ಮಡಿಕೇರಿ, ಜೂ. 11: ಸರ್ಕಾರಿ ಶಾಲೆ ಎನ್ನುವ ಕೀಳರಿಮೆಯನ್ನು ಬಿಟ್ಟು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಬೇಕೆಂದು ಕರೆ ನೀಡಿರುವ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್, ಇದಕ್ಕೆ ಪೋಷಕರ ಸಹಕಾರ ಅಗತ್ಯವೆಂದು ತಿಳಿಸಿದ್ದಾರೆ.
ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ಶೇ.98 ರಷ್ಟು ಸಾಧನೆ ಮಾಡಿದ್ದು, ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಚಂದ್ರಶೇಖರ್, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಹುದ್ದೆಗಳು ದೊರೆಯುತ್ತದೆ ಎನ್ನುವ ಭ್ರಮೆಯಿಂದ ಪೋಷಕರು ಹೊರ ಬಂದು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಬೇಕೆಂದು ಕರೆ ನೀಡಿದರು.
ಪ್ರಗತಿಪರ ರೈತ ತೇಜಸ್ ನಾಣಯ್ಯ ಶಿಕ್ಷಕರ ಪರಿಶ್ರಮವೇ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಕಾರಣವಾಗಿದ್ದು, ಅಂತಹ ಶಿಕ್ಷಕರನ್ನು ದಲಿತ ಸಂಘರ್ಷ ಸಮಿತಿ ಗುರುತಿಸಿ ಸನ್ಮಾನಿಸುತ್ತಿರು ವದು ಮಾದರಿ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ ಸಮಿತಿ ವತಿಯಿಂದ ಕಳೆದ ಎಂಟು ವರ್ಷಗಳಿಂದ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದ್ದು, ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸಂಘಟನೆ ಕಟಿಬದ್ಧವಾಗಿದೆ ಎಂದರು.
ಸಮಿತಿಯ ತಾಲೂಕು ಸಂಚಾಲಕ ಎ.ಪಿ. ದೀಪಕ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿದಾಗ ಮಾತ್ರ ಶೈಕಣಿಕವಾಗಿ ಪ್ರಗತಿ ಕಾಣಲು ಸಾಧ್ಯವೆಂದರು.
ಶಾಲೆಯ ಮುಖ್ಯೋಪಾಧ್ಯಯ ರಾಮಚಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ 11 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು. ಪ್ರಮುಖರಾದ ಪೈಕೆರ ಮನೋಜ್, ದಿನೇಶ್ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು