ಪ್ರತಿ ವರ್ಷ ಜೂನ್ 5 ರಂದು ವಿಶ್ವದಾದ್ಯಂತ ಪರಿಸರ ದಿನ ಆಚರಿಸಲಾಗುತ್ತದೆ. ನಮ್ಮ ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರದಲ್ಲಿನ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವುಗಳ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದು ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲುವುದರೊಂದಿಗೆ ಪರಿಸರ ಮಾಲಿನ್ಯ ತಡೆ ಬಗ್ಗೆ ಮುಂಜಾಗ್ರತೆ ವಹಿಸಲು ಮಹತ್ವದ ದಿನವಾಗಿದೆ.

ಮಾನವ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಸ್ಟಾಕ್‍ಹೋಂನಲ್ಲಿ 1972 ರ ಡಿಸೆಂಬರ್ 15 ರಂದು ಜರುಗಿದ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯು ತನ್ನ ನಿರ್ಣಯದಂತೆ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ(ಯು.ಎನ್.ಇ.ಪಿ.)ವು 1973 ರಲ್ಲಿ ಮೊಟ್ಟಮೊದಲ ಬಾರಿಗೆ ಆರಂಭಗೊಂಡ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.

ಪರಿಸರ ದಿನದ ಆತಿಥ್ಯ ಮತ್ತು ಉದ್ಘೋಷಣೆ : ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಉದ್ಘೋಷಣೆಯು “ಪ್ಲಾಸ್ಟಿಕ್ ಮಾಲಿನ್ಯ ತಡೆಯೋಣ” (ಹಿಮ್ಮೆಟ್ಟಿಸಿ) ಎಂದಾಗಿದ್ದು, ಇದರ ಆತಿಥ್ಯವನ್ನು ಭಾರತ ದೇಶ ವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪರಿಸರ : ಭೂಮಿಯ ಮೇಲಿರುವ ಎಲ್ಲಾ ಜೀವಿ ಹಾಗೂ ನಿರ್ಜೀವಿಗಳನ್ನು ಒಳಗೊಂಡ ಜೀವಗೋಳವೇ ‘ಪರಿಸರ’. ಜೀವಿಗಳು ಹಾಗೂ ನಿರ್ಜೀವ ವಸ್ತುಗಳ ಪರಸ್ಪರ ಅವಲಂಬನೆಯಿಂದ ಸಾಗುತ್ತಿರುವ ಅರಣ್ಯ, ವನ್ಯಜೀವಿಗಳು, ಜೀವ ವೈವಿಧ್ಯ, ನೀರು, ವಾಯು, ಮಣ್ಣು – ಇವು ಪರಿಸರ ಸಮತೋಲನ ಜೀವಗೋಳದ ಉಳಿವಿಗೆ ಅತಿಮುಖ್ಯವಾಗಿವೆ. ಪ್ರಕೃತಿಯ ಉಳಿವು-ನಮ್ಮೆಲ್ಲರ ಉಳಿವು. ಪ್ರಕೃತಿಯ ಅಳಿವು-ನಮ್ಮೆಲ್ಲರ ಅಳಿವು. ಆದ್ದರಿಂದ ನಾವು ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಬೇಕಿದೆ.

ಇಂದು ಮಾನವನ ಅತಿಯಾಸೆಯಿಂದ ಪ್ರಕೃತಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಮನುಷ್ಯನ ಹಲವಾರು ವೈರುದ್ಧ ಚಟುವಟಿಕೆಗಳಿಂದ ಪರಿಸರ ಸಮತೋಲನದಲ್ಲಿ ಏರುಪೇರು ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಜೀವಿಗಳ ವಿನಾಶ, ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಮಾಲಿನ್ಯ ಮುಂತಾದ ಗಂಭೀರ ಪಾರಿಸಾರಿಕ ಸಮಸ್ಯೆಗಳು ತಲೆದೋರಿವೆ.

ಪ್ಲಾಸ್ಟಿಕ್ ಬಳಕೆ ನಿಷೇಧ : ಭೂಮಿ ಮತ್ತು ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸುಪ್ರೀಂ ಕೋರ್ಟ್À ಈಗಾಗಲೇ ನಿಷೇಧಿಸಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾದ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಪರಿಸರವನ್ನು ಸಂರಕ್ಷಿಸುವ ಕಾರ್ಯದಲ್ಲಿ ನಾವು ತೊಡಗಬೇಕಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಮಾಲಿನ್ಯಕಾರಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಕಾಗದ, ಬಟ್ಟೆ ಹಾಗೂ ಸೆಣಬಿನಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಕಂಕಣಬದ್ಧರಾಗಬೇಕಿದೆ.

