, ಕ್ರೀಡೆಯಲ್ಲಿ ಧಾರ್ಮಿಕ ವಸ್ತ್ರಸಂಹಿತೆಯನ್ನು ಬಲವಂತವಾಗಿ ಹೇರುವಂತಿಲ್ಲ. ವಸ್ತ್ರ ಸಂಹಿತೆಯ ನಿಯಮವನ್ನು ವಿರೋಧಿಸಿ ಭಾರತದ ಕ್ರೀಡಾಪಟು ಸ್ಪರ್ಧೆಯಲ್ಲಿ ಭಾಗವಹಿಸುವದರಿಂದ ಹಿಂದೆ ಸರಿದಿರುವದು ಇದು ಮೊದಲೇನಲ್ಲ. 2016 ರಲ್ಲಿ ಭಾರತದ ಶೂಟರ್ ಹೀನಾ ಸಿಧು ಅವರು ಇದೇ ಇರಾನ್ ನಲ್ಲಿ ಆಯೋಜಿಸಿದ್ದ ಏಷ್ಯನ್ ಏರ್ಗನ್ ಸ್ಪರ್ಧೆಯಿಂದ ಇದೇ ಕಾರಣದಿಂದ ಹಿಂದಕ್ಕೆ ಸರಿದಿದ್ದರು.

ಬಸ್ ಪಲ್ಟಿ : 17 ಪ್ರಯಾಣಿಕರು ಸಾವು

ಲಖ್ನೋ, ಜೂ. 13: ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಇಂದು ಮುಂಜಾನೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್ ಪಲ್ಟಿಯಾಗಿ 17 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ. ಅತಿವೇಗದಲ್ಲಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಸಿದ ಪೆÇಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರಲ್ಲಿ ಮೂವರ ಸ್ಥಿತಿ ತುಂಬಾ ಗಂಭೀರವಾಗಿದೆ. ಅಪಘಾತದಲ್ಲಿ ಮಡಿದವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ಮಾಡಿದ್ದಾರೆ.