*ಗೋಣಿಕೊಪ್ಪಲು, ಜೂ. 13 : ಕೇರಳ - ಕೊಡಗು ಸಂಪರ್ಕ ಕಡಿತಗೊಂಡಿದೆ. ಜಲಾವೃತವಾಗಿರುವ ಮಾಕುಟ್ಟದಲ್ಲಿ ಅಲ್ಲಲ್ಲಿ ಬರೆಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ. ಕಾರ್ಮಿಕನೊಬ್ಬ ಮಳೆಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಮಳೆಯಿಂದಾಗಿ ಇದುವರೆಗೆ 2 ಸಾವು ಸಂಭವಿಸಿದೆ. ಕಳೆದ ಒಂದು ವಾರ ಗಳಿಂದ ಸುರಿದ ಮಳೆಗೆ ಮಾಕುಟ್ಟ, ವೀರಾಜಪೇಟೆ ಸಂಪರ್ಕ ರಸ್ತೆ ಕಡಿತಗೊಂಡಿದ್ದು (ಮೊದಲನೇ ಪುಟದಿಂದ) ಮೈಸೂರು ಮಾರ್ಗಕ್ಕೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಪೆರುಂಬಾಡಿ ಗೇಟಿನಿಂದ ಮಾಕುಟ್ಟದ ರಸ್ತೆ ಮಾರ್ಗದಲ್ಲಿ ಸುಮಾರು 25 ಹೆಚ್ಚು ಜಾಗಗಳಲ್ಲಿ ಬರೆ ಕುಸಿದು ನೂರಾರು ಮರಗಳು ನೆಲಕುರುಳಿದ್ದು, ಅಪಾರ ನಷ್ಟ ಸಂಭವಿಸಿದೆ. ಮತ್ತಷ್ಟು ಬರೆ ಕುಸಿಯುವ ಸ್ಥಿತಿಯಲ್ಲಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಾಹನ ಸಂಚಾರಕ್ಕೆ ಅಡಚಣೆ ಯಾಗಿದ್ದು, ಮುಂದಿನ 10 ದಿನಗಳ ಕಾಲ ಸುಗಮ ಸಂಚಾರಕ್ಕೆ ಸಾಧ್ಯವಿಲ್ಲ. ಹೀಗಾಗಿ ಮಾಕುಟ್ಟ, ವೀರಾಜಪೇಟೆ ಯಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಮಳೆಯ ಅಬ್ಬರದಿಂದ ಮತ್ತು ಬರೆ ಕುಸಿತದಿಂದ ಕೇರಳದ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಚೆತ್ತು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಇದ್ದಂತಹ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿ ದ್ದಾನೆ. ಕೇರಳದ ಇರಿಟ್ಟಿ ಸಮೀಪದ ಪೆರಾಟೆ ಗ್ರಾಮದ ನಿವಾಸಿ ಶರತ್ (25) ಮೃತಪಟ್ಟ ದುರ್ದೈವಿಯಾಗಿ ದ್ದಾನೆ. ಈತ ಮಳೆ ಬೀಳುತ್ತಿದ್ದಾಗ ರಸ್ತೆಗೆ ಅಡ್ಡವಾಗಿ ಬಿದ್ದ ಕೊಂಬೆಯನ್ನು ತೆಗೆಯಲು ಹೋದಾಗ ಆಯತಪ್ಪಿ ಜಾರಿ ಬಿದ್ದು ಮೃತಪಟ್ಟಿದ್ದಾನೆ ಸುಮಾರು 1 ಕಿ.ಮೀ. ದೂರ ಈತನ ದೇಹ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಕೇರಳದ ಕಾರ್ಮಿಕ ಸಂಘಟನೆ ಈತನ ದೇಹವನ್ನು ಪತ್ತೆ ಹಚ್ಚಿದ್ದಾರೆ. ಈತನ ದೇಹವನ್ನು ವೀರಾಜಪೇಟೆ ಆರೋಗ್ಯ ಕೇಂದ್ರದಲ್ಲಿ ಮರೋಣತ್ತರ ಪರೀಕ್ಷೆ ನಡೆಸ ಲಾಯಿತು. ಈತ ತನ್ನ ತಾಯಿ ರಾಧಾಮಣಿ ಮತ್ತು ವಿವಾಹಿತ ಸಹೋದರಿಯನ್ನು ಅಗಲಿದ್ದಾನೆ.

