ಕೂಡಿಗೆ, ಜೂ. 10: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜಯಶೀಲರಾದ ಹಿನ್ನೆಲೆ ಕುಶಾಲನಗರ ಭಾರತೀಯ ಜನತಾ ಪಕ್ಷದ ವತಿಯಿಂದ ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಕುಶಾಲನಗರದ ಮಾರಿಯಮ್ಮ ದೇವಾಲಯದಿಂದ ತೆರೆದ ವಾಹನದಲ್ಲಿ ಶಾಸಕ ಅಪ್ಪಚ್ಚು ರಂಜನ್ ಮತ್ತು ಬಿಜೆಪಿ ಮುಖಂಡರು ಮುಖ್ಯ ರಸ್ತೆಯಲ್ಲಿ ಕೊಡವ ವಾದ್ಯದೊಂದಿಗೆ ಮೆರವಣಿಗೆ ಸಾಗಿ, ನಗರದ ಮುಖ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೆರವಣಿಗೆಯು ರಥಬೀದಿಯಲ್ಲಿ ಸಾಗಿ ಮಾರುಕಟ್ಟೆ ಮಾರ್ಗವಾಗಿ ಬಿ.ಎಂ. ರಸ್ತೆಯ ಮೂಲಕ ಗಣಪತಿ ದೇವಾಲಯದ ಹತ್ತಿರ ಸಮಾಪ್ತಿಗೊಂಡಿತು. ತೆರದ ವಾಹನದಲ್ಲಿ ಶಾಸಕರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಬಿಜೆಪಿ ಹಿರಿಯ ಮುಖಂಡ ಕಾಫಿ ಬೆಳೆಗಾರ ಜಮ್ಸಿ ಪೊನ್ನಪ್ಪ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಮಾರಪ್ಪ ಮತ್ತಿತರರು ಇದ್ದರು.
ಮೆರವಣಿಗೆಯಲ್ಲಿ ಭಾರತೀಯ ಜನತಾ ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.