ಮಡಿಕೇರಿ, ಜೂ. 13: ಒಂದು ವಾರದಿಂದ ಸುರಿಯುತ್ತಿರುವ ಮಳೆ ಅಲ್ಪ ಸ್ವಲ್ಪ ಬಿಡುವಿನೊಂದಿಗೆ ಮತ್ತೆ ಮುಂದುವರೆದಿದ್ದು, ಅಲ್ಲಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಸಂಭವಿಸತೊಡಗಿದೆ. ತಲಕಾವೇರಿ-ಭಾಗಮಂಡಲ ವ್ಯಾಪ್ತಿಯಲ್ಲಿ ಮುಂದುವರಿದ ಮಳೆಯಿಂದ ನಾಪೋಕ್ಲು ಮಾರ್ಗದ ರಸ್ತೆ ಮುಳುಗಡೆಗೊಂಡು, ಸಾರ್ವಜನಿಕರಿಗೆ ದೋಣಿ (ರ್ಯಾಫ್ಟಿಂಗ್ ಬೋಟ್) ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಅರ್ಧ ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಚಾರಕ್ಕೆ ಸಮಸ್ಯೆಯಾಗಿಲ್ಲ. ಹೀಗಿದ್ದೂ ಭಾಗಮಂಡಲ ಕ್ಷೇತ್ರಕ್ಕೆ ಬಂದು ಹೋಗುವವರು ಸೇರಿದಂತೆ ಸ್ಥಳೀಯ ನಿವಾಸಿಗಳ ಸಂಚಾರ ಕುರಿತು ಪೊಲೀಸ್-ಕಂದಾಯ, ಗೃಹರಕ್ಷಕ ಸಿಬ್ಬಂದಿ ನಿಗಾ ವಹಿಸಿದ್ದಾರೆ.ಇನ್ನು ಕಾವೇರಿ ಹೊಳೆದಂಡೆಯ ಹೊದವಾಡ-ನಾಪೋಕ್ಲು ಮಾರ್ಗದಲ್ಲಿ 3 ಅಡಿಗಳಷ್ಟು ನೀರಿದ್ದು, ಸಂಚಾರ ಸ್ಥಗಿತಗೊಂಡಿದೆ. ಪಾರಾಣೆ-ನಾಪೋಕ್ಲು ರಸ್ತೆಯಲ್ಲಿ 2 ಅಡಿ ನೀರಿದೆ. ಕಳೆದ 24 ಗಂಟೆಗಳಿಂದ ತಲಕಾವೇರಿಗೆ 8.40 ಇಂಚು ಮಳೆಯಾಗಿದ್ದು, ಭಾಗಮಂಡಲಕ್ಕೆ 5.17 ಇಂಚು ಮಳೆಯಾಗಿದೆ. ನಾಪೋಕ್ಲು ಸುತ್ತಮುತ್ತ 7.65 ಇಂಚು ಧಾರಾಕಾರ ಮಳೆಯಾಗಿದೆ. ಪೇರೂರು, ಬಲ್ಲಮಾವಟಿ ಸುತ್ತಮುತ್ತ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯೊಂದಿಗೆ ಆರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಅಲ್ಲಿನ ನಿವಾಸಿಗಳು ಕಾರ್ಗತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಗೆ 1.64 ಇಂಚು, ಸಂಪಾಜೆ 1.66 ಇಂಚು ಮಳೆಯಾಗಿದ್ದು, ಚಾಮುಂಡೇಶ್ವರಿ ನಗರದಲ್ಲಿ ತಡೆಗೋಡೆ ಕುಸಿದು ವ್ಯಕ್ತಿಯೊಬ್ಬರ ಮನೆ ಅಪಾಯದಲ್ಲಿದೆ. ವೀರಾಜಪೇಟೆ: ವೀರಾಜಪೇಟೆ ತಾಲೂಕು ಕೇಂದ್ರಕ್ಕೆ 3.27 ಇಂಚು ಮಳೆಯಾಗಿದೆ. ಅಮ್ಮತ್ತಿ 2.04 ಇಂಚು, ಬಾಳೆಲೆ 2.32 ಮಳೆಯಾದರೆ, ಹುದಿಕೇರಿ,
(ಮೊದಲನೇ ಪುಟದಿಂದ) ಶ್ರೀಮಂಗಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಇಂಚು ದಾಖಲೆಯ ಮಳೆಯಾಗಿದೆ. ಪೊನ್ನಂಪೇಟೆ 8.86 ಇಂಚು ಹಾಗೂ ಇತರೆಡೆಗಳಲ್ಲಿ ಸರಾಸರಿ 3 ಇಂಚು ಮಳೆ ವರದಿಯಾಗಿದೆ.
ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನಲ್ಲಿ ರಾತ್ರಿಯಿಂದ ಮಳೆ ಅಬ್ಬರದಲ್ಲಿ ಸುಧಾರಣೆ ಗೋಚರಿಸಿದೆ. ತಾಲೂಕು ಕೇಂದ್ರಕ್ಕೆ 1.18 ಇಂಚು, ಶಾಂತಳ್ಳಿ 3.34 ಇಂಚು, ಕೊಡ್ಲಿಪೇಟೆ 1 ಇಂಚು, ಶನಿವಾರಸಂತೆ 0.75 ಇಂಚು, ಕುಶಾಲನಗರ 0.89 ಇಂಚು ಹಾಗೂ ಸುಂಟಿಕೊಪ್ಪ 0.48 ಇಂಚು ಮಳೆ ವರದಿಯಾಗಿದೆ.
ಅಲ್ಲಲ್ಲಿ ಹಾನಿ: ಗರ್ವಾಲೆ ನಿವಾಸಿ ಬೇಬಿ, ಗರಗಂದೂರು ನಿವಾಸಿ ಕಮಲ, ಕೂತಿ ಗ್ರಾಮದ ದೇವಮ್ಮ, ಕಲ್ಕಂದೂರು ಜೀನತ್, ಚೌಡ್ಲು ಸಿದ್ಧಯ್ಯ, ಹರಗ ಬೋಜಮ್ಮ ಎಂಬವರ ಮನೆಗಳಿಗೆ ವಿಪರೀತ ಗಾಳಿ-ಮಳೆಯಿಂದ ಹಾನಿಯುಂಟಾಗಿದೆ. ಪೊನ್ನಂಪೇಟೆ ಸನಿಹದ ಕೆ. ಗಣಪತಿ ಎಂಬವರ ಮನೆಗೂ ಮರ ಬಿದ್ದು ನಷ್ಟ ಎದುರಾಗಿದೆ.
ಮಡಿಕೇರಿ ಗ್ರಾಮಾಂತರ ಕ್ಲೋಸ್‍ಬರ್ನ್ ಸರಕಾರಿ ಶಾಲಾ ಕಟ್ಟಡ ಶಿಥಿಲಗೊಂಡು ಬೀಳುವ ಪರಿಸ್ಥಿತಿಯಲ್ಲಿದೆ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಹಾರಂಗಿ ನೀರು ಏರಿಕೆ: ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತ ಮಳೆಯಿಂದಾಗಿ ಹಾರಂಗಿ ಜಲಾಶಯ ನೀರಿನ ಮಟ್ಟ ಏರತೊಡಗಿದ್ದು, ಗರಿಷ್ಠ 2859 ಅಡಿಗಳಿಗಿಂತ ಪ್ರಸಕ್ತ 2820.12 ಅಡಿಯೊಂದಿಗೆ ಭರ್ತಿಗೊಳ್ಳಲು 30 ಅಡಿಯಷ್ಟು ವ್ಯತ್ಯಾಸ ಗೋಚರಿಸಿದೆ. ಜಲಾಶಯಕ್ಕೆ 5063 ಕ್ಯೂಸೆಕ್ಸ್ ಒಳ ಹರಿವು ಹಾಗೂ 30 ಕ್ಯೂಸೆಕ್ಸ್ ಹೊರಗೆ ನದಿಗೆ ಬಿಡಲಾಗಿದೆ.
ಮುಂದುವರಿದ ಕತ್ತಲೆ: ಕಳೆದ ಆರು ದಿನಗಳಿಂದ ಅನೇಕ ಹಳ್ಳಿಗಾಡುಗಳಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲೆ ಆವರಿಸಿದೆ. ಚೆಸ್ಕಾಂ ಸಿಬ್ಬಂದಿ ನಿರಂತರ ದುರಸ್ತಿ ಕೆಲಸದಲ್ಲಿ ತೊಡಗಿದ್ದಾರೆ.
