ಮಡಿಕೇರಿ, ಜೂ. 4: ಸರಕಾರ ಹಾಗೂ ಜನಪ್ರತಿನಿಧಿಗಳ ನೆರವಿನಿಂದ ಸಾರ್ವಜನಿಕರಿಗೆ ಕನಿಷ್ಟ ಮೊತ್ತಕ್ಕೆ ಶುದ್ಧ ಸಂಸ್ಕರಿಸಿದ ಕುಡಿಯುವ ನೀರಿನ ಯೋಜನೆ ರೂಪಿಸಿದ್ದು, ಅದು ಜನರಿಗೆ ಲಭಿಸದೆ ಏಜೆನ್ಸಿಗಳ ಸಹಿತ ಮಧ್ಯವರ್ತಿಗಳು ಆಯಕಟ್ಟಿನಲ್ಲಿ ಕುಳಿತು ಹಣ ಲಪಟಾಯಿಸುತ್ತಿರುವ ದಂಧೆ ಬಹಿರಂಗಗೊಂಡಿದೆ.

ಕಳೆದ ಬೇಸಿಗೆಯ ದಿನಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯತ್ತ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗಳ ಸಹಿತ ಇಲ್ಲಿನ ನಾಗರಿಕರಿಗೆ ಶುದ್ಧ ನೀರಿಗಾಗಿ ನಗರದ ಸುದರ್ಶನ ವೃತ್ತ ಬಳಿ, ಉಕ್ಕುಡ ಮಾರ್ಗ ಬದಿ, ರಾಜಾಸೀಟ್ ಬಳಿ ಅಂದಾಜು ರೂ. 40 ಲಕ್ಷ ವೆಚ್ಚದ ಪ್ರತ್ಯೇಕ ಕುಡಿಯುವ ನೀರಿನ ಘಟಕಗಳು ಸ್ಥಾಪನೆಗೊಂಡಿದ್ದವು.

ನಿರ್ಮಿತಿ ಕೇಂದ್ರದಿಂದ ಗುತ್ತಿಗೆದಾರರು, ನಗರಸಭೆ ಮಧ್ಯಸ್ಥಿಕೆಯಲ್ಲಿ ನಿರ್ಮಿಸಿರುವ ಈ ನೀರಿನ ಘಟಕಗಳು ಆರಂಭಿಕ ವಿಘ್ನವೆಂಬಂತೆ ಬಾಗಿಲು ಮುಚ್ಚಿಕೊಂಡು, ಸಾರ್ವಜನಿಕರಿಗೆ ಇನ್ನಿಲ್ಲದ ಕುಂಟುನೆಪ ಹೇಳುತ್ತಾ ದಿನಗಳನ್ನು ದೂಡಲಾಯಿತು. ಈ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿತ್ತು.

ಆ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ತೆರೆಮರೆಯಲ್ಲಿ ನಾಟಕದೊಂದಿಗೆ, ಇಂದಿಷ್ಟು ದಿನ ನೀರಿನ ವ್ಯವಸ್ಥೆ ರೂಪಿಸಿತ್ತು. ಇತ್ತೀಚಿನ ದಿನಗಳ ತನಕ ಕೆಲವು ಸಂದರ್ಭ ನೀರು ಲಭ್ಯವಿತ್ತು. ಈಚೆಗೆ ಚುನಾವಣಾ ಪ್ರಕ್ರಿಯೆ ಬೆನ್ನಲ್ಲೇ ಸುದರ್ಶನ ಬಳಿ ನೀರಿನ ಕೇಂದ್ರ ಬಾಗಿಲು ಮುಚ್ಚಿಕೊಂಡಿತು.

