ವರದಿ-ಚಂದ್ರಮೋಹನ್
ಕುಶಾಲನಗರ, ಜೂ. 10: ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ಬಹುತೇಕ ಕಾಮಗಾರಿ ಕಳಪೆಯಾಗಿದ್ದು ಸರಕಾರದ 50 ರೂ. ಕೋಟಿ ಅನುದಾನ ಕಾವೇರಿ ನದಿ ಪಾಲಾದಂತೆ ಗೋಚರಿಸುತ್ತಿದೆ.
ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 2012 ರಲ್ಲಿ ರೂ 40 ಕೋಟಿ 10 ಲಕ್ಷದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಪ್ರಕಾರ ಯೋಜನೆಯ ಕಾಮಗಾರಿ 2014 ರಲ್ಲಿ ಪ್ರಾರಂಭಗೊಂಡಿದ್ದು ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಕಾಮಗಾರಿ ಸಮರ್ಪಕವಾಗಿಲ್ಲದೆ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆಗಳೇ ಅಧಿಕವಾಗಿವೆ.
ಯೋಜನೆಯ ಸಂಬಂಧ ಪಟ್ಟಣ ಮತ್ತು ಗ್ರಾಮ ವ್ಯಾಪ್ತಿಯ ಬಡಾವಣೆಗಳಲ್ಲಿ 2449 ಸಂಖ್ಯೆಯ ಆಳುಗುಂಡಿಗಳ ನಿರ್ಮಾಣ ಮಾಡುವ ಕಾಮಗಾರಿಯಲ್ಲಿ ಹಲವೆಡೆ ಕಾವೇರಿ ನದಿ ತಟದಲ್ಲಿ ನಿಯಮ ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ.
ನಿಯಮಾನುಸಾರ ನದಿ ತಟದಲ್ಲಿ ಆಳುಗುಂಡಿಗಳ ನಿರ್ಮಾಣ ಮಾಡುವದು ನಿರ್ಭಂದವಾಗಿದ್ದು ಕುಶಾಲನಗರದ ಬೈಚನಹಳ್ಳಿ ವ್ಯಾಪ್ತಿಯಿಂದ ಗುಮ್ಮನಕೊಲ್ಲಿ ತನಕ ನದಿ ಬದಿಯಲ್ಲಿ ಈ ಕಾಮಗಾರಿ ನಿರ್ಮಾಣಗೊಂಡಿದೆ. ಈ ಸಂದರ್ಭ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಹಲವೆಡೆ ನದಿ ತಟಗಳಲ್ಲಿ ಆಳುಗುಂಡಿಗಳು ಕುಸಿದು ನಿಂತಿರುವ ದೃಶ್ಯಗಳು ಕಂಡುಬಂದಿವೆ.
ಈ ಹಿಂದೆ ಬಸಪ್ಪ ಬಡಾವಣೆಯ ನದಿ ತಟದಲ್ಲಿ ಕಾಮಗಾರಿ ಕಳಪೆಯೊಂದಿಗೆ ಸಂಪೂರ್ಣ ಕೆಲಸ ನದಿ ಪಾಲಾಗಿತ್ತು. ಇದೀಗ ಕುಶಾಲನಗರದ ಖಾಸಗಿ ಕಾಲೇಜೊಂದರ ಸಮೀಪ ನಿರ್ಮಿಸಲಾಗಿರುವ ಆಳುಗುಂಡಿಗಳು ನದಿ ತಟದಲ್ಲಿ ನಿರ್ಮಿಸಲಾಗಿದೆ. ಈ ಕಾಮಗಾರಿಯಲ್ಲಿ ಮಣ್ಣು ಪೂರ್ಣ ಕುಸಿದಿದ್ದು ನದಿಗೆ ಸೇರಿದೆ. ಮುಂದಿನ ದಿನಗಳಲ್ಲಿ ಈ ಮೂಲಕ ಹಾಯಿಸಲಾಗುವ ಶೌಚ ತ್ಯಾಜ್ಯಗಳು ಸಂಪೂರ್ಣ ನದಿ ಪಾಲಾಗುವ ಸಾಧ್ಯತೆ ಅಧಿಕವಾಗಿದೆ.
ನದಿಯಲ್ಲಿ ಪ್ರವಾಹ ಮಟ್ಟದ ತನಕ ಯಾವದೇ ಕಾಮಗಾರಿಯಾಗಲೀ ನಡೆಸುವಂತಿಲ್ಲ ಎನ್ನುವದು ನಿಯಮವಾಗಿದ್ದರೂ ಇಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದನ್ನು ಉಲ್ಲಂಘಿಸಿದ್ದು ಶಿಕ್ಷಾರ್ಹ ಅಪರಾಧವಾಗಿದೆ ಎನ್ನುವದು ನಾಗರಿಕರ ದೂರಾಗಿದೆ.
ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸದೆ ಕಾಮಗಾರಿ ನಡೆಸಿದ್ದಾರೆ ಎನ್ನುವದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರ ಆರೋಪವಾಗಿದೆ. ಗುತ್ತಿಗೆದಾರರು ಯೋಜನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದು ಇದೀಗ ಯೋಜನೆಯ ಅನುಷ್ಠಾನಗೊಳ್ಳುವ ಮುನ್ನ ಜಿಲ್ಲಾಧಿಕಾರಿಗಳು ಕಾಮಗಾರಿಯ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ನದಿ ಕಲುಷಿಕೆ ತಡೆಗಟ್ಟುವದ ರೊಂದಿಗೆ ಪಟ್ಟಣದ ನೈರ್ಮಲ್ಯ ಕಾಪಾಡುವದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದೀಗ ಈ ಯೋಜನೆಯಿಂದ ಕಾವೇರಿ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುವ ಸಾಧ್ಯತೆಯೇ ಅಧಿಕವಾಗಿದೆ ಎನ್ನಬಹುದು.
ಯೋಜನೆಯ ಪ್ರಕಾರ ಆರ್ಸಿಸಿ ಕೊಳವೆಗಳ ಒಳಚರಂಡಿ ಕೊಳವೆ ಮಾರ್ಗ ಮತ್ತು ಅಂದಾಜು 6 ಸಾವಿರಕ್ಕೂ ಅಧಿಕ ಮನೆಗಳ ಮಲಿನ ನೀರು ನೇರವಾಗಿ ನದಿ ಸೇರುವ ಅಪಾಯ ಎದುರಾಗಲಿದೆ.
ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ದೊರೆತ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಈ ಬಗ್ಗೆ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಿಗೆ ವರದಿ ಸಲ್ಲಿಸಲಾಗು ವದು ಎಂದು ಪ್ರತಿಕ್ರಿಯಿಸಿದ್ದಾರೆ.
30 ತಿಂಗಳಲ್ಲಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕಾದ ರೂ 50 ಕೋಟಿಯ ಯೋಜನೆಯೊಂದು 50 ತಿಂಗಳು ಕಳೆದರೂ ಪೂರ್ಣಗೊಳ್ಳದೆ ನೆನೆಗುದಿಗೆ ಬೀಳುವದರೊಂದಿಗೆ ಕಳಪೆ ಮಟ್ಟದ ಕಾಮಗಾರಿ ಬಗ್ಗೆ ಉನ್ನತಮಟ್ಟದ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿದೆ ಎನ್ನುವದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ.