ಮಡಿಕೇರಿ, ಜೂ. 4: ಕಳೆದ ನಾಲ್ಕೂವರೆ ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಇಲ್ಲಿನ ಕೊಡಗು ಪೊಲೀಸ್ ಕೇಂದ್ರ ಕಚೇರಿಯನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಮರು ನಿರ್ಮಾಣಗೊಳಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾಪ್ರಧಾನರಾಗಿರುವ ನೀಲಮಣಿ ಎನ್. ರಾಜು ಹಸಿರು ನಿಶಾನೆ ತೋರಿದ್ದಾರೆ. ಎರಡು ದಿನಗಳ ಕೊಡಗು ಪ್ರವಾಸ ಹಮ್ಮಿಕೊಂಡಿದ್ದ ಅವರು, ಪೊಲೀಸ್ ಕೇಂದ್ರ ಕಚೇರಿಯ ಖುದ್ದು ಪರಿಶೀಲನೆ ಸಂದರ್ಭ ಹಳೆಯ ಕಟ್ಟಡ ತೆರವುಗೊಳಿಸಿ ಸುಸಜ್ಜಿತ ಪೊಲೀಸ್ ಭವನ ನಿರ್ಮಾಣಕ್ಕೆ ಸಲಹೆ ನೀಡಿದ್ದಾರೆ.ಕೊಡಗು ಪೊಲೀಸ್ ಕೇಂದ್ರ ಕಚೇರಿಯು ನಾಲ್ಕೂವರೆ ದಶಕಗಳ ಹಿಂದೆ ನಿರ್ಮಾಣ ಗೊಳ್ಳುವದ ರೊಂದಿಗೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಈ ಕಟ್ಟಡದ ಉದ್ಘಾಟನೆ ಯನ್ನು ನೆರವೇರಿಸಿದ್ದರು. ಆ ಬಳಿಕ 2000ನೇ ಇಸವಿಯಲ್ಲಿ ಅಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಸರಕಾರದ ಗಮನ ಸೆಳೆದು ಈ ಕಟ್ಟಡದ ದುರಸ್ಥಿಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಂ. ನಾಣಯ್ಯ ಮುಖಾಂತರ ನವೀಕೃತ ಕಟ್ಟಡ ಉದ್ಘಾಟನೆ ಮಾಡಿಸಿದ್ದರು.

ಆ ಬಳಿಕ ಜಿಲ್ಲಾ ಪೊಲೀಸ್ ಇಲಾಖೆಯಿಂದ ಠಾಣಾಧಿಕಾರಿಗಳು ಹಾಗೂ ವೃತ್ತ ನಿರೀಕ್ಷಕರು, ಉಪ ಪೊಲೀಸ್ ಅಧೀಕ್ಷಕರುಗಳನ್ನು ಒಳಗೊಂಡಂತೆ ಆಗಿಂದಾಗ್ಗೆ ಸಭೆ ಇತ್ಯಾದಿ ನಡೆಸುವದು, ಮೇಲಧಿಕಾರಿಗಳ ಆಗಮನ ಸಂದರ್ಭ ಅಪರಾಧ ಪರಿಶೀಲನಾ ಸಭೆ ಆಯೋಜಿಸುವದು ಇತ್ಯಾದಿ ವೇಳೆ ಸ್ಥಳ ಅಭಾವದ ಕೊರತೆ ಮನಗಂಡು, ಈಗಿನ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಇಲಾಖೆಯ ವರಿಷ್ಠರಿಗೆ ಗಮನ ಸೆಳೆದಿದ್ದರು.

ಈ ವೇಳೆ ಕೊಡಗಿನಲ್ಲಿ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಎಡಿಜಿಪಿ ರಾಮಚಂದ್ರರಾವ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನೂತನ ಪೊಲೀಸ್ ಕೇಂದ್ರ ಭವನದ ನಿರ್ಮಾಣಕ್ಕೆ ಒಲವು ವ್ಯಕ್ತಪಡಿಸಿ ಇಲಾಖೆಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದರು. ಆ ಮೇರೆಗೆ ನಿನ್ನೆ ಕೊಡಗಿಗೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರಾಗಿರುವ ನೀಲಮಣಿ ರಾಜು, ಈ ಸಂಬಂಧ ಎಸ್‍ಪಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿ ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಸುಸಜ್ಜಿತ ಪೊಲೀಸ್ ಭವನ ನಿರ್ಮಾಣಕ್ಕೆ ಸಮ್ಮತಿಸಿದ್ದಾರೆ.

(ಮೊದಲ ಪುಟದಿಂದ) ಅಲ್ಲದೆ ಈಗಿನ ಕಿಷ್ಕಿಂಧೆಯಾಗಿರುವ ಕಟ್ಟಡ ತೆರವುಗೊಳಿಸಿ ವಿಶಾಲ ಕಟ್ಟಡದೊಂದಿಗೆ ಸಮರ್ಪಕ ಮೂಲಭೂತ ಸೌಕರ್ಯಗಳಿಂದ ಕೂಡಿದ್ದ ಕಟ್ಟಡ ನಿರ್ಮಿಸುವಂತೆ ಸಲಹೆ ನೀಡಿರುವ ಅವರು, ಸರಕಾರದಿಂದ ಅಗತ್ಯ ಆರ್ಥಿಕ ನೆರವು ಕಲ್ಪಿಸಿಕೊಡುವದಾಗಿ ಆಶ್ವಾಸನೆ ನೀಡಿದ್ದಾರೆ.