ಉಕ್ಕುಡ ಬಳಿ ಬಾಗಿಲು ಮುಚ್ಚಿಕೊಳ್ಳುವ ಬದಲು ನೀರು ಪೂರೈಕೆಯಿಲ್ಲದೆ, ಪ್ರಾರಂಭದಿಂದ ಇದುವರೆಗೂ ಯಾರೊಬ್ಬರು ಅಲ್ಲಿ ಕೆಲಸ ನಿರ್ವಹಿಸಲೂ ಕಾಣ ಸಿಗಲಿಲ್ಲ. ಇನ್ನು ರಾಜಾಸೀಟ್ ಕೇಂದ್ರದಲ್ಲಿ ಒಮ್ಮೊಮ್ಮೆ ನೀರು ಲಭಿಸಿದರೂ, ಕೆಲಸದಾತ ರಜೆಯಿಂದ ಬಾಗಿಲು ಮುಚ್ಚಿದೆ ಎಂದು ಸಬೂಬು ದೊರೆಯಲಿದೆ.

ಕಾಮಗಾರಿ ಅಧ್ಯಕ್ಷರ ಆಕ್ರೋಶ : ನಗರಸಭೆಯ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುವದರೊಂದಿಗೆ, ನಗರಸಭೆಯಿಂದ ಸಂಬಂಧಿಸಿದ ಗುತ್ತಿಗೆ ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ಶಕ್ತಿ’ ಈ ಬಗ್ಗೆ ಗಮನ ಸೆಳೆದ ಬೆನ್ನಲ್ಲೇ ತಾನು ಖುದ್ದು ಪರಿಶೀಲಿಸಿದಲ್ಲದೆ, ಅಕ್ಕ ಪಕ್ಕದ ನಿವಾಸಿಗಳನ್ನು ವಿಚಾರಿಸಲಾಗಿ ನೀರು ಲಭಿಸದೆ ತಿಂಗಳು ಕಳೆದಿರುವ ಸುಳಿವು ದೊರೆತಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಆಯುಕ್ತೆ ಸಮರ್ಥನೆ : ಆದರೆ ನಗರಸಭಾ ಆಯುಕ್ತೆ ಶುಭ ಬಳಿ ವಿಚಾರಿಸಲಾಗಿ, ತಾನು ಅಲ್ಲಿಂದಲೇ ನೀರು ಪಡೆದುಕೊಳ್ಳುತ್ತಿರುವದಾಗಿ ಸಮರ್ಥಿಸಿಕೊಂಡರು. ಶುದ್ಧಕುಡಿಯುವ ನೀರಿನ ಘಟಕಗಳನ್ನು ನಿರ್ಮಿತಿ ಕೇಂದ್ರದಿಂದ ರೂಪಿಸಿದ್ದ ವೇಳೆ ಸಮಸ್ಯೆಗಳು ಪ್ರಾರಂಭಿಕವಾಗಿ ಇದ್ದುದಾಗಿ ಒಪ್ಪಿಕೊಂಡರಾದರೂ, ಈಗ ಮೂರು ಕಡೆ ಚಾಲನೆಯಲ್ಲಿವೆ ಎಂದು ಪ್ರತಿಕ್ರಿಯಿಸಿದರು. ಬಹುಶಃ ನಾಣ್ಯ ಹಾಕುವ ಯಂತ್ರದ ಸಮಸ್ಯೆ ಎದುರಾಗಿರಬಹುದೆಂದು ಮಾರ್ನುಡಿದರು.

ಜನತೆ ಟೀಕೆ : ಬದಲಾಗಿ ಉಕ್ಕುಡ, ರಾಜಾಸೀಟ್ ಹಾಗೂ ಸುದರ್ಶನ ಘಟಕದ ಆಸುಪಾಸಿನ ನಿವಾಸಿಗಳ ಸಹಿತ ಅನೇಕರು ‘ಶಕ್ತಿ’ಯೊಂದಿಗೆ ನೀರು ಲಭಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಹಾಗೂ ಮೇಲಧಿಕಾರಿಗಳು ನೀರಿನ ಘಟಕ ಕಲ್ಪಿಸಿ ಜನರಿಗೆ ಸೌಲಭ್ಯ ಒದಗಿಸದೆ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.