ಗೋಣಿಕೊಪ್ಪಲು, ಜೂ.11: ದ. ಕೊಡಗಿನ ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರುದ್ರಬೀಡು, ಗ್ರಾಮದ ಆಲೇಮಾಡ ಹರೀಶ್ ಎಂಬವರ ತೋಟದಲ್ಲಿ ಕಳೆದ 8 ದಿನಗಳಿಂದ ತಂಗಿದ್ದ ಕಾಡಾನೆಯ ಗುಂಪು ಇದೀಗ ತನ್ನ ಸ್ಥಳವನ್ನು ಬದಲಾಯಿಸುತ್ತಾ. ಕಿರುಗೂರು, ಭಾಗದಿಂದ ಆನೆ ಕಾರಿಡರ್‍ನ ಭಾಗವಾದ ಮಾಯಮುಡಿ, ರುದ್ರಬೀಡು, ಧನುಗಾಲ ಮಾರ್ಗದಿಂದ ಇದೀಗ ತಿತಿಮತಿ ಭಾಗz ಅರಣ್ಯ ಪ್ರವೇಶ ಮಾಡುತ್ತಿದೆ. ಒಂದೇ ಗುಂಪಿನಲ್ಲಿ 19 ಕಾಡಾನೆಗಳು ಪ್ರತಿ ದಿನ ಸಂಚಾರ ನಡೆಸುತ್ತಿದ್ದು ದಿನಕ್ಕೆ ಎರಡು ಕಿ.ಮೀ. ದೂರ ಸಂಚರಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಎರಡು ತಂಡಗಳಲ್ಲಿ ಬೇರೆ ಬೇರೇ ಆಗಿ ಸಂಚರಿಸುತ್ತಿದ್ದ ಕಾಡಾನೆಯ ಹಿಂಡು ಇದೀಗ ಒಂದೇ ಗುಂಪಿನಲ್ಲಿ ಸಂಚಾರ ನಡೆಸುತ್ತಿವೆÉ.

ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ನಷ್ಟ ಪಡಿಸಿದ್ದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸುವ ಪ್ರಯತ್ನ ಮಾಡಿದರಾದರೂ ಗುಂಪಿನಲ್ಲಿರುವ ಕಾಡಾನೆಗಳು ಚದುರಿದಲ್ಲಿ ಮುಂದಾಗಬಹುದಾದ ಅನಾಹುತವನ್ನು ಮನಗಂಡು ಕಾರ್ಯಚರಣೆಗೆ ಮುಂದಾಗಲಿಲ್ಲ. ಇದೀಗ ಕಾಡಾನೆಗಳು ತಾನಾಗಿಯೇ ಅರಣ್ಯದತ್ತ ಪ್ರವೇಶಿಸುತ್ತಿರುವದರಿಂದ ಅರಣ್ಯ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ. ಆನೆಯ ಹಿಂಡು ಸಂಚರಿಸಿದ ಮಾರ್ಗದ ಅಕ್ಕಪಕ್ಕದ ತೋಟಗಳಲ್ಲಿದ್ದ ಕಾಫಿ, ಮೆಣಸು, ಬಾಳೆ, ತೆಂಗು, ಅಡಿಕೆ, ಗಿಡಗಳು ನಷ್ಟಗೊಂಡಿವೆÉ.

ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯನ್ನು ಲೆಕ್ಕಸದೇ ಪ್ರತಿ ನಿತ್ಯ ಆನೆಯ ಜಾಡನ್ನು ಪರಿಶೀಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದ ಆನೆಯ ಚಲನ ವಲನದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಪೊನ್ನಂಪೇಟೆ ವಲಯದಿಂದ ತಿತಿಮತಿ ವಲಯಕ್ಕೆ ತೆರಳುತ್ತಿರುವ ಕಾಡಾನೆಯ ಹಿಂಡು ಇನ್ನೆರಡು ದಿನಗಳಲ್ಲಿ ತಿತಿಮತಿ ಅರಣ್ಯವನ್ನು ಪ್ರವೇಶಿಸಬಹುದೆಂಬ ನಿರೀಕ್ಷೆ ಇದೆ ಎಂದು ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್ ಮಾಹಿತಿ ಒದಗಿಸಿದ್ದಾರೆ.