ಕುಶಾಲನಗರ, ಜೂ. 8: ಕುಶಾಲನಗರಕ್ಕೆ ಮಂಜೂರಾಗಿದ್ದ ಉಪ ನೋಂದಣಿ ಕಚೇರಿ ಶೀಘ್ರದಲ್ಲಿ ಕಾರ್ಯಾರಂಭಿಸಲಿದೆ ಎಂದು ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾಯರ ಕನಸಾಗಿದ್ದ ಉಪ ನೋಂದಣಿ ಕಚೇರಿ ಒಂದು ವಾರದ ಒಳಗಾಗಿ ಕುಶಾಲನಗರದಲ್ಲಿ ಕಾರ್ಯಾರಂಭ ಮಾಡಲಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಕೆ.ಜೆ. ಜಾರ್ಜ್ ಮತ್ತು ದಿನೇಶ್ ಗುಂಡೂರಾವ್ ಅವರ ಮುತುವರ್ಜಿಯಿಂದಾಗಿ ಕುಶಾಲನಗರಕ್ಕೆ ಉಪನೋಂದಣಿ ಕಚೇರಿ ಮಂಜೂರು ಮಾಡಲಾಗಿತ್ತು. ಸ್ಥಳಾವಕಾಶ ಹಾಗೂ ಅಧಿಕಾರಿಗಳ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯ ಕಚೇರಿ ಪಟ್ಟಣದ ಗೌಡ ಸಮಾಜದ ಬಳಿ ಖಾಸಗಿ ಕಟ್ಟಡದಲ್ಲಿ ಕಾರ್ಯ ಆರಂಭಿಸಲಿದೆ. ಸೋಮವಾರಪೇಟೆ ಉಪ ನೋಂದಣಿ ಅಧಿಕಾರಿಯನ್ನು ಕಚೇರಿಗೆ ನಿಯೋಜಿಸಲಾಗಿರುವ ಕುರಿತು ಮಡಿಕೇರಿಯ ಉಪ ನೋಂದಣಿ ಅಧಿಕಾರಿಗಳಿಗೆ ಆದೇಶ ಪತ್ರ ರವಾನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಕಚೇರಿಯಿಂದ ನೆರೆಯ ಸುಂಟಿಕೊಪ್ಪ ಸೇರಿದಂತೆ ಕುಶಾಲನಗರದ ಹೋಬಳಿಯ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ ಎಂದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ ಇದ್ದರು.