ಮಡಿಕೇರಿ, ಜೂ. 7: ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ತಾ. 8ರಂದು (ಇಂದು) ಚುನಾವಣೆ ನಡೆಯಲಿದೆ. ಕೊಡಗು ಜಿಲ್ಲೆಯೂ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳನ್ನು ಒಳಗೊಂಡಂತೆ ಈ ಎರಡು ಕ್ಷೇತ್ರಗಳಿಗೆ ವಿಧಾನಪರಿಷತ್ ಸದಸ್ಯರ ಆಯ್ಕೆಯಾಗಬೇಕಿದೆ.ಶಿಕ್ಷಕರ ಕ್ಷೇತ್ರಕ್ಕೆ 20,481 ಹಾಗೂ ಪದವೀಧರ ಕ್ಷೇತ್ರದಲ್ಲಿ 67,306 ಮತದಾರರಿದ್ದಾರೆ. ಈ ಚುನಾವಣೆಗಾಗಿ ಆಯಾ ಜಿಲ್ಲೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಕೊಡಗಿನಲ್ಲೂ ಸಹಾಯಕ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ನೇತೃತ್ವದಲ್ಲಿ ಸಿದ್ಧತೆ ಮಾಡಲಾಗಿದೆ.ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿಂತೆ ಕಣದಲ್ಲಿ ಒಟ್ಟು 12 ಹಾಗೂ ಪದವೀಧರ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಕೊಡಗಿನಲ್ಲಿ 583 ಪುರುಷರು ಹಾಗೂ 667 ಮಹಿಳಾ ಮತದಾರರು ಸೇರಿ ಒಟ್ಟು 1250 ಮಂದಿ ನೋಂದಾಯಿತ ಮತದಾರರಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಜಿಲ್ಲೆಯ 947 ಪುರುಷರು ಹಾಗೂ 686 ಪುರುಷರು ಸೇರಿ 1633 ಮಂದಿಗೆ ಮತ ಚಲಾಯಿಸುವ ಅವಕಾಶವಿದೆ.

ಮತಗಟ್ಟೆಗಳು : ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ (ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಶಾಂತಳ್ಳಿ ಹೋಬಳಿ) ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ (ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ) ಈ ತಾಲೂಕಿನ ಎರಡು ಮತಗಟ್ಟೆಗಳಾಗಿವೆ. ಇದರೊಂದಿಗೆ ಮಡಿಕೇರಿ ನಗರಸಭೆಯ ಕಾವೇರಿ ಕಲಾಕ್ಷೇತ್ರ ಹಾಗೂ ವೀರಾಜಪೇಟೆ ತಾಲೂಕಿಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ತಲಾ ಎರಡು ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಮತದಾರರು ನಿಗದಿ ಕೇಂದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

ಜಿಲ್ಲೆಯ ಒಟ್ಟು 8 ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 4ರಂತೆ ಮತಗಟ್ಟೆ ಸಿಬ್ಬಂದಿಗಳನ್ನು ಮತ್ತು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೋ ವೀಕ್ಷಕರು ಮತ್ತು ಮತಗಟ್ಟೆಗೆ ಒಬ್ಬರು ವೀಡಿಯೋ ಗ್ರಾಫರ್ ಅನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಸುಸೂತ್ರ ಮತದಾನಕ್ಕೆ ಇನ್ನಿತರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

(ಮೊದಲ ಪುಟದಿಂದ)

ಶಿಕ್ಷಕರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯರಾಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಅಭ್ಯರ್ಥಿಗಳು ಯಾರು?