ಬರೆ ಕುಸಿದ ಸ್ಥಳಕ್ಕೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಸರ್ಕಾರ ಮಳೆ ಪರಿಹಾರವಾಗಿ ಕೊಡಗು ಜಿಲ್ಲೆಗೆ 25 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಮುಖ್ಯ ಮಂತ್ರಿಗಳಿಗೆ ಮಂಗಳವಾರ ರಾತ್ರಿಯೇ ಪರಿಹಾರದ ಅನುದಾನ ವನ್ನು ನೀಡುವಂತೆ ಫ್ಯಾಕ್ಸ್ ಮಾಡಿರುವದಾಗಿ ಈ ಸಂದರ್ಭ ತಿಳಿಸಿದರು.

ವೀರಾಜಪೇಟೆ, ಪೆರುಂಬಾಡಿ, ಮಾಕುಟ್ಟ ರಸ್ತೆ ರಾಜ್ಯ ಹೆದ್ದಾರಿ ಯಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಮರಗಳು ಬೆಳೆದು ನಿಂತಿದೆ. ಪ್ರತಿ ವರ್ಷ ಈ ಮಾರ್ಗದಲ್ಲಿ ಅರಣ್ಯ ಇಲಾಖೆ ಮರಗಳ ಕೊಂಬೆ ಕತ್ತರಿಸಲು ಅನುಮತಿ ನೀಡಿದರೆ ಇಷ್ಟೊಂದು ಪ್ರಮಾಣದ ಹಾನಿ ಸಂಭವಿಸುತ್ತಿರಲಿಲ್ಲ. ಮಾಕುಟ್ಟ ಹೆದ್ದಾರಿಯಲ್ಲಿ ಬರೆ ಕುಸಿಯಲು ಅರಣ್ಯ ಇಲಾಖೆಯೇ ಮುಖ್ಯ ಕಾರಣ ಎಂದು ಆರೋಪಿಸಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆ ಬೀಳುವ ರಭಸಕ್ಕೆ ಮರದ ಕೊಂಬೆಗಳು ಹೆಚ್ಚು ಭಾರ ಹೊಂದುತ್ತದೆ. ಮಣ್ಣು ಶೀತಗೊಳ್ಳುವದರಿಂದ ಮರಗಳು ಬುಡಸಮೇತ ನೆಲಕ್ಕುರುಳುತ್ತವೆ. ಬರೆಯ ಮಣ್ಣು ಸಡಿಲಗೊಂಡು ಕುಸಿದು ಬೀಳಲು ಕಾರಣವಾಗುತ್ತಿದೆ. ಅರಣ್ಯ ಇಲಾಖೆ ಮರದ ಕೊಂಬೆಗಳನ್ನು ತೆಗೆಯಲು ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಆರೋಪ ಹೊರಿಸಿದರು. ಕಳೆದ 7-8 ದಿನಗಳಿಂದ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಸಾಕಷ್ಟು ನಷ್ಟ ಉಂಟಾಗಿದೆ. ಆದರೂ ನೂತನ ಸರ್ಕಾರ ಮಂತ್ರಿ ಮಂಡಲ ರಚನೆಯಾದರೂ ಬೆಂಗಳೂರು ನಗರದಲ್ಲಿ ಮೌನವಾಗಿ ಕುಳಿತ್ತಿರುವದು ವಿಪರ್ಯಾಸವಾಗಿದೆ. ಸಂಬಂಧಪಟ್ಟ ಮಂತ್ರಿಗಳು ಹಾನಿ ಸಂಭವಿಸಿದ ಸ್ಥಳಗಳಿಗೆ ಬೇಟಿ ನೀಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಾಗಿತ್ತು. ಇದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವು ಆಗಿದೆ. ಆದರೆ ಸರ್ಕಾರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿ ಎಚ್ಚೆತ್ತುಕೊಳ್ಳುವದು ಯಾವಾಗ? ಎಂದು ಪ್ರಶ್ನಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಉಪವಿಭಾಗಾಧಿಕಾರಿ ರಮೇಶ್. ಜಿ ಕೋನರೆಡ್ಡಿ, ತಹಶೀಲ್ದಾರ್ ಗೋವಿಂದ್‍ರಾಜು, ಲೋಕೋಪ ಯೋಗಿ ಇಲಾಖೆ ಅಭಿಯಂತರ ವಿನಯ್ ಕುಮಾರ್, ತಾಲೂಕು ಅಭಿ ಯಂತರ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾಲೂಕು ಬಿ.ಜೆ.ಪಿ. ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಜೋಕಿಂ, ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಪೃಥ್ಯುರಾಜ್ ಮತ್ತು ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಗಡಿ ಪ್ರದೇಶದಲ್ಲಿ ದುರವಸ್ಥೆ

