ಭಾಗಮಂಡಲ, ಜೂ. 4: ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ವಿದ್ಯುತ್ ಸರಬರಾಜು ಇಲ್ಲದೆ ಸಮಸ್ಯೆ ಉಂಟಾಗಿದೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಚೆಸ್ಕಾಂ ಇಲಾಖೆ ಕಚೇರಿಗೆ ಮನವಿ ಸಲ್ಲಿಸಿದರೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯನ್ನು ಕೂಡಲೇ ನಿವಾರಿಸಿ ಎಂದು ಒತ್ತಾಯಿಸಿ ಸಾರ್ವಜನಿಕರು ಚೆಸ್ಕಾಂ ಇಲಾಖೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಭಾಗಮಂಡಲ ಹೋಬಳಿ ವ್ಯಾಪ್ತಿಯ ಚೆಟ್ಟಿಮಾನಿ, ಅಯ್ಯಂಗೇರಿ, ಕೋರಂಗಾಲ, ಹಾಗೂ ತಣ್ಣಿಮಾನಿ ವ್ಯಾಪ್ತಿಯ ಸಾರ್ವಜನಿಕರು ಪ್ರತಿಭಟನೆ ನಡೆಸಿ ಸುಮಾರು ಎರಡು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳೊಂದಿಗೆ ಚರ್ಚಿಸಿದಾಗ ಸಾರ್ವಜನಿಕರಿಗೆ ಉಡಾಫೆ ಉತ್ತರವನ್ನು ಕೊಡುವದಲ್ಲದೆ ತೀರಾ ಕೇವಲವಾಗಿ ಮಾತನಾಡುತ್ತಾರೆ.ವಿಷಯವನ್ನು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಚೆಟ್ಟಿಮಾನಿ ಭಾಗಮಂಡಲ, ಭೂತನಕಾಡು, ಹಾಗೂ ತಣ್ಣಿಮಾನಿ ಭಾಗಕ್ಕೆ ಹೆಚ್ಚುವರಿ ಟ್ರಾನ್ಸ್‍ಫಾರ್ಮರ್ ಬಂದು ಆರು ತಿಂಗಳು ಕಳೆದರೂ ಅಳವಡಿಸಲು ಕ್ರಮಕೈಗೊಳ್ಳಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಇಲಾಖೆಯ ಅಧಿಕಾರಿಗಳ ಅನುಮತಿ ಇಲ್ಲದೆ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಅನಧಿಕೃತ ಕಂಬಗಳನ್ನು ಅಲ್ಲಲ್ಲಿ ಅಳವಡಿಸಿದ್ದಾರೆ.
ತೋಟಗಳಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ತೂಗಾಡುತ್ತಿದ್ದು ಸರಿಪಡಿಸದೇ ಇರುವದರಿಂದ ಜಾನುವಾರು ಹಾಗೂ ಮನುಷ್ಯರಿಗೆ ತೊಂದರೆಯಾಗುತ್ತಿದೆ. ಜಂಗಲ್ ಕಟ್ಟಿಂಗ್ ಆಗದೆ ವರ್ಷಗಳೇ ಸಂದಿವೆ. ಜನಪ್ರತಿನಿಧಿಗಳು ಈ ಬಗ್ಗೆ ಪ್ರಶ್ನಿಸಿದರೆ ಲೈನ್‍ಮೆನ್‍ಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ಸಲ್ಲಿಸಿ ಕೇಸು ದಾಖಲಿಸಿದ್ದಾರೆ.
ಕೂಡಲೇ ಕೇಸು ಹಿಂಪಡೆದುಕೊಳ್ಳದಿದ್ದಲ್ಲಿ ಹಾಗೂ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದಲ್ಲಿ ಚೆಸ್ಕಾಂ ಇಲಾಖೆಯ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದರು.
(ಮೊದಲ ಪುಟದಿಂದ) ಈ ಸಂದರ್ಭ ಇಲಾಖೆಯ ಇಂಜಿನಿಯರ್ ಸಂಪತ್‍ಕುಮಾರ್ ಸ್ಥಳಕ್ಕೆ ಆಗಮಿಸಿದಾಗ ಸಾರ್ವಜನಿಕರು ಸಮಸ್ಯೆಯನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು. ಜೂನಿಯರ್ ಇಂಜಿನಿಯರ್ ಹರಿಣಿ ಲೈನ್‍ಮೆನ್‍ಗಳಾದ ರಾಘವೇಂದ್ರ ಹಾಗೂ ದಿನೇಶ್ ಅವರನ್ನು ಕೂಡಲೇ ವರ್ಗಾಯಿಸುವಂತೆ ಪಟ್ಟು ಹಿಡಿದರು. ಸಮಸ್ಯೆಯನ್ನು ಪರಿಹರಿಸುವುದಾಗಿ ಹಾಗೂ ಸೂಕ್ತ ಕ್ರಮಕೈಗೊಳ್ಳುವದಾಗಿ ಎಂಜಿನಿಯರ್ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಕಾಳನರವಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರ,ಉಪಾಧ್ಯಕ್ಷೆ ಭವಾನಿ, ಜಿಲ್ಲಾಪಂಚಾಯಿತಿ ಸದಸ್ಯ ಕುಮಾರ, ಗ್ರಾಮಪಂಚಾಯಿತಿ ಸದಸ್ಯರಾದ ರಾಜುರೈ, ಪುರುಷೋತ್ತಮ, ಭಾಸ್ಕರ, ನಂದ, ಕಾಶಿ,ಪಿ.ಎಂ.ರಾಜೀವ್ ,ಅಮೈಬಾಲಕೃಷ್ಣ, ಪದ್ಮಯ್ಯಗೌಡ, ಕುದುಕುಳಿ ಭರತ್, ಕೆದಂಬಾಡಿ ಕೀರ್ತಿಕುಮಾರ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ವೃತ್ತ ನಿರೀಕ್ಷಕ ಸಿದ್ದಯ್ಯ ಹಾಗೂ ಭಾಗಮಂಡಲ ಪ್ರಭಾರ ಠಾಣಾಧಿಕಾರಿ ವೆಂಕಟರಮಣ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.