ಗೋಣಿಕೊಪ್ಪಲು, ಜೂ. 7: ದಕ್ಷಿಣ ಕೊಡಗಿನ ಬೆಸಗೂರು ಗ್ರಾಮದಲ್ಲಿ ಹುಲಿ ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಭೇಟಿ ಮಾಡಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು.
ಈ ಭಾಗದಲ್ಲಿ ಮಳೆ ಸುರಿಯುತ್ತಿರುವದರಿಂದ ಹುಲಿಯ ಕಾರ್ಯಾಚರಣೆಗೆ ತೊಡಕುಂಟಾ ದರೂ ಇಲಾಖೆಯ ಸಿಬ್ಬಂದಿಗಳು ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿ ಈ ಭಾಗದ ಸಾರ್ವಜನಿಕರ ಸಹಕಾರ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕಳೆದ ಮೂರು ದಿನಗಳ ಹಿಂದೆ ಬೆಸಗೂರು ಗ್ರಾಮದ ನಟೇಶ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು.
ಈ ಹಿನ್ನೆಲೆ ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್‍ಎಫ್‍ಓ ಗಂಗಾಧರ್ ಹಾಗೂ ಸಿಬ್ಬಂದಿ ವರ್ಗ, ತಿತಿಮತಿ ಆರ್‍ಆರ್‍ಟಿ ತಂಡ ಈ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ತೋಟದ ಸಮೀಪ ಬೃಹತ್ತಾದ ಕಾಡಿನಲ್ಲಿ ಹುಲಿ ಅಡಗಿರಬಹುದೆಂಬ ಸಂಶಯವಿದ್ದು ಬೆಸಗೂರು ಗ್ರಾಮದ ಕಾಫಿ ತೋಟದಲ್ಲಿ ಹುಲಿಯ ಸಂಚಾರ ಕಂಡು ಬಂದಿರುವದರಿಂದ ಹುಲಿಯ ಸೆರೆಗೆ ಬೋನ್‍ಅನ್ನು ಅಳವಡಿಸಲಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದು ಹುಲಿಯ ಸಂಚಾರದ ಬಗ್ಗೆ ವಿಶೇಷ ಗಮನಹರಿಸಿದ್ದಾರೆ. ಹುಲಿಯ ಸಂಚಾರ ಸಂದರ್ಭ ಹಸು ಎದುರಾಗಿರುವದರಿಂದ ಹುಲಿ ಇದರ ಮೇಲೆ ಧಾಳಿ ನಡೆಸಿರಬಹುದು ಎಂಬ ಮಾಹಿತಿಯನ್ನು ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್‍ಎಫ್‍ಓ ಗಂಗಾಧರ್ ಮಾಧ್ಯಮಕ್ಕೆ ಮಾಹಿತಿ ಒದಗಿಸಿದರು.
ಸಾರ್ವಜನಿಕರು ಯಾವದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ನಿರಂತರವಾಗಿ ಕರ್ತವ್ಯದಲ್ಲಿದ್ದಾರೆ. ಹುಲಿಯ ಸುಳಿವು ಲಭ್ಯವಾದಲ್ಲಿ ಅಧಿಕಾರಿಗಳಿಗೆ ಕೂಡಲೇ ತಿಳಿಸುವಂತೆ ಮನವಿ ಮಾಡಿದ್ದಾರೆ.