ಮಡಿಕೇರಿ, ಜೂ. 7: ಮಡಿಕೇರಿ ನಗರಸಭೆಯಿಂದ ನೂತನವಾಗಿ ನಿರ್ಮಾಣದೊಂದಿಗೆ, ಈಗಾಗಲೇ ಹಿಂದಿನ ಜಿಲ್ಲ್ಲಾ ಉಸ್ತುವಾರಿ ಸಚಿವ ರಿಂದ ತರಾತುರಿಯಲ್ಲಿ ಉದ್ಘಾಟನೆ ಗೊಂಡಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಇಂದು ನಗರಸಭಾ ಆಯುಕ್ತೆ ಶುಭ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಖುದ್ದು ಪ್ರತ್ಯೇಕ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.ನೂತನ ನಿಲ್ದಾಣದಲ್ಲಿ ಮಧ್ಯಭಾಗ ದಿಂದ ನಿರ್ಮಾಣ ಗೊಂಡಿರುವ ತಂಗುದಾಣದ ಉಭಯ ಕಡೆಗಳಲ್ಲಿ ತಲಾ 10 ರಂತೆ ಒಟ್ಟು 20 ಖಾಸಗಿ ಬಸ್‍ಗಳು ಏಕಕಾಲಕ್ಕೆ ನಿಲುಗಡೆ ಗೊಳಿಸುವಂತೆ ವ್ಯವಸ್ಥೆ ಕಲ್ಪಿಸ ಲಾಗುತ್ತಿದೆ. ಅಲ್ಲದೆ ‘ವೆಬ್ಸ್’ ಮುಂಭಾಗದ ಮೂಲಕ ಬಸ್‍ಗಳು ಹೊರ ತೆರಳಲು ಮತ್ತು ಇಂದಿರಾ ಕ್ಯಾಂಟೀನ್ ಪಕ್ಕದ ಇನ್ನೊಂದು ಮಾರ್ಗದಿಂದ ಒಳ ಪ್ರವೇಶಿಸಲು ದ್ವಾರಗಳನ್ನು ರೂಪಿಸಲಾಗುತ್ತಿದೆ.

(ಮೊದಲ ಪುಟದಿಂದ)ನೂತನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ನಿಲುಗಡೆಯೊಂದಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದೊಂದಿಗೆ ಕೈ - ಕಾಲು ತೊಳೆಯುವದು ಸೇರಿದಂತೆ ಇತರ ಅನುಕೂಲತೆ ಮಾಡಲಾಗುತ್ತಿದೆ. ನೂತನ ನಿಲ್ದಾಣದ ಮೇಲಂತಸ್ತಿನಲ್ಲಿ ಎಂಟು ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ತೆರಳಲು ಮೆಟ್ಟಿಲುಗಳ ಸಹಿತ ಸೌಕರ್ಯ ಕಲ್ಪಿಸಿರುವದು ಗೋಚರಿಸಲಿದೆ. ಈಗಾಗಲೇ ವಿದ್ಯುತ್ ಸಂಪರ್ಕ ಕೂಡ ಅಳವಡಿಸಲಾಗಿದೆ. ಈ ನಿಲ್ದಾಣದ ಆವರಣ ಗೋಡೆ ಕಾಮಗಾರಿಯೂ ಭರದಿಂದ ಸಾಗಿದೆ.

ವಾರದಲ್ಲಿ ಪೂರ್ಣ: ನಗರಸಭೆ ಆಯುಕ್ತೆ ಬಿ. ಶುಭ ಪ್ರಕಾರ ಒಂದು ವಾರದೊಳಗೆ ಎಲ್ಲಾ ಕಾಮಗಾರಿ ಪೂರೈಸಿ ಬಸ್‍ಗಳ ಸಂಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಈ ನಡುವೆ ಹಿರಿಯ ನಾಗರಿಕರ ವೇದಿಕೆಯು ದೂರು ಸಲ್ಲಿಸಿ ರೇಸ್‍ಕೋರ್ಸ್ ರಸ್ತೆ ದುರಸ್ತಿಗೊಳಿಸದೆ ಬಸ್‍ಗಳ ಓಡಾಟಕ್ಕೆ ಅವಕಾಶ ನೀಡಬಾರದೆಂದು ಆಕ್ಷೇಪಿಸಿರುವದಾಗಿ ಗೊತ್ತಾಗಿದೆ.

