ಕುಶಾಲನಗರ, ಜೂ. 11: ಪರಿಸರ ಸಂರಕ್ಷಣೆಯೊಂದಿಗೆ ನದಿ ತಟಗಳ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕೆಲಸ ಪ್ರತಿಯೊಬ್ಬರೂ ತೊಡಗಿಸಿ ಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಜಿ.ಗಣೇಶನ್ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕುಶಾಲನಗರ ಪಟ್ಟಣ ಪಂಚಾಯ್ತಿ, ಆರ್ಟ್ ಆಫ್ ಲಿವಿಂಗ್, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕೊಡಗು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್, ಟಾಟಾ ಕಾಫಿ ಸಂಸ್ಥೆ ಸದಸ್ಯರು ಹಮ್ಮಿಕೊಂಡಿದ್ದ ನದಿ ತಟದ ಲಕ್ಷವೃಕ್ಷ ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ನದಿ ತಟಗಳ ಒತ್ತುವರಿಗೆ ಕಡಿವಾಣ ಹಾಕುವದರೊಂದಿಗೆ ನದಿಯ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. ಸಂಘಸಂಸ್ಥೆಗಳ ಮೂಲಕ ವರ್ಷದ ಎಲ್ಲಾ ದಿನಗಳಲ್ಲಿ ಪರಿಸರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊಂಗೆಟಿರ ಡಬ್ಲ್ಯು ಬೋಪಯ್ಯ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ 3 ವರ್ಷಗಳಲ್ಲಿ ಕಾವೇರಿ ನದಿ ತಟದಲ್ಲಿ 3 ಲಕ್ಷಕ್ಕೂ ಅಧಿಕ ಗಿಡ ನೆಡುವ ಯೋಜನೆ ಪೂರ್ಣ ಗೊಳ್ಳಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಮುಂದಿನ 5 ತಿಂಗಳ ಕಾಲ ತಮ್ಮ ಸಮಿತಿ ಕಾವೇರಿ ನದಿ ತಟದಲ್ಲಿ ನಿರಂತರವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳಲಿದೆ ಎಂದರು.
ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್, ಸಹಾಯಕ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸಂಚಾಲಕ ಟಿ. ಜಿ. ಪ್ರೇಮ್‍ಕುಮಾರ್, ಕೊಡಗು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್ ಪ್ರಮುಖರಾದ ಕೊಕ್ಕಲೆರ ತಿಮ್ಮಯ್ಯ, ಪಾಡಿಯಂಡ ಬಿದ್ದಪ್ಪ, ಪುದಿಯಂಡ ರೋಷನ್ ಸೋಮಣ್ಣ, ಮಲ್ಲೇಂಗಡ ಸೋಮಣ್ಣ, ತೀತಮಾಡ ಸುಖೇಶ್ ಮಾದಯ್ಯ, ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕರುಗಳಾದ ವಿಜಯ ಕಾರ್ನಾಡ್, ಎಂ. ಬಿ. ಮುತ್ತಣ್ಣ, ಸ್ಮರಣ್ ಭೀಮಯ್ಯ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಎಂ. ಎನ್. ಕುಮಾರಸ್ವಾಮಿ, ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದ, ಕೆ.ಜಿ. ಮನು, ದೇವರಾಜ್ ಮತ್ತಿತರರು ಇದ್ದರು.