ಚೆಸ್ಕಾಂ ಅಧಿಕಾರಿ ಕೋರಿಕೆ
ವೀರಾಜಪೇಟೆಯಿಂದ 33/11 ಕೆವಿ ಮೂರ್ನಾಡು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 33ಕೆವಿ ಮಾರ್ಗಕ್ಕೆ ಬೇತ್ರಿ ಕಾವೇರಿ ಹೊಳೆಯ ಪಕ್ಕದಲ್ಲಿ ಒಂದು ಮರ ಬಿದ್ದು ವಾಹಕ ತುಂಡಾಗಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮೂರ್ನಾಡು ವಿದ್ಯುತ್ ಕೇಂದ್ರದಲ್ಲಿ ಸಂಬಂಧಿಸಿದ ಮೂರ್ನಾಡು, ಮರುಗೋಡು, ನಾಪೋಕ್ಲು, ಪಾರಾಣೆ, ಕಕ್ಕಬೆ, ಅರೆಕಾಡು, ಐಯ್ಯಂಗೇರಿ, ಎಮ್ಮೆಮಾಡು ಕುಂಜಿಲಗೇರಿ, ಹೊದ್ದೂರು ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೇತ್ರಿ ಬಳಿ ಹಾನಿ
ಮೂರ್ನಾಡು : ಬೇತ್ರಿ ಕಾವೇರಿ ನದಿ ಬಳಿ ವಿದ್ಯುತ್ ಕಂಬಕ್ಕೆ ಮರ ಉರುಳಿ ಬಿದ್ದು ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬುಧವಾರ ಬೆಳಿಗ್ಗೆ ಸುರಿದ ಮಳೆಗೆ ಬೇತ್ರಿ ಸೇತುವೆ ಬಳಿ 33ಕೆವಿ ಹಾಗೂ 11ಕೆವಿ ವಿದ್ಯುತ್ ಮಾರ್ಗಕ್ಕೆ ಮರ ಉರುಳಿ ಬಿದ್ದು ಕಂಬಗಳು ಜಖಂಗೊಂಡು ಹೊಳೆಗೆ ಬಿದ್ದಿದೆ. ಹೊಳೆ ಬದಿಯಲ್ಲಿದ್ದ ಕಂಬಕ್ಕೆ ಮರ ಉರುಳಿದ ಪರಿಣಾಮ ಮತ್ತೊಂದು ಬದಿಯಲ್ಲಿದ್ದ ಕಂಬ ತುಂಡಾಗಿ ತಂತಿಗಳು ಹೊಳೆಗೆ ಬಿದ್ದಿದೆ. ಇದರಿಂದ ವೀರಾಜಪೇಟೆ ಮೂರ್ನಾಡು ವಿದ್ಯುತ್ ಮಾರ್ಗವು ಕಡಿತಗೊಂಡಿದ್ದು ಮೂರ್ನಾಡು ನಾಪೋಕ್ಲು ವ್ಯಾಪ್ತಿಯ ಪ್ರದೇಶಗಳಿಗೆ ಗುರುವಾರ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಸÀಂಕಷ್ಟದಲ್ಲಿ ನದಿದಡದ ಗ್ರಾಮಸ್ಥರು : ದೋಣಿ ಇಲ್ಲದೆ ಪರದಾಟ
ನಾಪೋಕ್ಲು : ಇಲ್ಲಿಗೆ ಸಮೀಪದ ದೋಣಿಕಡು ಎಂಬಲ್ಲಿ ಧಾರಾಕಾರ ಮಳೆಯಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ಹಾಗೂ ಬೇಂಗೂರು ಗ್ರಾಮ ಪಂಚಾಯಿತಿಗಳ ನಡುವೆ ಕಾವೇರಿ ನದಿ ಪ್ರವಾಹ ಏರಿದ್ದು, ಇಲ್ಲಿನ ಕೂಡಕಂಡಿ ಕುಟುಂಬಸ್ಥರು, ಪರಂಬು ಪೈಸಾರಿಯ ಮಂದಿ ಸೇರಿದಂತೆ ಸುಮಾರು 60ಕ್ಕೂ ಅಧಿಕ ಮನೆಗಳ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಮ್ಮೆಮಾಡು, ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕುಟುಂಬಗಳು ಕಾವೇರಿ ನದಿ ತಟದಲ್ಲಿ ವಾಸವಾಗಿದ್ದು, ಸಮೀಪದ ಚೇರಂಬಾಣೆಗೆ ಸಂಪರ್ಕ ಕಲ್ಪಿಸುವ ಬೇಂಗೂರು ಗ್ರಾಮದ ಮೂಲಕ ಸಂಚಾರ ವ್ಯವಸ್ಥೆ ಕೈಗೊಂಡಿದ್ದರು. ವಿವಿಧ ಗ್ರಾಮಗಳಿಗೆ ಪಡಿಯಾಣಿ, ಎಮ್ಮೆಮಾಡು ಹಾಗೂ ಬೇಂಗೂರು ಗ್ರಾಮಗಳ ಕೂಲಿ ಕಾರ್ಮಿಕರು ಸಾರ್ವಜನಿಕರು ಸುತ್ತು ಬಳಸಿ ಸಾಗುವ ಬದಲು ಮಳೆಗಾಲದಲ್ಲಿ ದೋಣಿಯ ಮೊರೆ ಹೋಗಿದ್ದರು. ಪ್ರತಿವರ್ಷ ದೋಣಿ ಮೂಲಕ ಸಾಗುವ ಮಂದಿ ಸಂಚಾರ ವ್ಯವಸ್ಥೆ ಕೈಗೊಂಡಿದ್ದರು. ಇದೀಗ ದೋಣಿ ದುರಸ್ತಿಗೀಡಾಗಿದ್ದು, ನದಿ ತಟದ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ಹಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ದೋಣಿಯ ಬಳಕೆ ಆಗುತ್ತಿತ್ತು. ಕಾವೇರಿ ನದಿ ದಾಟಲು ಗ್ರಾಮಸ್ಥರು ದೋಣಿಯನ್ನು ಬಳಸುತ್ತಿದ್ದರು. ಜಿಲ್ಲಾಡಳಿತದಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ ಮಳೆಗಾಲದಲ್ಲಿ ಸಂಪರ್ಕಕ್ಕೆ ದೋಣಿಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬೇಂಗೂರು ಗ್ರಾಮ ಪಂಚಾಯಿತಿ ವತಿಯಿಂದ ಈ ಹಿಂದೆ ದೋಣಿ ಚಾಲಕನಿಗೆ ರೂ.1500 ಮಾಸಿಕ ವೇತನವನ್ನು ನೀಡಲಾಗುತ್ತಿತ್ತು ಎನ್ನಲಾಗಿದೆ. ಇದೀಗ ದೋಣಿ ಸಂಪೂರ್ಣ ದುರಸ್ತಿಗೊಳಗಾಗಿದೆ. ಕಳೆದ ವರ್ಷ ದೋಣಿ ದುರಸ್ತಿಗೆ ಬಂದ ಕಾರಣ ದುರಸ್ತಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಗ್ರಾಮ ಪಂಚಾಯಿತಿಯಿಂದ ಹಣ ಒದಗಿಸಲು ಸಾಧ್ಯವಿಲ್ಲ ಎನ್ನಲಾಗಿದ್ದು ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಮೂಲಕ ಜೀರ್ಣಾವಸ್ಥೆಯಲ್ಲಿರುವ ದೋಣಿಯನ್ನು ಸರಿಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸಂಚಾರಕ್ಕೆ ದೋಣಿ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರು ಪರದಾಡು ವಂತಾಗಿದೆ. ಮಳೆಗಾಲದ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಯಾವದೇ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಪ್ರವಾಹದ ಅವಧಿಯಲ್ಲಿ ಉಪಯೋಗಕ್ಕೆ ಸಿಗದ ದೋಣಿಯಿಂದ ಗ್ರಾಮಸ್ಥರಿಗೆ ಉಪಯೋಗ ಆಗುವದು ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರ ಮನದಲ್ಲಿ ಮೂಡಿದೆ.
