ಶನಿವಾರಸಂತೆ, ಜೂ. 8 : ಕಸಾಯಿಖಾನೆಗೆ ಅಧಿಕ ಬೆಲೆಗೆ ಮಾರಾಟ ಮಾಡಲು 4 ಜಾನುವಾರುಗಳನ್ನು ಪಿಕ್ಅಪ್ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಇಬ್ಬರು ಆರೋಪಿಗಳು ಹಾಗೂ ಜಾನುವಾರುಗಳನ್ನು ವಾಹನ ಸಹಿತ ವಶಪಡಿಸಿಕೊಂಡ ಘಟನೆ ನಿಲುವಾಗಿಲು ಗ್ರಾಮದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಓರ್ವ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದಾನೆ.
ಅರಕಲಗೋಡು ತಾಲೂಕಿನ ಹೊಳಲುಗೋಡು ಗ್ರಾಮದ ಚಾಲಕ ಇಸ್ರಾರ್, ಅನ್ಸಾರ್, ನಸೀಮ್ ಆರೋಪಿಗಳು. ವೃತ್ತ ನಿರೀಕ್ಷಕ ನಂಜುಂಡೇಗೌಡ ಬೆಳಗ್ಗಿನ ಜಾವ ಕೊಡ್ಲಿಪೇಟೆ ಹೋಬಳಿ ನಿಲುವಾಗಿಲು ಗ್ರಾಮದ ಚೆಕ್ ಪೋಸ್ಟ್ ಹತ್ತಿರ ಗಸ್ತಿನಲ್ಲಿರುವಾಗ ಅರಕಲಗೋಡು ಕಡೆಗೆ ವಾಹನದಲ್ಲಿ ಜಾನುವಾರು ಗಳನ್ನು ಸಾಗಿಸುತ್ತಿರುವದನ್ನು ಕಂಡು ತಡೆದು ನಿಲ್ಲಿಸಿದರು. ಪರಿಶೀಲಿಸಿದಾಗ ಸರ್ಕಾರದ ಯಾವದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿರುವದು ತಿಳಿದುಬಂದಿದೆ. ಈ ಸಂದರ್ಭ ಆರೋಪಿ ನಸೀಮ ಸ್ಥಳದಿಂದ ಓಡಿ ಹೋಗಿರುತ್ತಾನೆ.
ಶನಿವಾರಸಂತೆ ಪಿಎಸ್.ಐ. ಎನ್. ಆನಂದ್, ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ನಿರ್ದೇಶನದಂತೆ ವಶಪಡಿಸಿಕೊಂಡ ಜಾನುವಾರುಗಳನ್ನು ಠಾಣೆಗೆ ಸಾಗಿಸಿ ಅಲ್ಲಿಂದ ಮೈಸೂರಿನ ಸಿಂಜರಪೋಲ್ ಗೋಶಾಲೆಗೆ ಕಳುಹಿಸಿಕೊಟ್ಟಿರುತ್ತಾರೆ. ಬಂಧಿÀತ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.