ಮಡಿಕೇರಿ, ಜೂ. 7: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದಲ್ಲಿ ಕಳ್ಳತನವಾಗಿದ್ದ ಬಂದೂಕು ಹಾಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಮಡಿಕೇರಿ ತಾಲೂಕು, ಕೆ. ನಿಡುಗಣೆ ಗ್ರಾಮದ ನಾಪಂಡ ಈರಪ್ಪ ಅವರ ಮನೆಯಿಂದ ಬಂದೂಕು ಕಳ್ಳತನವಾದ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಂದೂಕು ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವದರಿಂದ ಕಾರ್ಯಪ್ರವೃತ್ತರಾದ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಯ ಬಗ್ಗೆ ಬಲೆ ಬೀಸಿದ್ದರು.
ತಾ. 6 ರಂದು ಜಿಲ್ಲಾ ಅಪರಾಧ ಪತ್ತೆದಳ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯ ನಡೆಸಿ ಕಾಕೋಟುಪರಂಬು ಗ್ರಾಮದ ನಿವಾಸಿ ಎಂ.ಎಂ. ದರ್ಶನ್ ಪೊನ್ನಪ್ಪ (42), ತಂದೆ ಮಾಚಯ್ಯ ಎಂಬಾತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಕೆ. ನಿಡುಗಣೆ ಗ್ರಾಮದ ಈರಪ್ಪ ಎಂಬವರ ಮನೆಯಿಂದ ಬಂದೂಕನ್ನು ಕಳ್ಳತನ ಮಾಡಿರುವದು ಬೆಳಕಿಗೆ ಬಂದಿದೆ.
ಬಂಧಿತ ದರ್ಶನ್ನಿಂದ ಕಳ್ಳತನ ಮಾಡಿದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಈ ಹಿಂದೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದು, ಬಿಡುಗಡೆಗೊಂಡಿರುತ್ತಾನೆ ಎಂದು ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನ ಹಾಗೂ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ನಿರ್ದೇಶನದ ಮೇರೆ ಪ್ರೊಬೇಷನರಿ ಎಸ್ಪಿ ಎನ್. ಯತೀಶ್, ಗ್ರಾಮಾಂತರ ಠಾಣೆ ನಿರೀಕ್ಷಕ ಪಿ.ಎಂ. ಸಿದ್ದಯ್ಯ, ಸಿಬ್ಬಂದಿಗಳಾದ ಕೆ.ವೈ. ಹಮೀದ್, ತಮ್ಮಯ್ಯ, ಅನಿಲ್ ಕುಮಾರ್, ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ವಸಂತ, ಶಶಿಕುಮಾರ್ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ವಿ. ಚೇತನ್, ಸಿಬ್ಬಂದಿಗಳಾದ ತೀರ್ಥಕುಮಾರ್, ಇಬ್ರಾಹಿಂ ಹಾಗೂ ಸೈಬರ್ ಸೆಲ್ನ ರಾಜೇಶ್ ಹಾಗೂ ಗಿರೀಶ್ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದು, ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿ ಕೊಂಡಿರುತ್ತಾರೆ.