ನೀರಿನ ಮಟ್ಟ ಏರಿಕೆ
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿ ನದಿ ಹರಿಯುತ್ತಿರುವ ಕೊಟ್ಟಮುಡಿ ಹಾಗೂ ಬೊಳಿಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ. ನಾಪೆÇೀಕ್ಲು - ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿಯೂ ಕಾವೇರಿ ನದಿ ಪ್ರವಾಹ ರಸ್ತೆಯ ಮೇಲಿದ್ದು ವಾಹನ ಸಂಚಾರ ಕಡಿತಗೊಂಡಿದೆ. ವಿವಿಧೆಡೆಗಳಲ್ಲಿ ನೀರಿನ ಪ್ರವಾಹ ಏರುತ್ತಿದ್ದು, ಜನಸಾಮಾನ್ಯರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ನಾಪೋಕ್ಲು-ಪಾರಾಣೆ ಸಂಪರ್ಕ ಕಲ್ಪಿಸುವ ಎತ್ತುಕಡು ಹೊಳೆಯಲ್ಲಿ ನೀರಿನ ಪ್ರವಾಹ ಏರಿದ್ದು ಸಂಚಾರ ಸ್ಥಗಿತಗೊಂಡಿದೆ. ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿನೀರಿನ ಪ್ರವಾಹ ಸಂಪರ್ಕ ರಸ್ತೆಯ ಮಟ್ಟದಲ್ಲಿ ಹರಿಯುತ್ತಿದೆ. ಇಲ್ಲಿನ ಮರ್ಕಝ್ ಪಬ್ಲಿಕ್ ಶಾಲೆಯ ಬಳಿ ಮುಖ್ಯ ರಸ್ತೆಯಲ್ಲಿ ಧಾರಾಕಾರ ನೀರು ಹರಿಯುತ್ತಿದ್ದು ರಸ್ತೆಯೇ ಹೊಳೆಯಂತಾಗಿದೆ. ಮರಂದೋಡದ ಕಬ್ಬಿನ ಕಾಡು ಬಳಿ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಸೇತುವೆಯ ಒಂದು ಭಾಗ ಕುಸಿದುಬಿದ್ದು ಸಂಪೂರ್ಣ ಅಪಾಯದ ಸ್ಥಿತಿಗೆ ತಲುಪಿದೆ.
ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯುವಂತಾಗಿದೆ. ವಿದ್ಯುತ್‍ಲೈನ್ ದುರಸ್ತಿಪಡಿಸಿದರೂ ಪದೇಪದೇ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಗ್ರಾಮೀಣ ಪ್ರದೇಶದ ಮಂದಿಗೆ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿದೆ. ಇಲ್ಲಿನ ಇಂದಿರಾನಗರದ ಮಾಜಿ ಸೈನಿಕ ವಿಧವೆ ರೋಹಿಣಿ ಅವರ ನಿವಾಸದ ಬಳಿ ಬರೆಕುಸಿದಿದ್ದು ತೀವ್ರ ಅಪಾಯ ಎದುರಾಗಿದೆ. ಸ್ಥಳಕ್ಕೆ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಕೊಂಡೀರ ಗಣೇಶ್ ತೆರಳಿದ್ದು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಪೇರೂರು ಗ್ರಾಮದ ಪಾಲೇರ ಸುಬ್ಬಯ್ಯ ಎಂಬವರ ಮನೆಯ ಗೋಡೆ ಕುಸಿದಿದ್ದು ಭಾರಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ನಾಪೋಕ್ಲು ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ದಾಪುರ : ಗಂಜಿ ಕೇಂದ್ರಕ್ಕೆ ಸ್ಥಳಾಂತರ
ಸಿದ್ದಾಪುರ :ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಗ್ರಾಮದ ಬರಡಿಯ ನಾಲ್ಕು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಲ್ಕು ಕುಟುಂಬಗಳನ್ನು ಸ್ಥಳೀಯ ಅಂಗನವಾಡಿಯಲ್ಲಿ ತೆರೆದಿರುವ ಗಂಜಿ ಕೇಂದ್ರಕ್ಕೆ ತೆರಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮನವೊಲಿಸಿದರು. ಆದರೆ ನಿವಾಸಿಗಳು ಗಂಜಿ ಕೇಂದ್ರಕ್ಕೆ ತೆರಳಲು ನಿರಾಕರಿಸಿದರು. ನಂತರ ನಾಲ್ಕು ಕುಟುಂಬಗಳಿಗೆ ಕಂದಾಯ ಇಲಾಖೆಯ ವತಿಯಿಂದ ಅಕ್ಕಿ, ತರಕಾರಿ ಸಾಮಗ್ರಿಗಳನ್ನು ನೀಡಿ ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಯಿತು. ಇದೇ ರೀತಿ ಮಳೆಯ ರಭಸ ಮುಂದುವರಿದಲ್ಲಿ ಬರಡಿಯ ನದಿ ದಡದಲ್ಲಿರುವ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಕಂಡು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಸೋಮವಾರಪೇಟೆ ತಹಶೀಲ್ದಾರ್ ಭಟ್ಕರ್ ಅವರ ನೇತೃತ್ವದಲ್ಲಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಅನುಷ, ಪಿ.ಡಿ.ಒ. ನಂಜುಂಡ ಸ್ವಾಮಿಯವರು ಜಲಾವೃತಗೊಳ್ಳುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲಾ ಸಿದ್ಧತೆ ಕೈಗೊಂಡಿದ್ದಾರೆ.
ಈ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಕರಡಿಗೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೇ ಕಾವೇರಿ ಸೇತುವೆಯ ಸಮೀಪವಿರುವ ಸಿ.ಕೆ. ಪೂವಯ್ಯ ಅವರ ಗದ್ದೆ ಜಲಾವೃತ ಗೊಂಡಿದೆ. ಕರಡಿಗೋಡಿನಲ್ಲಿ ಪ್ರವಾಹ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜ್ ಅವರ ನೇತೃತ್ವದಲ್ಲಿ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಲೆಕ್ಕಿಗ ಮಂಜುನಾಥ್, ಸಹಾಯಕರಾದ ಕೃಷ್ಣ, ಮಂಜು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಶನಿವಾರಸಂತೆಯಲ್ಲಿ ಬಿರುಸು ಮಳೆ
ಪಟ್ಟಣ ವ್ಯಾಪ್ತಿಯಲ್ಲಿ ಬುಧವಾರ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಧ್ಯಾಹ್ನದವರೆಗೆ ಬಿಡುವು ನೀಡುತ್ತಾ ಸುರಿಯುತ್ತಿದ್ದ ಮಳೆ ಸಂಜೆ 4ರ ನಂತರ ಬಿರುಸಾಗಿ ಸುರಿಯಿತು. ಒಂದು ಇಂಚು ಮಳೆಯಾಗಿದೆ.
ಮಾರ್ಚ್ 15 ರಿಂದ ಮಳೆ ಆರಂಭವಾಗಿದ್ದು, ಈವರೆಗೆ 20 ಇಂಚು ಮಳೆಯಾಗಿದೆ. ಮುಂಗಾರು ಮಳೆ ಹಂತಹಂತವಾಗಿ ಸುರಿಯದೆ ಬಿಡದೇ ಸುರಿದ ಪರಿಣಾಮ ಕಾಫಿ ತೋಟಗಳಲ್ಲಿ ಬೆಳೆಗಾರರಿಗೆ ಕೆಲಸದ ಬಗ್ಗೆ ಗೊಂದಲ ಮೂಡಿದೆ.
ಸಿದ್ಧತೆ ಇಲ್ಲದ ಕಾರಣ ಯಾವ ಕೆಲಸ ಮಾಡಬೇಕೆಂದು ತೋಚದೆ ಕಾಫಿ ತೋಟದಲ್ಲಿ ರಿಪೇರಿ ಗಿಡ ಹಾಕುವ ಹಾಗೂ ಪಾನಿವಾಳ ಕಡಿಯುವ ಕೆಲಸ ಮಾಡುತ್ತಿದ್ದೇವೆ. ಮಳೆ ಬಿಡುವು ಕೊಟ್ಟರೆ ಗೊಬ್ಬರ ಹಾಕಬಹುದು ಎನ್ನುತ್ತಾರೆ ಟಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್.
- ವರದಿ : ವಾಸು, ದುಗ್ಗಳ ಸದಾನಂದ, ಟಿ.ಸಿ.ಎನ್, ನರೇಶ್ಚಂದ್ರ.