ಗುಡ್ಡೆಹೊಸೂರು: ಇಲ್ಲಿನ ಪ್ರಾಥಮಿಕ ಶಾಲೆ ಗುಡ್ಡೆಹೊಸೂರು ಗ್ರಾ.ಪಂ. ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿದೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಇಲ್ಲಿನ ಶಾಲಾ ಆವರಣದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭ ಡಿ.ಎಫ್.ಓ. ಮಂಜುನಾಥ್ ಮಾತನಾಡಿ, ನಮ್ಮ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿ ಆರೋಗ್ಯವನ್ನು ಕಾಪಾಡಿ ಉತ್ತಮ ಸಮಾಜ ನಿರ್ಮಿಸುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಎ.ಸಿ.ಎಫ್. ಚಿಣ್ಣಪ್ಪ, ಕುಶಾಲನಗರ ವಿಭಾಗದ ರೇಂಜರ್ ಅರುಣ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಪಿ.ಡಿ.ಓ. ಶ್ಯಾಂ, ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕ ವೃಂದ, ಮಕ್ಕಳು ಮತ್ತು ಸಾರ್ವಜನಿಕರು ಹಾಜರಿದ್ದರು. ಈ ಸಂದರ್ಭ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ರಸ್ತೆಯ ಬದಿಯಲ್ಲಿದ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಟ್ರ್ಯಾಕ್ಟರ್ ಮೂಲಕ ಬೇರೆಡೆಗೆ ಸಾಗಿಸಲಾಯಿತು. ಅಲ್ಲದೆ ಇಲಾಖೆ ವತಿಯಿಂದ ಕಾಡು ಜಾತಿಯ ಮರಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.ಗೋಣಿಕೊಪ್ಪ ವರದಿ: ಕಾರ್ಮಾಡು ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅಮ್ಮತ್ತಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಅಮ್ಮತ್ತಿ ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಕೂರ್ಗ್ ಪಬ್ಲಿಕ್ ಶಾಲೆ

ಗೋಣಿಕೊಪ್ಪ ವರದಿ: ಪರಿಸರ ಸಂರಕ್ಷಣೆಯ ಸಂದೇಶ ಹೊತ್ತ ಮೂಕಾಭಿನಯ ಹಾಗೂ ಭಾಷಣಗಳ ಮೂಲಕ ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಎನ್‍ಸಿಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಶಾಲಾ ಆವರಣದಲ್ಲಿ ಇಕೋ ಕ್ಲಬ್ ಸದಸ್ಯರ ಸಹಯೋಗದೊಂದಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇವಮಚ್ಚಿ ಅರಣ್ಯ ಪ್ರದೇಶಕ್ಕೆ ವಿದ್ಯಾರ್ಥಿಗಳು ತೆರಳಿ 200 ಕಾಡು ಮರಗಳ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರು. ತಿತಿಮತಿ ವಲಯ ಆರ್‍ಎಫ್‍ಓ ಶಿವಶಂಕರ್, ಪ್ರಾಂಶುಪಾಲ ಬೆನ್ನಿ ಕೊರಿಯಕೋಸ್ ಹಾಗೂ ಫಾರೆಸ್ಟ್ ಕನ್ಸ್‍ರ್ವೇಶನ್ ಸೊಸೈಟಿ ಸದಸ್ಯರು ಇದ್ದರು.ಸೋಮವಾರಪೇಟೆ: ಸಮೀಪದ ಐಗೂರು ಸರಕಾರಿ ಪ್ರೌಢಶಾಲೆಯ ಭುವನಕ್ಕೊಂದು ಸದನ ಇಕೋ ಕ್ಲಬ್ ಹಾಗೂ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಕಾರದೊಂದಿಗೆ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ದಿನದ ಅಂಗವಾಗಿ ಶಾಲಾ ಆವರಣದಿಂದ ಗ್ರಾಮದ ಪ್ರಮುಖಬೀದಿಯಲ್ಲಿ ಪರಿಸರ ರಕ್ಷಣೆಯ ಕುರಿತು ಜಾಗೃತಿ ಜಾಥಾ ನಡೆಯಿತು. “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ವಿಶ್ವ ಪರಿಸರ ದಿನ-ದಿನವೂ ಪರಿಸರ ದಿನ” ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಶಾಲಾ ಆವರಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕ ಯಶವಂತ್ ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.