ಮಡಿಕೇರಿ, ಜೂ. ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿಪರೀತ ಗಾಳಿ-ಮಳೆಯ ಪರಿಣಾಮ ಅಲ್ಲಲ್ಲಿ ಮರಗಳು-ರೆಂಬೆ-ಕೊಂಬೆಗಳು ನೆಲ ಕಚ್ಚುವದರೊಂದಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಪಶ್ಚಿಮ ಬೆಟ್ಟ ತಪ್ಪಲಿನ ಕಡಮಕಲ್, ಮುಕ್ಕೋಡ್ಲು, ಕಾಲೂರು, ಪಚ್ಚಿನಾಡು, ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ, ಕಿಕ್ಕರಳ್ಳಿ, ಸೂರ್ಲಬ್ಬಿ, ಮಂಕ್ಯ ಮತ್ತಿತರೆಡೆಗಳಲ್ಲಿ ಎಡೆಬಿಡದೆ ಮಳೆ ಸುರಿಯಲಾರಂಭಿಸಿದೆ. ವಾಯುವಿನ ನರ್ತನದಿಂದ ವಿದ್ಯುತ್ ಸಮಸ್ಯೆ ಎದುರಾಗಿ ರಾತ್ರಿ ಕಾರ್ಗತ್ತಲೆ ಯಲ್ಲೇ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ತೋಡಿಕೊಂಡಿದ್ದಾರೆ.

ಮುಂಗಾರು ವೇಳೆ ಗದ್ದೆ ಉಳುಮೆಗೂ ಅಡಚಣೆ ಎದುರಾಗಿದ್ದು, ಸಸಿಮಡಿಗಳು ಜಲಾವೃತಗೊಂಡು, ಜಾನುವಾರು ಗಳನ್ನು ಮೇವಿಗೆ ಬಿಡಲಾರದೆ ಕೊಟ್ಟಿಗೆಯೊಳಗೆ ಇರುವದಾಗಿ ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ದಿನಗಳಲ್ಲಿ ಈ ಪ್ರದೇಶದೆಲ್ಲೆಡೆ ಸರಾಸರಿ 5 ಇಂಚು ಪ್ರತಿನಿತ್ಯ ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ. ಇಂದು ಮಕ್ಕಳಿಗೆ ರಜೆ ನೀಡಿರುವ ಹಿನ್ನೆಲೆ ಸ್ವಲ್ಪ ನಿರಾಳ ವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಲಕಾವೇರಿಗೆ 8 ಇಂಚು

ತಾ. 7 ರಂದು ರಾತ್ರಿಯಿಡಿ ಸುರಿದ ಮಳೆಯೊಂದಿಗೆ ನಿನ್ನೆ ತಲಕಾವೇರಿಗೆ 8.47 ಇಂಚು ಮಳೆಯಾದ ಪರಿಣಾಮ ಕಾವೇರಿ ಒಡಲಿನಲ್ಲಿ ನೀಡಿನ ಪ್ರಮಾಣ ಏರತೊಡಗಿದೆ. ಇಂದು ಕೂಡ ಈ ಪ್ರದೇಶದಲ್ಲಿ 4.66 ಇಂಚು ಮಳೆಯಾಗಿದ್ದು, ಇಂದು ಕೂಡ ತೀವ್ರ ಮಳೆ ಸುರಿದಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಇಂದು 3.15 ಇಂಚು ಹಾಗೂ ನಿನ್ನೆ 5.65 ಇಂಚು ಮಳೆಯಾಗಿದೆ. ಭಾಗಮಂಡಲ ಸಂಗಮದಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ.

ಅಯ್ಯಂಗೇರಿ, ಬಲ್ಲಮಾವಟಿ, ನಾಪೋಕ್ಲು, ಕಕ್ಕಬೆ ವ್ಯಾಪ್ತಿಯಲ್ಲಿ ಕೂಡ ವಿಪರೀತ ಮಳೆಯಾಗಿದ್ದು, ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುವಂತಾಗಿದೆ ಎಂದು ಆ ಭಾಗದ ಜನತೆ ತಿಳಿಸಿದ್ದಾರೆ.

ಹೊದ್ದೂರು ಬಳಿ ಮರವೊಂದು ಬಿದ್ದು ಸಮಸ್ಯೆ ಎದುರಾಗಿತ್ತು. ಮಡಿಕೇರಿ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮರಗೋಡು, ಹೊಸ್ಕೇರಿ ಸುತ್ತಮುತ್ತ ಕತ್ತಲೆಕಾಡು ಮಾರ್ಗದಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಅಡಚಣೆ ಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿ ರುವ ಮಳೆಯ ತೀವ್ರತೆ ಇನ್ನು ಮುಂದುವರಿಯುವ ಲಕ್ಷಣವಿದೆ.

ಬಿಳಿಗೇರಿ: ಬಿಳಿಗೇರಿ ಕಣಚಂಡ, ಪೈಕೇರ, ಕಾಳೇಯಂಡ ಮನೆಗೆ ತೆರಳುವ ರಸ್ತೆಯಲ್ಲಿ ಬಿದ್ದ ಮರವನ್ನು ಶ್ರೀ ಭಗವತಿ ಯುವಕ ಸಂಘದವರು ಶ್ರಮದಾನದ ಮೂಲಕ ತೆರವುಗೊಳಿಸಿದರು. -ಶ್ರೀಸುತ