ಮಡಿಕೇರಿ, ಜೂ. 7: ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ ಸಂಬಂಧ ತಾ. 8 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಚುನಾವಣೆಯಲ್ಲಿ ಮತದಾರರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ವಿಧಾನ ಪರಿಷತ್ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‍ಗಳು, ರಾಜ್ಯ ಸರ್ಕಾರದ ಕಾರ್ಖಾನೆಗಳು, ಕೇಂದ್ರ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಆರ್ಹ ಮತದಾರರಿಗೆ ಸೀಮಿತವಾದಂತೆ ಹಾಗೂ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಎಸ್ಟಾಬ್ಲಿಸ್ಮೆಂಟ್‍ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಆರ್ಹ ಮತದಾರರಿಗೆ ಸೀಮಿತವಾದಂತೆ ಮತದಾನ ಮಾಡಲು ಆನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರವು ಮಂಜೂರು ಮಾಡಿ ಆದೇಶಿಸಿದೆ.

ಚುನಾವಣಾ ಆಯೋಗದಿಂದ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್‍ಗಳ ಮೂಲಕ ಮತದಾರರು ಮತಪತ್ರದಲ್ಲಿ 1,2,3... ಅಥವಾ ರೋಮನ್ ಅಂಕಿ I,II,III... ಹಾಗೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದ ಭಾರತೀಯ ಭಾಷೆಗಳ ಅಂಕಿಗಳಲ್ಲಿ ಗುರುತು ಮಾಡಬೇಕಾಗಿರುತ್ತದೆ. 1,2,3... ಎಂದು ಪ್ರಾಶಸ್ತ್ಯ ಮತಗಳನ್ನು ನಮೂದಿಸಬೇಕಾಗಿರುತ್ತದೆ. ಒಂದು/ಎರಡು/ಮೂರು ಇತ್ಯಾದಿ ಅಕ್ಷರಗಳಲ್ಲಿ ನಮೂದಿಸಬಾರದು.

ಚುನಾವಣೆ ಹಿನ್ನೆಲೆ ತಾ. 7 ರ ಬೆಳಿಗ್ಗೆ 6 ಗಂಟೆಯಿಂದ ತಾ. 8 ರ ರಾತ್ರಿ 8 ಗಂಟೆಯವರೆಗೆ ಮತಗಟ್ಟೆ ವ್ಯಾಪ್ತಿಯ 200 ಮೀಟರ್ ವ್ಯಾಪ್ತಿಯನ್ನು 144 ಸಕ್ಷನ್ ಜಾರಿಯಲ್ಲಿರುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಬಗ್ಗೆ ಮತ್ತು ಭಾಗಸಂಖ್ಯೆ, ಕ್ರಮ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಳ್ಳಲು ಮಡಿಕೇರಿ ತಾಲೂಕು ಕಚೇರಿ 08272-228396, ಸೋಮವಾರಪೇಟೆ ತಾಲೂಕು ಕಚೇರಿ, 08276-284044 ಮತ್ತು ವೀರಾಜಪೇಟೆ ತಾಲೂಕು ಕಚೇರಿ 08274-257328 ತಿತಿತಿ.ಞoಜಚಿgu.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಪಡೆಯಬಹುದು.

ತಾ. 8 ರಂದು ಮಡಿಕೇರಿ ನಗರಸಭೆ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಾಗೂ ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವದೇ ಚುನಾವಣಾ ಪ್ರಚಾರವನ್ನು ಮಾಡುವಂತಿಲ್ಲ. ರಾಜಕೀಯ ಪಕ್ಷಗಳ ಚುನಾವಣಾ ಬೂತ್‍ನ್ನು ಮತಗಟ್ಟೆಯ 200 ಮೀಟರ್ ದೂರದಲ್ಲಿ ಸ್ಥಾಪಿಸಬಹುದು. ಪಾಸ್‍ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ. ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್ (ದಿನಾಂಕ:31.5.2018 ಕ್ಕೂ ಮೊದಲು ಖಾತೆ ತೆರೆದಿರುವ), ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಹೆಲ್ತ್ ಇನ್ಸುರೆನ್ಸ್ ಕಾರ್ಡ್, ಆರ್‍ಜಿಐ ವತಿಯಿಂದ ನೀಡಿರುವ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಚುನಾವಣೆ ಆಯೋಗ ನೀಡುವ ವೋಟರ್ ಸ್ಲಿಪ್, ಎಂಪಿ, ಎಂಎಲ್‍ಎ ಮತ್ತು ಎಂಎಲ್‍ಸಿಯವರಿಗೆ ಅಧಿಕೃತವಾಗಿ ನೀಡಿರುವ ಕಾರ್ಡ್ ತೋರಿಸಿ ಅರ್ಹರು ಮತದಾನ ಮಾಡಬಹುದಾಗಿದೆ.