ಮಡಿಕೇರಿ, ಜೂ. 10: ಕನ್ನಡ ಭಾಷೆ ಇತರ ಯಾವ ಭಾಷೆಗೂ ಕಡಿಮೆ ಇಲ್ಲ, ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲೆಡೆ ಆಗಬೇಕು. ಪ್ರಸ್ತುತ ಇಂಗ್ಲೀಷ್ ಅನಿವಾರ್ಯವಾಗಿದ್ದರೂ ಅದನ್ನು ವ್ಯಾವಹಾರಿಕವಾಗಿ ಮಾತ್ರ ಬಳಸಿಕೊಂಡು ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದಿದ್ದು, ಈ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

125ಕ್ಕೆ 125 ಅಂಕ ಗಳಿಸಿರುವ ವಿದ್ಯಾರ್ಥಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ಎಷ್ಟೋ ಮಂದಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಕೇವಲ ಇಂಗ್ಲೀಷ್ ಕಲಿತ ಮಾತ್ರಕ್ಕೆ ಉನ್ನತ ಹುದ್ದೆಗೇರಲು ಸಾಧ್ಯವಾಗುವದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅರಕಲಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ವಿಸ್ಮಯವಾದ ಬುದ್ಧಿವಂತಿಕೆ ಹಾಗೂ ಪರಿಶ್ರಮದಿಂದ ಮಾತ್ರ ಉತ್ತಮ ಅಂಕಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಯಲ್ಲಿ ಮಾತ್ರ ಮುಂದಿರದೆ ಜೀವನದ ಪರೀಕ್ಷೆಯಲ್ಲೂ ಉತ್ತೀರ್ಣರಾಗುವ ಅರಿವನ್ನು ವೃದ್ಧಿಸಿಕೊಳ್ಳಬೇಕು. ಅಲ್ಲದೆ ಹಿರಿಯರ ವಿಚಾರಧಾರೆಗಳನ್ನು ಇಂದಿನ ಪೀಳಿಗೆ ಅರಿತಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿ ಗಳು ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಗಣನೀಯವಾಗಿ ಹೆಚ್ಚು ಅಂಕಗಳನ್ನು ಗಳಿಸುತ್ತ ಬಂದಿದ್ದಾರೆ. ಇವರನ್ನು ಗುರುತಿಸುವಲ್ಲಿ ಸಾಹಿತ್ಯ ಪರಿಷತ್ ಕಾರ್ಯೋನ್ಮುಖವಾಗಿದ್ದು, ಇದರ ಬೆಂಬಲವಾಗಿ ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗವು ಪ್ರೋತ್ಸಾಹ ನೀಡುತ್ತ ಬಂದಿದೆ. ಇಂದು ಎಸ್‍ಎಸ್‍ಎಲ್‍ಸಿಯಲ್ಲಿ 20 ವಿದ್ಯಾರ್ಥಿ ಗಳು ಹಾಗೂ ಪಿಯುಸಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುತ್ತಿದೆ. ಜೂ. 30ರೊಳಗೆ ಶುದ್ಧ ಕನ್ನಡ ಬರೆಯುವ ಮತ್ತು ಮಾತನಾಡುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 625ಕ್ಕೆ 625 ಅಂಕಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗು ಮೂಲದ ವಿದ್ಯಾರ್ಥಿ ಹಾಸನದ ಕಾವೇರಪ್ಪ ಹಾಗೂ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿ ಸೇರಿದಂತೆ ಹಿರಿಯ ಸಾಹಿತಿ ವಿಜಯ ವಿಷ್ಣುಭಟ್‍ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್‍ಸುಬ್ರಮಣಿ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಹಿರಿಯ ಸಾಹಿತಿ ವಿಜಯ ವಿಷ್ಣುಭಟ್, ಕ.ಸಾ.ಪ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್ ಸೇರಿದಂತೆ ವಿದ್ಯಾರ್ಥಿಗಳ ಫೋಷಕ ವೃಂದದವರು ಪಾಲ್ಗೊಂಡಿದ್ದರು.