ಮಡಿಕೇರಿ, ಜೂ. 4: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ, ರೋಟರಿ ಮಿಸ್ಟಿಹಿಲ್ಸ್, ವಿನೋದ್ ಮೆಡಿಕಲ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮದೆನಾಡಿನಲ್ಲಿ ಸಾರ್ವಜನಿಕರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ನೇತ್ರ ತಜ್ಞರಾದ ಡಾ. ಸಿ.ಆರ್. ಪ್ರಶಾಂತ್ ನೇತ್ರ ತಪಾಸಣೆ ಮಾಡಿದರು. ಕನ್ನಡಕದ ದೃಷ್ಟಿಯನ್ನು ಪರಿಶೀಲಿಸಿದ ಡಿ. ರವಿ ಅವರು ಕಣ್ಣಿನ ದೃಷ್ಟಿಯನ್ನು ಪರಿಶೀಲಿಸಿ ಕಣ್ಣು ದೃಷ್ಟಿಗೆ ಸರಿದೂಗುವ ಕನ್ನಡಕವನ್ನು ಶಿಫಾರಸ್ಸು ಮಾಡಿದರು.
ಶಿಬಿರದ ಅಧ್ಯಕ್ಷತೆಯನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ವಹಿಸಿ, ಸ್ವಾಗತ ಕೋರಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮದೆಮಹೇಶ್ವರ ಪಿ.ಯು. ಕಾಲೇಜಿನ ಅಧ್ಯಕ್ಷ ಹುದೇರಿ ರಾಜೇಂದ್ರ ಮಾತನಾಡಿ, ಪ್ರತಿಯೊಬ್ಬರಿಗೆ ಆರೋಗ್ಯ ಮುಖ್ಯ ಕಣ್ಣಿನ ದೋಷದ ಪರೀಕ್ಷೆಯನ್ನು ನಡೆಸಿ ಗ್ರಾಮೀಣ ಜನರಿಗೆ ಚಿಕಿತ್ಸೆ ಒದಗಿಸುವ ಸೇವೆಯನ್ನು ಗೌಡ ನಿವೃತ್ತ ನೌಕರರ ಸಂಘದವರು ಮಾಡಿರುವದು ಸ್ವಾಗತಾರ್ಹವೆಂದರು.
ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ಹೆಚ್.ಟಿ. ಅನಿಲ್ ಮಾತನಾಡಿ, ಗ್ರಾಮೀಣ ಜನರಿಗೆ ಅನುಕೂಲ ವಾಗುವಂತಹ ಮದೆ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿದ ನಿವೃತ್ತ ನೌಕರರ ಸಂಘದವರ ದೂರದೃಷ್ಟಿ ಮೆಚ್ಚುವಂತಹದೆಂದು ಹೇಳಿದರು.
ವೇದಿಕೆಯಲ್ಲಿ ಮದೆನಾಡಿನ ವಿ.ಎಸ್.ಎಸ್.ನ. ಅಧ್ಯಕ್ಷ ಕಿಮ್ಮುಡಿರ ಜಗದೀಶ್, ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ್, ನಿವೃತ್ತ ಮುಖ್ಯೋಪಾಧ್ಯಾಯ ನೆರಿಯನ ಸೋಮಯ್ಯ, ಕಾಫಿ ಬೆಳೆಗಾರ ಕುಟ್ಟೇಟಿರ ಮಾದಪ್ಪ, ರೋಟರಿ ಮಿಸ್ಟಿಹಿಲ್ಸ್‍ನ ಮಾಜಿ ಅಧ್ಯಕ್ಷ ಅಂಬೆಕಲ್ಲು ವಿನೋದ್ ಉಪಸ್ಥಿತರಿದ್ದರು.
ಒಟ್ಟು 166 ಜನರ ಕಣ್ಣು ತಪಾಸಣೆಯನ್ನು ನಡೆಸಿ, 9 ಜನರ ಕಣ್ಣುಪೊರೆ ಸರಿಪಡಿಸುವ ಚಿಕಿತ್ಸೆಗೆ ಹಾಗೂ 95 ಜನರಿಗೆ ಉಚಿತ ಕನ್ನಡಕವನ್ನು ನೀಡಲು ಶಿಫಾರಸ್ಸು ಮಾಡಿದರು. 115 ಜನರಿಗೆ ಉಚಿತವಾಗಿ ಔಷಧಿಯನ್ನು ನೀಡಲಾಯಿತು.
ರೋಟರಿ ಮಿಸ್ಟಿಹಿಲ್ಸ್‍ನ ಕಾರ್ಯದರ್ಶಿ ಸಂದೀಪ್, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಖಜಾಂಚಿ ಪೊನ್ನಚನ ಜಿ. ಸೋಮಣ್ಣ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದ, ನಿರ್ದೇಶಕರು ಗಳಾದ ಪಾಣತ್ತಲೆ ಬಿದ್ದಪ್ಪ, ದಂಬೆಕೋಡಿ ಆನಂದ, ಪಟ್ಟಡ ದೇವಯ್ಯ, ಸೂದನ ಮೋಹಿನಿ, ತಳೂರು ಕೆ. ಕಾಳಪ್ಪ, ಚೆರಿಯಮನೆ ಪ್ರಮೋದ್, ಹೊಸೋಕ್ಲು ಪೊನ್ನಪ್ಪ ಇವರುಗಳು ಉಪಸ್ಥಿತರಿದ್ದರು.