ಅರಣ್ಯ ಸಂರಕ್ಷಣೆ : ಅರಣ್ಯ ನಮ್ಮ ಅಮೂಲ್ಯ ಪರಿಸರ ವ್ಯವಸ್ಥೆಗಳಲ್ಲೊಂದು. ಅದು ಆರೋಗ್ಯವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗಬಲ್ಲದು. ಸಸ್ಯ ಹಾಗೂ ವನ್ಯಜೀವಿಗಳ ಸಂಪತ್ತಿನ ತಾಣವಾದ ಕಾಡು ಕ್ಷೀಣಿಸಿದರೆ ಮಳೆ ಕೊರತೆಯುಂಟಾಗಿ ಬರಗಾಲದ ಪರಿಸ್ಥಿತಿ ಒದಗಲಿದೆ. ಕಾಡಿಲ್ಲದಿದ್ದಲ್ಲಿ ನೀರಿಗೆ ತೀವ್ರ ತೊಂದರೆಯಾಗಲಿದೆ. ಇದರಿಂದ ಇಡೀ ಜೀವಿ-ಸಂಕುಲವೇ ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಅರಣ್ಯಕ್ಕೆ ಯಾವುದೇ ಧಕ್ಕೆ ಬರದಂತೆ ಮುಂಜಾಗ್ರತೆ ವಹಿಸಬೇಕಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಲಭ್ಯವಿರುವ ಸಾರ್ವಜನಿಕ ಸ್ಥಳ, ರೈತರ ಹೊಲ-ಗದ್ದೆ ಪ್ರದೇಶ ಮತ್ತು ಬೇಲಿ ಸಾಲಿನಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರವನ್ನು ಸದಾ ಹಸಿರಿನಿಂದ ಕಾಪಾಡಬೇಕಿದೆ. ಇದರಿಂದ ಶುದ್ಧ ಗಾಳಿಯೊಂದಿಗೆ ಅಂತರ್ಜಲ ವೃದ್ಧಿಸಿ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಪರಿಸರದ ಸಮತೋಲನ ಸುಸ್ಥಿತಿಗಾಗಿ, ಜೀವ ವೈವಿಧ್ಯತೆಯ ರಕ್ಷಣೆಗಾಗಿ, ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಹಾಗೂ ಜೀವ ಸಂಕುಲದ ಉಳಿವಿಗಾಗಿ ಅರಣ್ಯಗಳನ್ನು ಸಂರಕ್ಷಿಸಬೇಕಾಗಿದೆ.

ಜಲ-ಸಂರಕ್ಷಣೆ : ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದಾಗಿ ದೇಶದಲ್ಲಿ ಮಳೆಯ ಕೊರತೆಯುಂಟಾಗಿ ಬೇಸಿಗೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ನಾವು ಮಳೆ ನೀರನ್ನು ಕೂಡ ಪೋಲು ಮಾಡದೇ ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ. ಮಳೆಕುಯ್ಲು ಮತ್ತು ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ಜಲ ಸಂರಕ್ಷಣೆಗೆ ಗಮನಹರಿಸಬೇಕಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ನೀರಿನ ಕೊರತೆಯುಂಟಾಗಿ ಇಡೀ ಜೀವಿ-ಸಂಕುಲಕ್ಕೆ ತೊಂದರೆಯಾಗಲಿದೆ.

ಪಶ್ಚಿಮಘಟ್ಟ ಸಂರಕ್ಷಣೆ : ಪಶ್ಚಿಮಘಟ್ಟಗಳಂತಹ ಪರ್ವತ ಶ್ರೇಣಿಯು ಭಾರತದ ಜೀವ-ವೈವಿಧ್ಯತೆಯ ತಾಣವಾಗಿದೆ. ವಿಶ್ವಮಟ್ಟದಲ್ಲಿ ಭಾರತದ ಜೀವ ವೈವಿಧ್ಯವು ಸಂಪದ್ಭರಿತವಾಗಿದೆ. ಆದ್ದರಿಂದ ನಾವು ಜೀವಿ-ವೈವಿಧ್ಯ ಸಂಪತ್ತಿನ ಆಗರವಾದ ಪಶ್ಚಿಮಘಟ್ಟವನ್ನು ಸಂರಕ್ಷಿಸಬೇಕಾಗಿದೆ.

