ಸಿದ್ದಾಪುರ, ಜೂ. 6: ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂದೆ ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ ಮನೆಯ ಸಾಮಾಗ್ರಿಗಳನ್ನು ಹಾಗೂ ಕಾಫಿ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ ಸಿದ್ದಾಪುರದ ಸಮೀಪದ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ.
ಪಾಲಿಬೆಟ್ಟ ರಸ್ತೆಯ ನಿವಾಸಿ ಕಾಫಿ ಬೆಳೆಗಾರರಾದ ದೇವಣಿರ ವಜ್ರ ಬೋಪಣ್ಣ ಎಂಬವರ ಮನೆಯ ಅಂಗಳಕ್ಕೆ ಮಂಗಳವಾರ ರಾತ್ರಿ 10 ಗಂಟೆಯ ಸಮಯಕ್ಕೆ ಮರಿಯಾನೆ ಸೇರಿದಂತೆ 20ಕ್ಕೂ ಅಧಿಕ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಮನೆಯ ಮುಂಭಾಗದಲ್ಲಿಟ್ಟಿದ್ದ ಪ್ಲಾಸ್ಟಿಕ್ ಚೇರ್‍ವೊಂದನ್ನು ಧ್ವಂಸಗೊಳಿಸಿದಲ್ಲದೇ ಮನೆಯ ಒಳಕ್ಕೆ ಕಾಡಾನೆಗಳು ನುಗ್ಗಲು ಯತ್ನಿಸಿದವು ಎಂದು ಬೋಪಣ್ಣ ‘ಶಕ್ತಿ’ಗೆ ತಿಳಿಸಿದರು.
ಕಾಡಾನೆಗಳು ಮನೆಯ ಅಂಗಳದಲ್ಲೇ ರಾಜಾರೋಷವಾಗಿ ಸುತ್ತಾಡುತ್ತಿರುವದನ್ನು ಗಮನಿಸಿದ ಮನೆಯವರು ಭಯದಿಂದ ಹೊರಕ್ಕೆ ಬರಲು ಸಾಧ್ಯವಾಗದೇ ಮನೆಯೊಳಗೆ ಕುಳಿತುಕೊಂಡರು. ಕೆಲಕಾಲ ಆತಂಕ ಸೃಷ್ಟಿಸಿತ್ತು ಎನ್ನಲಾಗಿದೆ. ನಂತರ ಕಾಡಾನೆಗಳ ಹಿಂಡು ಮನೆಯ ಸಮೀಪದ ತೋಟಕ್ಕೆ ನುಸುಳಿದ ಸಂದರ್ಭ ಬೋಪಣ್ಣನವರು ಪಟಾಕಿ ಸಿಡಿಸಿದರು ಎನ್ನಲಾಗಿದೆ.
ಪಟಾಕಿ ಸಿಡಿಸಿದರೂ ಕೂಡ ಕಾಡಾನೆಗಳು ತೋಟದಿಂದ ತೆರಳದೇ ರೋಷಗೊಂಡ ಕಾಡಾನೆಗಳು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ 200ಕ್ಕೂ ಅಧಿಕ ಫಸಲಿರುವ ಕಾಫಿ ಗಿಡಗಳನ್ನು ಧ್ವಂಸಗೊಳಿಸಿ ನಾಶಪಡಿಸಿದೆ ಎಂದು ತಿಳಿಸಿದರು. ನಂತರ ತೋಟದೊಳಗಿದ್ದ ಕೆರೆಯ ಬಳಿ ತೆರಳಿ ಕೆರೆಯ ಬದಿಯ ಸುತ್ತಲು ತುಳಿದು ನಾಶಪಡಿಸಿದೆ. 20ಕ್ಕೂ ಅಧಿಕ ಕಾಡಾನೆಗಳ ಪೈಕಿ ಮರಿಯಾನೆಗಳು ಒಂಟಿ ಸಲಗಗಳಿ ದ್ದವು ಎಂದು ಬೋಪಣ್ಣ ತಿಳಿಸಿದರು. ಏಕಕಾಲದಲ್ಲೇ ಕಾಡಾನೆಗಳು ಮನೆಯ ಅಂಗಳದಲ್ಲಿ ಸುತ್ತಾಡಿದವು ಎಂದರು. -ವಾಸು, ಸಿದ್ದಾಪುರ