ಕಳೆದ ಏಳು ದಿನಗಳಿಂದಲೂ ಗಡಿಭಾಗವಾದ ಮಾಕುಟ್ಟ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯಾಗುತ್ತಿ ದ್ದುದರಿಂದ ಪೆರುಂಬಾಡಿಯಿಂದ ಮಾಕುಟ್ಟಕ್ಕೆ ತೆರಳುವ ರಸ್ತೆಯ ಎಡಭಾಗದ ಮೇಲಿನ ತಪ್ಪಲಿನಿಂದ ರಸ್ತೆಗೆ ಬೇರು ಸಮೇತವಾಗಿ ಮರಗಳು ಬಿದ್ದುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮರ ಬಿದ್ದ ಸುಮಾರು ಮೂರು ಕಿ.ಮೀ ಅಂತರದಲ್ಲಿ ಸೇತುವೆಯ ಒಂದು ಪಾಶ್ವರ್À ಕುಸಿದ ಪರಿಣಾಮವಾಗಿ ಹೊಳೆಯಿಂದ ಬಂದ ಹಾಗೂ ಮಳೆಯಿಂದ ಬಂದ ಮೂರು ಅಡಿ ನೀರು ರಸ್ತೆ ಮೇಲೆ ಹರಿಯುತ್ತಿರು ವದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆಯ ಪಕ್ಕದಲ್ಲಿರುವ ಮಲೆಯಾಳಿ ಅಂಬು ಹೊಟೇಲ್‍ಗೂ ನೀರು ನುಗ್ಗಿದ್ದು ಹೊಟೇಲ್ ವ್ಯವಹಾರ ಸ್ಥಗಿತಗೊಂಡಿದೆ. ಅಂಬು ಹೊಟೇಲ್ ಪಕ್ಕದಲ್ಲಿರುವ ಸೇತುವೆಯ ಮೇಲೆಯೂ ಮರಗಳು ಉರುಳಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ಅಂತರರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿದೆ ಎಂದು ಸುದ್ದಿ ತಿಳಿಯುತ್ತಲೆ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು, ಸಿಬ್ಬಂದಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂ.ಕೆ.ಸುರೇಶ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಸ್ತೆ ತೆರವಿಗೆ ಜೆ.ಸಿ.ಬಿ.ಯಂತ್ರ ಬಳಸಿ ತುರ್ತು ಪರಿಹಾರ ಕ್ರಮ ಕೈಗೊಂಡರೂ ಮಾಕುಟ್ಟದ ಅಂಬೂ ಹೊಟೇಲ್ ಬಳಿಗೆ ರಸ್ತೆ ಸಂಪರ್ಕ ಇಲ್ಲದೆ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಇಲಾಖೆಯ ಸಿಬ್ಬಂದಿಯ ಪ್ರಕಾರ ಮಾಕುಟ್ಟದ ರಾಜ್ಯ ಹೆದ್ದಾರಿಯಿಂದ ಮರ ಬಿದ್ದ ಸ್ಥಳದಿಂದ ಬೆಳಿಗ್ಗೆ 5-30ಗಂಟೆಗೆ ಹಿಂತಿರುಗಿ ಬಂದ ಅಧಿಕಾರಿಗಳು ಪುನಃ ಬೆಳಿಗ್ಗೆ 8ಗಂಟೆಗೆ ಮಾಕುಟ್ಟಕ್ಕೆ ತೆರಳಿ ಪರಿಹಾರ ಕಾರ್ಯ ಮುಂದುವರೆಸಿದ್ದಾರೆ.

ಮಾಕುಟ್ಟದ ನಿವಾಸಿ ಎಂ.ಉಮ್ಮರ್ ಎಂಬವರ ಪ್ರಕಾರ ಕಳೆದ 9ದಿನಗಳಿಂದಲೇ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು ನಿನ್ನೆ ದಿನ ಅಪರಾಹ್ನದಿಂದ ಮಳೆಯ ತೀವ್ರತೆ ಹೆಚ್ಚಿದೆ. ಗಡಿ ಭಾಗದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಮಾಕುಟ್ಟದ ಎಡ ಪಾಶ್ರ್ವದಲ್ಲಿರು ಕೂಟುಪೊಳೆ ನೀರಿನಿಂದ ತುಂಬಿದ್ದರಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ.

ಈ ಕೂಟುಪೊಳೆ ಕರ್ನಾಟಕದ ಮಾಕುಟ್ಟದ ಭಾಗ ಹಾಗೂ ಕೇರಳಕ್ಕೆ ಹೋಗುವ ಇರಿಟ್ಟಿ ರಸ್ತೆಗೂ ಸಮ ಭಾಗವಾಗಿರುವದರಿಂದ ಕೂಟು ಪೊಳೆಯ ನೀರು ಎರಡು ರಸ್ತೆಗಳಲ್ಲಿ ಹರಿಯುತ್ತಿದೆ. ಮಾಕುಟ್ಟ ವಿಭಾಗದಲ್ಲಿ ಅಲ್ಲಿನ ನಿವಾಸಿಗಳ ಪ್ರಕಾರ ಪ್ರತಿ ದಿನ ಸುಮಾರು 10ರಿಂದ14 ಇಂಚುಗಳಷ್ಟು ಮಳೆ ಸುರಿಯುತ್ತಿದ್ದು ಇದನ್ನು ಅತಿವೃಷ್ಠಿ ಪ್ರದೇಶ ಎಂದು ಗುರುತಿಸಬಹುದಾಗಿದೆ. ನಿನ್ನೆ ದಿನ ರಾತ್ರಿ ಅಂತರರಾಜ್ಯ ರಸ್ತೆ ಸಂಚಾರ ಬಂದ್ ಹಿನ್ನೆಲೆಯಲ್ಲಿ ಸುಮಾರು 600ರಿಂದ 700 ಅಂತರ ರಾಜ್ಯ ವಾಹನಗಳು ಹಿಂತಿರುಗಿ ಕೇರಳದ ಮಟ್ಟನೂರು ಮಾರ್ಗವಾಗಿ ಬಳಸು ದಾರಿಯಾದ ಮಾನಂದವಾಡಿ ಮೂಲಕ ಮೈಸೂರು, ಬೆಂಗಳೂರು, ಹಾಸನ ಹುಣಸೂರು ಇತರ ಊರುಗಳಿಗೆ ತೆರಳಬೇಕಾಯಿತು.

ಕೇರಳ ಶಾಸಕರ ಭೇಟಿ

ಕೇರಳ ರಾಜ್ಯದ ಕಣ್ಣಾನೂರಿನ ಶಾಸಕ ಸನ್ನಿಜೋಸೆಫ್ ಇಂದು ಬೆಳಿಗ್ಗೆ ಮಾಕುಟ್ಟಕ್ಕೆ ಭೇಟಿ ನೀಡಿ ಕೊಡಗು ಕೇರಳ ಅಂತರರಾಜ್ಯ ರಸ್ತೆ ಸಂಪರ್ಕದ ತೆರವಿಗೆ ಪರಿಹಾರ ಕೈಗೊಂಡರು. ಸೇತುವೆ ಮೇಲೆ ಬಿದ್ದಿದ್ದ ಮರಗಳನ್ನು ಕ್ರೈನ್ ಬಳಸಿ ಎತ್ತುವಂತೆ ಸೂಚಿಸಿದರಲ್ಲದೆ ತಕ್ಷಣ ಕ್ರೈನ್ ತರಿಸಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಸನ್ನಿ ಜೋಸೆಫ್ ಅವರು ಭಾರೀ ಮಳೆಯಿಂದ ಅಂತರರಾಜ್ಯ ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿದೆ. ತುರ್ತು ಪರಿಹಾರಕ್ಕೆ ಕೇರಳ ಸರ್ಕಾರ ಜುಲೈ 12 ರ ವರೆಗೆ ವಾಹನ ಸಂಚಾರ ನಿಷೇಧ