ರೂ. 9 ಕೋಟಿ ಯೋಜನೆ : ನೂತನ ಪೊಲೀಸ್ ಕೇಂದ್ರ ಭವನ ಕಟ್ಟಡ ನಿರ್ಮಾಣ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಭವಿಷ್ಯದಲ್ಲಿ ಯಾವದೇ ಕೊರತೆಯಾಗದಂತೆ ರೂ. 9 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿ ನೀಲ ನಕಾಶೆ ತಯಾರಿಸಲು ಡಿಜಿ ಅವರು ಸಮ್ಮತಿಸಿರುವದಾಗಿ ತಿಳಿಸಿದರು.

ಈಗಿನ ಶಿಥಿಲ ಕಟ್ಟಡ ತೆರವುಗೊಳಿಸಿ ಸುಸಜ್ಜಿತವಾದ ವಿಶಾಲ ಕಚೇರಿಯೊಂದಿಗೆ, ಇಲಾಖೆಯ ದೈನಂದಿನ ಕರ್ತವ್ಯಗಳಿಗೆ ಅನುಕೂಲವಾಗುವಂತೆ ವಿಸ್ತ್ರತ ಸಭಾಂಗಣ, ವಿವಿಧ ಕೆಲಸ ನಿರ್ವಹಿಸಲು ಸೂಕ್ತ ಕೊಠಡಿಗಳು, ಜಿಲ್ಲಾ ಸಶಸ್ತ್ರ ಪಡೆ, ಕಂಟ್ರೋಲ್ ರೂಂ, ಶ್ವಾನದಳ ಘಟಕ, ಉಪಹಾರ ಮಂದಿರ, ಭದ್ರತಾ ಕೊಠಡಿ ಮುಂತಾದ ಸೌಲಭ್ಯದಿಂದ ಕೂಡಿರುವಂತೆ ಭವಿಷ್ಯದ ಕಟ್ಟಡ ರೂಪುಗೊಳ್ಳಲಿದೆ ಎಂದರು.

ಪ್ರಸಕ್ತ ಜಿಲ್ಲೆಯಲ್ಲಿ ನೂತನ ಜಿಲ್ಲಾಡಳಿತ ಭವನ ಸೇರಿದಂತೆ ಜಿ.ಪಂ. ಕಟ್ಟಡ, ನ್ಯಾಯಾಲಯ ಸಮುಚ್ಚಯ, ತಾ.ಪಂ. ಕಚೇರಿಗಳು ಎಲ್ಲವೂ ಹೊಸತಾಗಿ ನಿರ್ಮಾಣ ಗೊಳ್ಳುತ್ತಿರುವಾಗ, ಪೊಲೀಸ್ ಇಲಾಖೆಯ ಸಾಮಥ್ರ್ಯಕ್ಕೆ ತಕ್ಕದಾದ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಎಸ್‍ಪಿ ಹರ್ಷ ವ್ಯಕ್ತಪಡಿಸಿದರು.

ಈ ಸಂಬಂಧ ಕಟ್ಟಡದ ನೀಲ ನಕಾಶೆ ಇತ್ಯಾದಿಯನ್ನು ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಮಂಡಳಿಯು ಸಿದ್ಧಗೊಳಿಸಲಿದ್ದು, ತಮ್ಮ ಕರ್ತವ್ಯದ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಕೊಡಗು ಜಿಲ್ಲೆಯಲ್ಲಿ ಒಂದು ಶಾಶ್ವತ ವ್ಯವಸ್ಥೆ ರೂಪಿಸುವ ಕನಸು ಹೊಂದಿರುವದಾಗಿ ಮಾರ್ನುಡಿದರು. ಪ್ರಸಕ್ತ ಪೊಲೀಸ್ ಮಹಾ ನಿರ್ದೇಶಕರು ಜಿಲ್ಲೆಯ ಕೇಂದ್ರ ಕಚೇರಿಯ ಮೂಲಭೂತ ಸೌಕರ್ಯದ ಕೊರತೆ ಗಮನಿಸಿದ್ದು, ಶೀಘ್ರವಾಗಿ ನೂತನ ಕಟ್ಟಡ ಕಾಮಗಾರಿಗೆ ಒಲವು ಹೊಂದಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ವಿವರಿಸಿದರು.

ಆ ದಿಸೆಯಲ್ಲಿ ಕೊಡಗು ಪೊಲೀಸ್ ಇಲಾಖೆ ಸಮರ್ಪಕ ಕಾರ್ಯನಿರ್ವಹಣೆಗೆ ಪೂರಕ ವ್ಯವಸ್ಥೆಯನ್ನು ನೂತನ ಕಟ್ಟಡದಲ್ಲಿ ಸಮಗ್ರವಾಗಿ ಕಲ್ಪಿಸಲು ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ಅವರು ‘ಶಕ್ತಿ’ ಸಂದರ್ಶನದಲ್ಲಿ ಸುಳಿವು ನೀಡಿದರು.