ಸಿದ್ದಾಪುರ, ಜೂ. 4: ಬ್ಯಾಂಕಿನ ವ್ಯವಸ್ಥಾಪಕರು ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕರುಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನಯ್ಯನಕೋಟೆ ನಿವಾಸಿ ಕೆ.ಎಂ ರಶೀದ್ ಎಂಬವರ ಅಣ್ಣ ಕೆ.ಎಂ ನೌಶಾದ್ ಅವರ ಹೆಸರಿನಲ್ಲಿ ನಕಲಿ ದಾಖಲಿಗಳನ್ನು ಸೃಷ್ಟಿಸಿದ್ದಲ್ಲದೇ, ನೌಶಾದ್ ಹಾಗೂ ರಶೀದ್ ರವರ ಹೆಸರಿನಲ್ಲಿ ಸಹಿಗಳನ್ನು ನಕಲಿ ಮಾಡಿ ನೌಶಾದ್ ಹೆಸರಿನಲ್ಲಿ ಸುಮಾರು 20 ಲಕ್ಷ ರೂ. ಸಾಲವನ್ನು ಪಡೆದು ಸಿದ್ದಾಪುರ ವಿಜಯಾ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ಬಾಬು ಹಾಗೂ ಹಾಲಿ ವ್ಯವಸ್ಥಾಪಕ ಪ್ರಶಾಂತ್ರವರು ವಂಚಿಸಿದ್ದಾರೆ ಎಂದು ಆರೋಪಿಸಿ ನೌಶಾದ್ ಹಾಗೂ ರಶೀದ್ ವೀರಾಜಪೇಟೆಯ ನ್ಯಾಯಾಲಯದಲ್ಲಿ ವ್ಯವಸ್ಥಾಪಕರುಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.