ಗೋಣಿಕೊಪ್ಪ ವರದಿ, ಜೂ. 8: ಗ್ರಾಮ ಪಂಚಾಯಿತಿ ನೌಕರರ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಪೊನ್ನಂಪೇಟೆ ಯಲ್ಲಿರುವ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಯಿತು.
ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪಂಚಾಯಿತಿ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಪ್ರತಿಭಟನೆಯಲ್ಲಿ ಆರೋಪ ವ್ಯಕ್ತವಾಯಿತು.
ಪಂಚತಂತ್ರದಲ್ಲಿ ಕಾರ್ಮಿಕರ ವಿವರಗಳನ್ನು ದಾಖಲಿಸಲು ಪಿಡಿಓಗಳು ಸತಾಯಿಸುತ್ತಿ ರುವದರಿಂದ ಕಾರ್ಮಿಕರಿಗೆ ವೇತನ ಪಾವತಿಯಾಗುತ್ತಿಲ್ಲ. ಕಾರ್ಯ ನಿರ್ವಣಾಧಿಕಾರಿಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮ ಪಂಚಾಯಿತಿಗಳು ನಿರೀಕ್ಷಿತ ಆದಾಯವಿಲ್ಲ ಎಂಬ ಕಾರಣ ನೀಡಿ ವೇತನ ಪಾವತಿಸದೆ ಇರುವದು ಸರಿಯಲ್ಲ. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕೆಂದು ಆಗ್ರಹಿಸಲಾಯಿತು.
ಸುಮಾರು 17-18 ತಿಂಗಳಿನಿಂದ ವೇತನ ಪಾವತಿಸದೇ ಉಳಿದಿರು ವವರಿಗೆ ವೇತನ ಪಾವತಿಸಬೇಕು. ಎಸ್.ಎಸ್.ಎಲ್.ಸಿ. ಪಾಸಾದ ಸಿಬ್ಬಂದಿಗಳನ್ನು ಗ್ರೇಡ್ 2 ಹುದ್ದೆ ನೀಡಲು ಸರ್ಕಾರವನ್ನು ಅಧಿಕಾರಿಗಳು ಒತ್ತಾಯ ತರಬೇಕು ಮುಂತಾದ ಬೇಡಿಕೆಯನ್ನು ಪ್ರಬಾರ ಇಒ ಜಯಣ್ಣ ಅವರಿಗೆ ಸಲ್ಲಿಸಲಾಯಿತು.
ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಪ್ರತಿಭಟನೆಗೆ ಕರೆ ನೀಡಿದ್ದ ಬೆನ್ನಲ್ಲೇ ಜಿಲ್ಲೆಯಲ್ಲಿ ಶೇ. 70 ರಷ್ಟು ಸಮಸ್ಯೆಗಳು ಇತ್ಯರ್ಥ ಗೊಂಡಿದೆ. ಇದರಂತೆ ಉಳಿದಿರುವ ಶೇ. 30 ರಷ್ಟು ಸಮಸ್ಯೆಗಳನ್ನು 1 ವಾರದ ಒಳಗೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಗಣಪತಿ, ಖಜಾಂಚಿ ಸಿ.ಆರ್. ರವಿ, ತಾಲೂಕು ಕಾರ್ಯದರ್ಶಿ ಸಜಿತಾ, ಉಪ ಕಾರ್ಯದರ್ಶಿ ಎಂ.ಬಿ. ಹರೀಶ್, ಸ್ವಚ್ಛತಾ ವಿಭಾಗದ ಪ್ರಮುಖರುಗಳಾದ ವಿಜಯಕುಮಾರ್ ಹಾಗೂ ರಾಜು ಇದ್ದರು.