ಗೋಣಿಕೊಪ್ಪಲು, ಜೂ.8: ಕೊಟ್ಟಗೇರಿ ಸಮೀಪದಲ್ಲಿ ಮತ್ತೇ ಹುಲಿ ಧಾಳಿ ನಡೆದಿದೆ. ಅರಮಣಮಾಡ ಸುಬ್ಬಯ್ಯ ಅವರ ಹಸುವನ್ನು ಹುಲಿ ಕೊಂದು ಹಾಕಿದ್ದು ಈ ಭಾಗದ ಜನತೆ ಭಯ ಭೀತರಾಗಿದ್ದಾರೆ. ಕಳೆದ ರಾತ್ರಿ ವೇಳೆ ಮನೆಯ ಸಮೀಪವಿದ್ದ ಹಸುವನ್ನು ಕೊಂದಿರುವ ಹುಲಿಯು ಹಸುವನ್ನು ಮನೆಯ ಬಳಿಯಿಂದ 60 ಮೀ. ದೂರದವರೆಗೂ ಎಳೆದು ತಂದಿದೆ. ನಂತರ ಸಮೀಪದ ಕುರುಚಲು ಕಾಡಿನ ಸಮೀಪದಲ್ಲಿ ಹಸುವಿನ ಹಿಂಭಾಗವನ್ನು ತಿಂದಿರುವ ಹುಲಿ ಅಲ್ಲಿಂದ ತೆರಳಿದೆ.

ಮುಂಜಾನೆ ಮನೆಯ ಮಾಲೀಕರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್‍ಎಫ್‍ಓ ಗಂಗಾಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ. ತಿತಿಮತಿ, ಕಲ್ಲಳ್ಳ, ಹಾಗೂ ಪೊನ್ನಂಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕ್ಷಿಪ್ರ ಕಾರ್ಯಪಡೆ ತಂಡವು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಹುಲಿ ಸೆರೆಗೆ ಎರಡು ಬೋನ್ ಅನ್ನು ವಿವಿಧ ಭಾಗಗಳಲ್ಲಿ ಅಳವಡಿಸಿದ್ದಾರೆ. ಸುತ್ತ ಮುತ್ತಲಿನ ಗ್ರಾವiಸ್ಥರು ಸ್ಥಳಕ್ಕಾಗಮಿಸಿ ವೀಕ್ಷಿಸುತ್ತಿದ್ದರು. ಸುದ್ದಿ ತಿಳಿದ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕೊಟ್ಟಗೇರಿಯ ಘಟನಾ ಸ್ಥಳಕ್ಕೆ ತೆರಳಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೊಡಗು ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿಗಳಾದ ಲಿಂಗರಾಜುರವರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದರು. ಈ ಸಂದರ್ಭ ಅಧಿಕಾರಿ ಲಿಂಗರಾಜುರವರು ರಜೆಯ ಮೇಲೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.

ಬೋನಿಗೆ ಸಿಗದ ವ್ಯಾಘ್ರ : ಸತತ ನಾಲ್ಕೈದು ದಿನಗಳಿಂದ ಬೆಸಗೂರು ಸಮೀಪ ವ್ಯಾಘ್ರನ ಸೆರೆಗೆ ಬೋನ್ ಅನ್ನು ಇಟ್ಟು ಕಷ್ಟ ಪಡುತ್ತಿರುವ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಈ ಹುಲಿ ಸೆರೆಗೆ ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ ಹುಲಿ ಮಾತ್ರ ಬೋನ್‍ಗೆ ಸಿಗುತ್ತಿಲ್ಲ. ಇನ್ನುಳಿದ ಹುಲಿಗಳಿಗಿಂತ ಭಿನ್ನವಾಗಿರುವ ಈ ಹುಲಿಯು ಸತತ ಪ್ರಯತ್ನ ನಡೆಸಿದರೂ ಬೋನಿನತ್ತ ಸುಳಿಯುತ್ತಿಲ್ಲ. ತನ್ನ ಸಂಚಾರವನ್ನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಬದಲಾಯಿಸುತ್ತ ರಾತ್ರಿಯ ವೇಳೆಯಲ್ಲಿ ಹೆಚ್ಚಾಗಿ ತಿರುಗಾಟ ನಡೆಸುತ್ತಿರುವದು ಕಂಡು ಬರುತ್ತಿದೆ. ಕೊಟ್ಟಗೇರಿ ಭಾಗದಲ್ಲಿ ಹುಲಿಯ ಓಡಾಟ ಹೆಚ್ಚಾಗಿ ಕಂಡು ಬಂದಿರುವದರಿಂದ ಈ ಭಾಗದಲ್ಲೇ ಎರಡು ಬೋನ್ ಅನ್ನು ಅಳವಡಿಸಲಾಗಿದ್ದು ಹುಲಿಯನ್ನು ಸೆರೆ ಹಿಡಿಯುವ

(ಮೊದಲ ಪುಟದಿಂದ) ಪ್ರಯತ್ನದಲ್ಲಿ ಅರಣ್ಯ ಸಿಬ್ಬಂದಿಗಳು ಮಳೆಯ ನಡುವೆ ಕಾರ್ಯೋನ್ಮುಖರಾಗಿದ್ದಾರೆ.

ನಾಗರಹೊಳೆ,ತಿತಿಮತಿ,ಕಲ್ಲಳ್ಳ ಭಾಗದ ಅರಣ್ಯ ಅಧಿಕಾರಿಗಳು,ಸಿಬ್ಬಂದಿಗಳು,ರ್ಯಾಪಿಡ್ ಪೋರ್ಸ್ ಹೂಡಿದ್ದಾರೆ.ಹಿರಿಯ ಅಧಿಕಾರಿಗಳಾದ, ತಿತಿಮತಿಯ ಎಸಿಎಫ್, ಶ್ರೀಪತಿ, ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್, ಕಲ್ಲಳ ಆರ್‍ಎಫ್‍ಓ ಶಿವರಾಂ,ಯೋಗೇಶ್, ವೀರಾಜಪೇಟೆ ಸರ್ವೆ ಘಟಕದ ಆರ್‍ಎಫ್‍ಓ ದಿಲೀಪ್, ಸ್ಥಳದಲ್ಲಿ ಮೊಖಂ ಹೂಡಿದ್ದಾರೆ.

- ಹೆಚ್.ಕೆ. ಜಗದೀಶ್