ಜಿಲ್ಲೆಯ ದಕ್ಷಿಣ ಭಾಗದಲ್ಲಿ ತಾ. 12 ರಂದು ನಿರಂತರವಾಗಿ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಜಿಲ್ಲೆಯಿಂದ ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪೆರುಂಬಾಡಿಯಿಂದ ಮಾಕುಟ್ಟದವರೆಗೆ ಸುಮಾರು 25 ಕ್ಕೂ ಹೆಚ್ಚು ಭಾಗಗಳಲ್ಲಿ ಗಣನೀಯ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದರೊಂದಿಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಈ ಘಟನೆಯಿಂದಾಗಿ ದಿನದ ತಡರಾತ್ರಿಯಿಂದ ತಾ. 13 ರ ಸಂಜೆಯವರೆಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಭೂ ಕುಸಿತದಿಂದ ಒಬ್ಬರು ಮೃತಪಟ್ಟಿದ್ದಾರೆ.

ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಪೆರುಂಬಾಡಿಯಿಂದ ಮಾಕುಟ್ಟದವರೆಗಿನ ಅಡಚಣೆಯನ್ನು ತೆರವುಗೊಳಿಸಲು ಹಾಗೂ ಶೀಘ್ರವಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸಂಚಾರಕ್ಕೆ ಯೋಗ್ಯವಾದ ರಸ್ತೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಎಲ್ಲಾ ವಾಹನ ಸಂಚಾರಿಗಳ, ರಸ್ತೆ ಮತ್ತು ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ(5)ರಲ್ಲಿ ಪ್ರದತ್ತವಾದ ಅದಿsಕಾರದಂತೆ ತಾತ್ಕಾಲಿಕವಾಗಿ (ಇಂದಿನಿಂದ) ತಾ. 13 ರಿಂದ ಜುಲೈ 12 ರವರೆಗೆ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ನಿಷೇಧಿತ ರಸ್ತೆಯ ಬದಲಿಗೆ ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂಗಲ-ಕುಟ್ಟ ಮಾರ್ಗ ವಾಹನ ಸಂಚರಿಸುವಂತೆ ಅವರು ತಿಳಿಸಿದ್ದಾರೆ. ಸ್ಪಂದಿಸಲಿದೆ. ಪ್ರಕೃತಿ ವಿಕೋಪಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕರ್ನಾಟಕ ರಾಜ್ಯದ ಸಂಬಂಧಿಸಿದ ಸಚಿವರು, ಉನ್ನತಾಧಿಕಾರಿಗಳೊಂದಿಗೆ ಸಂಪರ್ಕಿಸಿರುವದಾಗಿ ಹೇಳಿದರು.

ಹೆಮ್ಮಾಡು ಗ್ರಾಮ ಜಲಾವೃತ

ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಗೆ ವೀರಾಜಪೇಟೆ ನಾಲ್ಕೇರಿ ಹೆಮ್ಮಾಡು ಗ್ರಾಮವು ಸಂಪೂರ್ಣ ಜಲಾವೃತಗೊಂಡಿದ್ದು ದಿನನಿತ್ಯದ ಜನಜೀವನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಕಾಕೋಟುಪರಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಮ್ಮಾಡು ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಬೇತ್ರಿ ಹೆಮ್ಮಾಡು ಮೂಲಕ ಬಲಮುರಿ,ಪಾರಣೆ ಸಂಪರ್ಕಿಸುವ ಸಂಪರ್ಕ ರಸ್ತೆಯಾಗಿದೆ. ಬೆಳ್ಳುಮಾಡು ನದಿಗೆ 1965 ನೇ ಇಸವಿಯಲ್ಲಿ ನಿರ್ಮಿತಗೊಂಡ ಕಿರು ಸೇತುವೆಯ ಮೇಲೆ 6 ಅಡಿಗಿಂತಲೂ ಹೆಚ್ಚು ನೀರು ಹರಿಯುತ್ತಿದ್ದು ರಸ್ತೆ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಈ ಗ್ರಾಮದಿಂದ 20ಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಇತರೆಡೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಮಳೆಗಾಲದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಲು ಹರಸಾಹಸ ಪಡಬೇಕಾಗುತ್ತದೆ.

ಸೇತುವೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು 50ಕ್ಕೂ ಅಧಿಕ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳೆ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಸುರಕ್ಷತೆಗಾಗಿ ನದಿಗೆ ಯಾವದೇ ತಡೆಗೋಡೆ ಇಲ್ಲ. ಸ್ಪಲ್ಪ ಜಾಗ್ರತೆ ತಪ್ಪಿದರು ಅಪಾಯ ತಪ್ಪಿದಲ್ಲ. ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲು ಹಲವಾರು ಬಾರಿ ಸಂಬಂಧಿಸಿದ ಇಲಾಖೆಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನ ವಾಗಿಲ್ಲ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಿರು ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಹೆಮ್ಮಾಡು ಭದ್ರಕಾಳಿ ದೇವಾಲಯ ಸಮಿತಿ ಅಧ್ಯಕ್ಷ ಮಧುಕುಮಾರ್ ಆಗ್ರಹಿಸಿದ್ದಾರೆ.

ಮೂಲಸ್ಥಾವರ ಮುಳುಗಡೆ: ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬೇತ್ರಿಯ ಮೂಲ ಸ್ಥಾವರ ಸಂಪೂರ್ಣ ಮುಳುಗಡೆಯಾಗಿದ್ದು ಮೋಟಾರ್ ಮಾತ್ರ ಚಾಲನೆಯಲ್ಲಿದೆ. ಮೋಟಾರ್‍ಗೆ ಚಾಲನೆ ಮಾಡಿದರೆ ನೀರು ಸರಬರಾಜು ಪೈಪ್‍ಗೆ ಮರಳು ತುಂಬಿಕೊಳ್ಳವ ಸಾಧ್ಯತೆ ಹೆಚ್ಚಿದೆ. ನೀರು ಪೂರ್ಯೆಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಮುಖ್ಯಾಧಿಕಾರಿ ಹೇಮಕುಮಾರ್ ತಿಳಿಸಿದ್ದಾರೆ. ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ 8ಗಂಟೆಯ ತನಕ 3.39 ಇಂಚುಗಳಷ್ಟು ಮಳೆ ಸುರಿದಿದೆ. ವೀರಾಜಪೇಟೆ ವಿಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಕುಟ್ಟದಲ್ಲಿ ಲಾರಿ ಇತ್ಯಾದಿ ವಾಹನಗಳ ಶುಚಿತ್ವ ಕಾರ್ಯವನ್ನು ಹಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದ ಕಾರ್ಮಿಕ ಮಂಗಳೂರು ಮೂಲದ ಶ್ರೀನಿ ಎಂಬವರ ಮನೆ ಜಲಾವೃತ್ತಗೊಂಡಿದ್ದು ಜೀವಾಪಾಯ ದಿಂದ ಪಾರಾಗಿದ್ದಾರೆ. ಕರೀಮ್ ಎಂಬವರ ಮನೆಯೂ ಜಲಾವೃತ ಗೊಂಡು ಕೊಚ್ಚಿಹೋಗುವ ಭೀತಿಯಲ್ಲಿದೆ. ಮಾಕುಟ್ಟ ಸೇತುವೆಗೂ ಮುನ್ನ ಸಿಗುವ ಸುಮಾರು ಸ್ವಾತಂತ್ರ್ಯಪೂರ್ವದ ಅಬ್ದುಲ್ಲಾ ಹೋಟೆಲ್ ಮುಳುಗಡೆಯಾಗಿದ್ದು ಕುಸಿಯುವ ಭೀತಿ ಎದುರಾಗಿದೆ. ಅಲ್ಲಿನ ಸರ್ಕಾರಿ ಮಲಯಾಳಿ ಕಿರಿಯ ಪ್ರಾಥಮಿಕ ಶಾಲೆ ಅರ್ಧ ಭಾಗ ಮುಳುಗಡೆಯಾಗಿದ್ದು ನೀರಿನ ಮಟ್ಟ ಏರುಮುಖದಲ್ಲಿದೆ ಎಂದು ಅಲ್ಲಿನ ಶಿಕ್ಷಕ ವಿ.ವಿ.ಸಜೇಶ್ ಕುಮಾರ್ ತಿಳಿಸಿದ್ದಾರೆ.

