ಚೆಟ್ಟಳ್ಳಿ, ಜೂ. 10: ಮಳೆಗಾಲ ಬಂತೆಂದರೆ ಸಾಕು ಕಾಫಿಗಿಡ, ಕರಿಮೆಣಸು ಬಳ್ಳಿ, ಬಾಳೆ, ಅಡಿಕೆ,ಶುಂಠಿ ಗಿಡದಲ್ಲೆಲ್ಲ ಪುಟ್ಟ ಪುಟ್ಟ ಶಂಖದಂತೆ ನೇತಾಡುವ ಆಫ್ರಿಕನ್ನ್ ದೈತ್ಯ ಶಂಖುಹುಳು. ಮತ್ತೆ ಈ ವರ್ಷವೂ ಮಳೆ ಪ್ರಾರಂಭವಾಗುತ್ತಿದ್ದಂತೆ ಕಾಣಿಸಿಕೊಂಡು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಕೊಡಗು ಹಾಗೂ ಚಿಕ್ಕಮಂಗಳೂರು ಜಿಲ್ಲೆಯ ಕೆಲವು ಕಾಫಿತೋಟಗಳಲ್ಲಿ ಆಫ್ರಿಕಾದ ದೈತ್ಯ ಶಂಕು ಹುಳು ಕಾಣಿಸಿ ಕೊಂಡಿದ್ದು ಇದನ್ನು ಅಖಾಟಿನಾ ಫೂಲಿಕ ಎಂದು ಕರೆಯುತ್ತಾರೆ. ಮೂಲತಃ ಪೂರ್ವ ಆಫ್ರಿಕಾದ ಈ ಹುಳು ಭಾರತದಲ್ಲಿ 1847ರಲ್ಲಿ ಕಾಣಿಸಿಕೊಂಡಿದೆ.ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಈ ಹುಳು ರಾತ್ರಿವೇಳೆಯಲ್ಲಿ ಹೆಚ್ಚು ಚುರುಕಾಗಿದ್ದು ಹಗಲಿನವೇಳೆಯಲ್ಲಿ ಮರಗಳ ಮೇಲೆ ಬಿದ್ದಿರುವ ಮರದ ತುಂಡುಗಳಲ್ಲಿ ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಕಾರ್ಯ ಚಟುವಟಿಕೆ ಆರಂಭಗೊಳ್ಳುತದೆ. ಇದು ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ ಸೇರಿದಂತೆ 500ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳಿಗೆ ಹಾನಿ ಮಾಡುತ್ತದೆ.ಇದರ ಜೀವಿತಾವಧಿ 3-5 ವರ್ಷಗಳಾಗಿದ್ದು ಕೆಲವು 9ವರ್ಷಗಳ ವರೆಗೂ ಜೀವಿಸಿರುವದೂ ಇದೆ.

2015ರಿಂದ ಕೊಡಗಿನ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬೆಳ್ಳಾರಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೊದಲು ಕಾಣಿಸಿಕೊಂಡಿದ್ದ ಹುಳುಗಳು ಈ ವರ್ಷ ಮಳೆಯಾಗುತ್ತಿದ್ದಂತೆ ಪುನಹ ಪ್ರತ್ಯಕ್ಷವಾಗಿದೆ.

ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕಾಫಿ ಸಂಶೋದನಾಕೇಂದ್ರ ಹಾಗೂ ಚೆಟ್ಟಳ್ಳಿ ಕಾಫಿ ಸಂಶೋದನಾ ಉಪಕೇಂದ್ರದಲ್ಲಿ ಸಂಶೋಧನೆ ನಡೆಸಿ ಕ್ರಿಮಿನಾಶಕ ಔಷಧಿಯನ್ನು ಬಳಕೆ ಒಂದು ಕ್ರಮವಾದರೆ ಕ್ಯಾಚ್ ಅಯಿಂಡ್ ಕಿಲ್ಲ್ ಮುಖಾಂತರ ಶಂಖುಹುಳುವನ್ನು ನಿಯಂತ್ರಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹತೋಟಿ ಕ್ರಮಗಳು: ಈ ಶಂಖುಹುಳು ಹುಳುವಿನ ಅಡಗುತಾಣಗಳನ್ನು ನಾಶಪಡಿಸುವದು, ಪ್ರಾರಂಭಿಕ ಹಂತದಲ್ಲೆ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವದು, ಹುಳುಗಳನ್ನು ಆಕರ್ಶಿಸಲು ಪಪ್ಪಾಯ ಕಾಂಡದ ತುಂಡನ್ನು ಇಡುವದು, ತೇವವಾದ ಗೋಣಿಚೀಲಗಳನ್ನು ಹಾಗೂ ಪಪ್ಪಾಯ ಎಲೆಗಳನ್ನು ಆಕರ್ಷಣಾ ಬಲೆಯಾಗಿ ಉಪಯೋಗಿಸಿ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವದು, ಹುಳು ಪೀಡಿತ ಪ್ರದೇಶದಲ್ಲಿ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವದು, ದರಗುಗಳ ಮೇಲೆ ಮೊಟ್ಟೆ ಇಡುವ ಪ್ರದೇಶಗಳಲ್ಲಿ ಸಹ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವದು, 50ಲೀ. ನೀರಿನಲ್ಲಿ 2ಕೆ.ಜಿ.ಮೈಲುತುತ್ತು ಮತ್ತು 2ಕೆ.ಜಿ ತಂಬಾಕಿನ ಸಾರವನ್ನು ಮಿಶ್ರಣ ಮಾಡಿ ಹುಳುಗಳ ಮೇಲೆ ಚಿಮುಕಿಸುವದು, 5% ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ ಹತ್ತು ಕೆಜಿಯಂತೆ ಗಿಡಗಳ ಸುತ್ತಲು ಹರಡುವದು.