ಹಣ ಪಾವತಿಸದೆ ವಿಳಂಬ : ಇನ್ನು ಖಾಸಗಿ ಬಸ್ ನಿಲ್ದಾಣದ ಗುತ್ತಿಗೆದಾರ ಸಿದ್ಧಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಸಕಾಲದಲ್ಲಿ ಹಣ ಬಿಡುಗಡೆ ಮಾಡದೆ ಕಾಮಗಾರಿ ವಿಳಂಬಗೊಳ್ಳುವಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟು ರೂ. 5 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪಡೆದುಕೊಂಡಿದ್ದು, ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಳಿಸಲಾಗಿದೆ. ಬದಲಾಗಿ ರೂ. 1 ಕೋಟಿಯಷ್ಟು ಪಾವತಿಯಾಗಬೇಕಿದ್ದು, ನಗರಸಭೆ ಎಷ್ಟು ಬೇಗನೆ ಹಣ ಪಾವತಿಸುವದೋ ಅಷ್ಟೇ ಶೀಘ್ರ ಕೆಲಸ ಪೂರೈಸಿ ನಿಲ್ದಾಣವನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಡಲಾಗುವದು ಎಂದು ಪ್ರತಿಕ್ರ್ರಿಯಿಸಿದ್ದಾರೆ.

ಇನ್ನೊಂದೆಡೆ ಎಸ್‍ಪಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದೊಂದಿಗೆ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ನೂತನ ನಿಲ್ದಾಣದಿಂದ ಬಸ್‍ಗಳ ಸಂಚಾರ ಸಂಬಂಧ ಮಾರ್ಗದ ಕುರಿತು ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಶಾಸಕರ ಭೇಟಿ ಸಂದರ್ಭ ‘ಮೂಡಾ’ ಮಾಜಿ ಅಧ್ಯಕ್ಷ ಶಜಿಲ್ ಕೃಷ್ಣನ್ ಹಾಗೂ ನಗರಸಭೆ ಇಂಜಿನಿಯರ್ ಮತ್ತಿತರರು ಪಾಲ್ಗೊಂಡಿದ್ದರು.

ಅಧ್ಯಕ್ಷರ ಪ್ರತಿಕ್ರಿಯೆ : ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ ಏಕಪಕ್ಷೀಯವಾಗಿ ಯಾವ ತೀರ್ಮಾನ ಕೈಗೊಳ್ಳುವದು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ತಾ. 15ರ ತನಕ ಮೇಲ್ಮನೆ ಚುನಾವಣಾ ಸಂಹಿತೆ ಜಾರಿಯಲ್ಲಿದ್ದು, ಆ ಬಳಿಕ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಸಾರಿಗೆ ಪ್ರಾಧಿಕಾರ, ಸಾರ್ವಜನಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಬಸ್ ಮಾಲೀಕರ ಜಂಟಿ ಸಭೆ ನಡೆಸುವ ಮುಖಾಂತರ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು.

ಹೇಳುವಷ್ಟು ಸುಲಭವಿಲ್ಲ : ನಗರಸಭೆ ಉಪಾಧ್ಯಕ್ಷ ಹಾಗೂ ಬಿಜೆಪಿಯ ಟಿ.ಎಸ್. ಪ್ರಕಾಶ್ ಅವರ ಅಭಿಪ್ರಾಯ ಕೇಳಲಾಗಿ, ಸದ್ಯದ ಮಟ್ಟಿಗೆ ಬಸ್ ನಿಲ್ದಾಣದ ಕೆಲಸ ಸಮರ್ಪಕವಿಲ್ಲವೆಂದೂ, ಹೇಳುವಷ್ಟು ಸುಲಭದಲ್ಲಿ ನೂತನ ನಿಲ್ದಾಣದ ಮೂಲಕ ಖಾಸಗಿ ಬಸ್‍ಗಳ ಓಡಾಟ ಆರಂಭಿಸಲು ಸಾಧ್ಯವಿಲ್ಲವೆಂದು ಬೊಟ್ಟು ಮಾಡಿದರು.

ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರ ಸಮಕ್ಷಮ ಪರಿಶೀಲನೆ ನಡೆಸಿ ಖಾಸಗಿ ಬಸ್‍ಗಳ ಸಂಚಾರ ಸಂಬಂಧ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ. ಆ ದಿಸೆಯಲ್ಲಿ ನಗರಸಭೆಯಿಂದ ಇದುವರೆಗೆ ಯಾವದೇ ಕೆಲಸ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಈ ದಿಕ್ಕಿನಲ್ಲಿ ತಕ್ಷಣ ಗಮನ ಹರಿಸಬೇಕಿದೆ ಎಂದು ಪ್ರಕಾಶ್ ಮಾರ್ನುಡಿದರು.