ನೆರೆಯ ಕೇರಳದ ಪೊಲೀಸ್ ಪಡೆ, ಅಗ್ನಿಶಾಮಕ ದಳ ಕಾರ್ಯಾ ಚರಣೆಯಲ್ಲಿ ಪಾಲ್ಗೊಂ ಡಿದ್ದು, ವೀರಾಜಪೇಟೆ ಪೊಲೀಸ್ ಸಿಬ್ಬಂದಿ ಯೂ ತುರ್ತು ನೆರವು ನೀಡುತ್ತಿದ್ದಾರೆ. ಅಲ್ಲಿನ ಕೊಡಗು ಪೊಲೀಸ್ ಚೆಕ್ ಪೋಸ್ಟ್, ವಸತಿ ಗೃಹ ಹಾಗೂ ಬ್ರಹ್ಮಗಿರಿ ವನ್ಯ ಜೀವಿ ವಲಯದ ಸಿಬ್ಬಂದಿ ವಸತಿಗೃಹಕ್ಕೆ ಇದುವರೆಗೂ ಯಾವದೇ ಹಾನಿ ಸಂಭವಿಸಿಲ್ಲದಿದ್ದರೂ ಆತಂಕ ಮನೆ ಮಾಡಿದೆ.

ಬೆಟ್ಟ ಕುಸಿತದಿಂದ ಮರಗಳು ಧರೆಗೆ ಉರುಳಿರುವ ಸಾಧ್ಯತೆ ಇದೆ ಎಂದು ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಮಾಕುಟ್ಟದ ಚೀಪೆ ಹೊಳೆಯ ಕೆರ್ಟಿ ಹಾಗೂ ಉರುಟ್ಟಿ ಅರಣ್ಯ ಶ್ರೇಣಿಯಲ್ಲಿ ಕಳೆದ 24 ಗಂಟೆಯಲ್ಲಿ 10 ಇಂಚಿಗೂ ಅಧಿಕ ಮಳೆಯಾಗಿರುವ ಹಿನ್ನೆಲೆ ಮೇಘ ಸ್ಪೋಟದಿಂದಾಗಿ ಮಾಕುಟ್ಟದಲ್ಲಿ ನಿನ್ನೆ 8 ಗಂಟೆಯ ನಂತರ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಕೆರ್ಟಿ ಅರಣ್ಯ ಶ್ರೇಣಿಯ ವಲಯಾರಣ್ಯಾ ಧಿಕಾರಿ ಸುಹಾನ ಹರೀಶ್ ರಜೆಯಲ್ಲಿದ್ದು ಪ್ರಸನ್ನ ಉಸ್ತುವಾರಿ ಯಲ್ಲಿದ್ದು ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ. ತಾ. 13 ರಂದು ಮಳೆ ತುಸು ಇಳಿಮುಖವಾಗಿದೆ ಎಂದು ತಿಳಿದು ಬಂದಿದೆ.

- ಚಿತ್ರ, ವರದಿ : ಎನ್.ಎನ್. ದಿನೇಶ್, ಡಿ.ಎಂ. ರಾಜ್‍ಕುಮಾರ್, ಟಿ.ಎಲ್. ಶ್ರೀನಿವಾಸ್, ಸುದ್ದಿಪುತ್ರ, ಕೆ.ಕೆ.ಎಸ್.