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಬಿಜೆಪಿ) , ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್) , ಎಸ್.ಎಲ್. ಬೋಜೇಗೌಡ (ಜೆಡಿಎಸ್) , ಡಾ. ಅರುಣ್ ಹೊಸಕೊಪ್ಪ (ಪಕ್ಷೇತರರು) ಅಲೋಷಿಯಸ್ ಡಿಸೋಜ (ಪಕ್ಷೇತರರು), ಕೆ.ಬಿ. ಚಂದ್ರೋಜಿ ರಾವ್ (ಪಕ್ಷೇತರರು), ಡಿ.ಕೆ. ತಾಳಸಪ್ಪ (ಪಕ್ಷೇತರರು), ನಿತ್ಯಾನಂದ ಶೆಟ್ಟಿ (ಪಕ್ಷೇತರರು), ಪ್ರಭುಲಿಂಗ ಪಿ. ಆರ್. (ಪಕ್ಷೇತರರು), ಬಸವರಾಜಪ್ಪ (ಪಕ್ಷೇತರರು), ಎಂ. ರಮೇಶ್ (ಪಕ್ಷೇತರರು), ರಾಜೇಂದ್ರ ಕುಮಾರ್ (ಪಕ್ಷೇತರರು)

ಜಿಲ್ಲಾವಾರು ಮತದಾರರು

ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 20,481 ಮಂದಿ ಮತದಾರರಿದ್ದಾರೆ. ಇವರಲ್ಲಿ ಕೊಡಗು ಜಿಲ್ಲೆ 1250, ಚಿಕ್ಕಮಗಳೂರು 3,338, ದಕ್ಷಿಣ ಕನ್ನಡ 7,140, ಶಿವಮೊಗ್ಗ 4960, ಉಡುಪಿ 2768, ದಾವಣಗೆರೆÉ 1025 ಮತದಾರರನ್ನು ಹೊಂದಿದೆ ಇತರೆ 5 ಮತದಾರರಿದ್ದಾರೆ.

ಪದವೀಧರ ಕ್ಷೇತ್ರ

ಪದವೀಧರ ಕ್ಷೇತ್ರದ ಹಾಲಿ ಅಭ್ಯರ್ಥಿಯಾಗಿರುವ ಡಿ.ಎಚ್. ಶಂಕರಮೂರ್ತಿ ಅವರು ವಿಧಾನ ಪರಿಷತ್‍ನ ಸಭಾಪತಿಯೂ ಆಗಿದ್ದರು. ಈ ಬಾರಿ ಈ ಕ್ಷೇತ್ರಕ್ಕೆ ಒಟ್ಟು 8 ಉಮೇದುವಾರರಿದ್ದಾರೆ.

ಯಾರ್ಯಾರು ?

ಆಯನೂರು ಮಂಜುನಾಥ್ (ಬಿಜೆಪಿ), ಎಸ್.ಪಿ. ದಿನೇಶ್ (ಕಾಂಗ್ರೆಸ್), ಅರುಣ್ ಕುಮಾರ್ (ಜೆಡಿಎಸ್), ಪಿ.ಸಿ. ಪಟೇಲ್ (ಸರ್ವಜನತಾ ಪಾರ್ಟಿ), ಜಫರುಲ್ಲಾ ಸತ್ತರ್‍ಖಾನ್ (ಪಕ್ಷೇತರರು), ಜಯಕುಮಾರ್ (ಪಕ್ಷೇತರರು), ಪ್ರಭುಲಿಂಗ ಪಿ. ಆರ್., (ಪಕ್ಷೇತರರು), ಬಿ.ಕೆ. ಮಂಜುನಾಥ್ (ಪಕ್ಷೇತರರು), ಪ್ರಭುಲಿಂಗ ಪಿ. ಆರ್ ಅವರು ಎರಡು ಕ್ಷೇತ್ರಗಳಿಗೂ ಸ್ಪರ್ಧೆ ಮಾಡಿದ್ದಾರೆ.

ಮತದಾರರು

ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 67,306 ಮತದಾರರಿದ್ದಾರೆ. ಈ ಪೈಕಿ ಕೊಡಗು ಜಿಲ್ಲೆ 1,633, ಚಿಕ್ಕಮಗಳೂರು 8788, ದಕ್ಷಿಣ ಕನ್ನಡ 15,494, ಶಿವಮೊಗ್ಗ 27,044, ಉಡುಪಿ 8,276 ಹಾಗೂ ದಾವಣಗೆರೆ 6071 ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಇತರೆ 14 ಮತದಾರರಿದ್ದಾರೆ. ತಾ. 12 ರಂದು ಫಲಿತಾಂಶ ಹೊರಬೀಳಲಿದೆ.