ಶಾಲಾ ಪರಿಸರ ಶಿಕ್ಷಣ : ನಾವು ಶಾಲಾ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪರಿಸರ ಪ್ರಜ್ಞೆಯನ್ನು ಬಿತ್ತಿದರೆ ಮುಂದೆ ಅವರು ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. ಶಾಲೆಗಳಲ್ಲಿ ಪರಿಸರ ಸಂಘ(ಇಕೋ-ಕ್ಲಬ್)ಗಳ ಮೂಲಕ ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಪರಿಸರ ಚಟುವಟಿಕೆಗಳ ಮೂಲಕ ಅವರಲ್ಲಿ ಪರಿಸರ, ನೆಲ-ಜಲ ಹಾಗೂ ಜೀವಿ-ವೈವಿಧ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ ಅವರನ್ನು ಭವಿಷ್ಯದ ಪರಿಸರ ರಾಯಭಾರಿಗಳಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ. ಕಾಡು ಉಳಿಸಿ ಬೆಳೆಸಲು ಅರಣ್ಯ ಸಸಿಗಳನ್ನು ನೆಟ್ಟು ಬೆಳೆಸೋಣ, ಮರ ಕಡಿಯುವುದನ್ನು ನಿಲ್ಲಿಸೋಣ, ವನ್ಯಜೀವಿಗಳ ಹತ್ಯೆಗೆ ಕಡಿವಾಣ ಹಾಕೋಣ, ಗುಂಪು ನೆಡುತೋಪು ಬೆಳೆಸೋಣ, ಪರಿಸರ ಮಾಲಿನ್ಯಕ್ಕೆ ಕಾರಣವಾದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸೋಣ, ಪಕ್ಷಿಗಳು, ಕಾಡು ಪ್ರಾಣಿಗಳನ್ನು ಉಳಿಸಿ ಸ್ವಾಭಾವಿಕ ಪರಿಸರವನ್ನು ನಿರ್ಮಾಣ ಮಾಡಲು ಪಣ ತೊಡೋಣ, ‘ಹಸಿರೇ ಉಸಿರು’ ಎನ್ನುವ ಮಾತು ನಿಜವಾಗಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸೋಣ.

2018ರ ವಿಶ್ವ ಪರಿಸರ ದಿನಾಚರಣೆ ಸಪ್ತಾಹದ ಅಂಗವಾಗಿ ನಾವು ನಮ್ಮ ಪರಿಸರದಲ್ಲಿ ಗಿಡ-ಮರ ಬೆಳೆಸುವುದು ಹಾಗೂ ಪ್ರಾಣಿಗಳ ರಕ್ಷಣೆ ಮತ್ತು ಜೀವಿ-ವೈವಿಧ್ಯ ಸಂರಕ್ಷಣೆಯೊಂದಿಗೆ ನೆಲ-ಜಲ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿ ಹಾಗೂ ಇನ್ನಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 5 ರಂದು ಜಿಲ್ಲಾಮಟ್ಟದಲ್ಲಿ ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಂದು ಸ್ಥಳೀಯ ಸಂಸ್ಥೆಗಳು , ಜಿಲ್ಲೆಯ ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ‘ಪರಿಸರ ಸಂರಕ್ಷಣೆ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಾವಿರಾರು ಸಸಿ ನೆಟ್ಟು ಬೆಳೆಸುವ ಯೋಜನೆ ರೂಪಿಸಲಾಗಿದೆ. ಆದ್ದರಿಂದ ನಾವೆಲ್ಲಾ ಜತೆಗೂಡಿ ಹೆಚ್ಚು ಹೆಚ್ಚು ಸಸಿನೆಟ್ಟು ಬೆಳೆಸುವ ಕಾರ್ಯದಲ್ಲಿ ತೊಡಗುವ ಮೂಲಕ ಭವಿಷ್ಯತ್ತಿಗಾಗಿ ಈ ನೆಲ-ಜಲ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳೋಣ. ಕಾಡು ಉಳಿಸಲು ಸಸಿ ನೆಟ್ಟು ಬೆಳೆಸೋಣ. ನೆಲ-ಜಲ ಹಾಗೂ ಪರಿಸರ ಸಂರಕ್ಷಣೆಯಲ್ಲಿ ತೊಡಗೋಣ. ಭೂಮಿಯಲ್ಲಿರುವ ಅಮೂಲ್ಯ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಹಸ್ತಾಂತರಿಸೋಣ.

“ಇರುವುದೊಂದೇ ಭೂಮಿ : ಇದೇ ನಮ್ಮೆಲ್ಲರ ಮನೆ, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಘೋಷ ವಾಕ್ಯವನ್ನು ಅರಿತು ಭೂಗ್ರಹ ವ್ಯವಸ್ಥೆಯನ್ನು ಸಂರಕ್ಷಿಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.

?ಟಿ. ಜಿ. ಪ್ರೇಮಕುಮಾರ್, ಸುಂಟಿಕೊಪ್ಪ.