160-240 ಗ್ರಾಂ ಲಾರ್ವಿನ್ ಪುಡಿಯನ್ನು 60 ಕೆ.ಜಿ ಅಕ್ಕಿ ತೌಡಿನೊಂದಿಗೆ ಮಿಶ್ರಮಾಡಿ.ನಂತರ 6ಕೆ.ಜಿ ಬೆಲ್ಲವನ್ನು 5ಲೀಟರ್ ಬಿಸಿನೀರಿನಲ್ಲಿ ನಿಧಾನವಾಗಿ ಕರಗಿಸಿ ಮತ್ತು ಬೆಲ್ಲದ ದ್ರಾವಣಕ್ಕೆ 300 ಮಿಲಿ ಹರಳೆಣ್ಣೆ ಮಿಶ್ರಣಮಾಡಿ ಈ ಬೆಲ್ಲದ ದ್ರಾವಣವನ್ನು ನಿಧಾನವಾಗಿ ತೌಡು ಲಾರ್ವಿನ್ ಮಿಶ್ರಣದೊಂದಿಗೆ ಚೆನ್ನಾಗಿ ಕಲಸಬೇಕು. ಅಗತ್ಯವಿದ್ದಲ್ಲಿ ನೀರನ್ನು ಬಳಸಬಹುದು. ಮಿಶ್ರಣ ತುಂಬಾ ತೇವ ಅಥವ ಗಟ್ಟಿಯಾಗದಂತೆ ನೋಡಿಕೊಳ್ಳಬೇಕು. ಒಂದು ಎಕರೆ ಪ್ರದೇಶದಲ್ಲಿ 1500 ಗ್ರಾಂ ಮಿಶ್ರಣದ ಉಂಡೆಯನ್ನು 400 ಜಾಗದಲ್ಲಿ ಪ್ರತೀ ನಾಲಕ್ಕು ಗಿಡಗಳಿ ಮದ್ಯೆ ಇರಿಸುವದು. ಶಂಖು ಹುಳುಗಳ ಓಡಾಟ ಕಂಡುಬಂದ ಜಾಗ (ಗಿಡಗಳ ಬುಡ)ದಲ್ಲಿ 5% ಮೆಟಾಲ್ಡಿಹ್ಯೆಡ್ ಹರಳುಗಳನ್ನು ಹರಡುವದು.

ಕ್ಯಾಚ್ ಅಯಿಂಡ್ ಕಿಲ್ಲ್ ಮುಖಾಂತರ ಸಂಗ್ರಹಿಸಿದ ಹುಳುಗಳನ್ನು 7 ಅಡಿ ಆಳ,4 ಅಡಿ ಅಗಲ ಮತ್ತು 4 ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ ಪ್ರತಿ ಒಂದು ಅಡಿ ಎತ್ತರದ ಪದರಗಳ ಮೇಲೆ ಚಿಪ್ಪಿನ ಸುಣ್ಣ ಮತ್ತು ಉಪ್ಪನ್ನು ಹರಡಿ, ಮಣ್ಣಿನಿಂದ ಮುಚ್ಚುವದು. ಹುಳುಗಳನ್ನು ಹಿಡಿಯುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೆ ಕವಚವನ್ನು ಹಾಕಿಕೊಳ್ಳುವದು.

ಕಳೆದ ಮೂರು ವರ್ಷಗಳಿಂದ ಶಂಖುಹುಳುವಿರುವ ಪ್ರದೇಶಗಳÀಲ್ಲಿ ಕಾಫಿ ಸಂಶೋಧನ ಉಪಕೇಂದ್ರದ ಅಧಿಕಾರಿಗಳು ಹಾಗೂ ತಜ್ಞರು ಕಾರ್ಯಾಗಾರಗಳ ಮೂಲಕ ರೈತರಿಗೆ ಶಂಖುಹುಳುವಿನ ನಿಯಂತ್ರಣದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡುತ್ತಿದ್ದು, ಹುಳುಗಳ ಹಾವಳಿ ನಿಯಂತ್ರಣಕ್ಕೂ ಬಂದಿದೆ ಎಂದು ಚೆಟ್ಟಳ್ಳಿ ಕಾಫಿ ಸಂಶೋಧನ ಉಪಕೇಂದ್ರದ ಉಪನಿರ್ದೇಶಕ ಡಾ. ಜಗದೀಶನ್ ತಿಳಿಸಿದ್ದಾರೆ.

ಶಂಖುಹುಳುವಿನ ನಿಯಂತ್ರಣದ ಬಗ್ಗೆ ರೈತರಲ್ಲಿ ಅರಿವು ಮೂಡಿದ್ದು ಇಲಾಖೆಯೊಂದಿಗೆ ಸಹಕಾರ ನೀಡಿದರೆ ಒಂದೆರಡು ವರ್ಷಗಳಲ್ಲಿ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದು ಕಿರಿಯ ಕೀಟ ತಜ್ಞ ರಂಜಿತ್ ತಿಳಿಸಿದ್ದಾರೆ.

-ಪುತ್ತರಿರ ಕರುಣ್ ಕಾಳಯ್ಯ