ಸೋಮವಾರಪೇಟೆ, ಜೂ. 11: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೋಟೆಯೂರು, ಅಜ್ಜಳ್ಳಿ ಗ್ರಾಮದ ಪೈಸಾರಿ ಜಾಗದಲ್ಲಿ ಪಂಚಾಯಿತಿ ವ್ಯಾಪ್ತಿಯ ಕಸವಿಲೇವಾರಿ ಘಟಕ ನಿರ್ಮಿಸಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಪರಿಶೀಲಿಸಲು ಗ್ರಾ.ಪಂ. ಅಧ್ಯಕ್ಷೆ ಜಿ.ವಿ. ನಾಗರತ್ನಮ್ಮ, ಪಿಡಿಓ ಲಿಖಿತ ಅವರುಗಳು ಅಜ್ಜಳ್ಳಿ ಗ್ರಾಮಕ್ಕೆ ತೆರಳಿದ ಸಂದರ್ಭ, ಜಾನುವಾರುಗಳನ್ನು ಮೇಯಿಸಲು ಇರುವ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲು ಬಿಡುವದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.

ಗುರುತಿಸಲಾಗಿರುವ ಜಾಗದ ಪಕ್ಕದಲ್ಲಿ ಹೊನವಳ್ಳಿ ಹೊಳೆ ಹರಿಯುತ್ತಿದ್ದು, ಹೇಮಾವತಿ ಜಲಾಶಯ ಸೇರಲಿದೆ. ಕಸ ವಿಲೇವಾರಿಯಿಂದ ಪರಿಸರಕ್ಕೆ ಧಕ್ಕೆಯಾಗುವ ಸಂಶಯವಿದೆ ಎಂದು ಗ್ರಾಮಸ್ಥರು ತಿಳಿಸಿದರು. ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದು ಎಂದು ಪಿಡಿಓ ಹೇಳಿದರು. ಕೋಟೆಯೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗೋವಿಂದ, ಕಾರ್ಯದರ್ಶಿ ಅಜ್ಜಳ್ಳಿ ನವೀನ್, ಗ್ರಾ.ಪಂ. ಸದಸ್ಯರಾದ ಎಸ್.ಎನ್. ಪೃಥ್ವಿ, ಹೆಚ್.ಎಂ. ಜಿತೇಂದ್ರ, ಪ್ರಮುಖರಾದ ಎಸ್.ಬಿ. ಭರತ್ ಕುಮಾರ್, ಗೌಡಳ್ಳಿ ಸುನಿಲ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

.