ಮಡಿಕೇರಿ, ಜೂ.4 : ನಿವೃತ್ತ ಪೊಲೀಸ್ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾಗಿರುವ ಆರೋಗ್ಯ ಭಾಗ್ಯ ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎ.ಅಪ್ಪಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯೋಜನೆಗೆ ಸರಕಾರದಿಂದ 50ಕೋಟಿ ರೂ.ಗಳನ್ನು ಮೀಸಲಿಡುವಂತೆ ಬೇಡಿಕೆ ಸಲ್ಲಿಸಲಾಗಿತ್ತಾದರೂ, ಸರಕಾರ 20 ಕೋಟಿ ರೂ. ನೀಡುವ ಭರವಸೆ ನೀಡಿತ್ತು. ಆದರೆ ಇದೀಗ 10 ಕೋಟಿ ರೂ.ಗಳನ್ನು ಒದಗಿಸಿರುವ ಸರಕಾರ ರಾಜ್ಯದ ವಿವಿಧ ಘಟಕಗಳಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಲ್ಲಿರುವ 9 ಕೋಟಿ ರೂ.ಗಳನ್ನು ಬಳಸಿಕೊಳ್ಳುವಂತೆ ಮತ್ತು ಯೋಜನೆಯ ಫಲಾನುಭವಿಗಳಿಂದ ಮಾಸಿಕ ವಂತಿಗೆ ಸಂಗ್ರಹದ ಮೂಲಕ ಅನುದಾನ ಕ್ರೋಢೀಕರಿಸುವಂತೆ ತೀರ್ಮಾನಿಸಿದೆ ಎಂದು ಹೇಳಿದರು.
ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರಿಗೆ ಮಾತ್ರ ಈ ಯೋಜನೆಯು ಅನ್ವಯವಾಗಲಿದ್ದು, ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ನಿವೃತ್ತ ಪೊಲೀಸರ ಪತಿ ಅಥವಾ ಪತ್ನಿಗೆ ಮಾತ್ರ ಯೋಜನೆಯ ಸವಲತ್ತುಗಳು ದೊರಕಲಿವೆ. ಯೋಜನೆಯಡಿ ಸದಸ್ಯರಾದವರಿಗೆ ವಾರ್ಷಿಕ ಗರಿಷ್ಠ ಒಂದು ಲಕ್ಷ ಮತ್ತು ವಿಶೇಷ ಹಾಗೂ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗುವವರಿಗೆ ವಾರ್ಷಿಕ 2 ಲಕ್ಷ ರೂ.ಗಳವರೆಗೆ ನಿಗದಿಪಡಿಸಲಾಗಿದ್ದು, ಆಯಾ ಜಿಲ್ಲೆಗಳಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳನ್ನು ಗುರುತಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಧಿಕಾರ ನೀಡಲಾಗಿದೆ ಎಂದರು.
ಯೋಜನೆಯ ಸದಸ್ಯರಾಗುವವರು ಮೂರು ತಿಂಗಳ ವಂತಿಗೆಯನ್ನು ಬೆಂಗಳೂರಿನ ಲ್ಯಾವೆಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದ್ದು, ಸದಸ್ಯರಿಗೆ ಬೇಕಾದ ಅರ್ಜಿ ಫಾರಂಗಳನ್ನು ಹಾಗೂ ಇತರ ಮಾಹಿತಿಯನ್ನು ಸಂಘದ ಜಿಲ್ಲಾ ಕಚೇರಿಯಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448503890ರಲ್ಲಿ ಸಂಪರ್ಕಿಸಬಹುದೆಂದು ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಸುಮಾರು 786 ಮಂದಿ ಸದಸ್ಯರಿದ್ದಾರೆ. ಇವರೆಲ್ಲರೂ ಈ ಯೋಜನೆಯ ಸದಸ್ಯತ್ವ ಪಡೆಯಲು ಅರ್ಹರಾಗಿದ್ದು, ಯೋಜನೆ ಪ್ರಾರಂಭವಾದ ನಂತರ ನಿವೃತ್ತರಾದವರು ಕೂಡಾ ಮೂರು ತಿಂಗಳ ವಂತಿಗೆಯನ್ನು ಪಾವತಿಸಿ ಸದಸ್ಯರಾಗಬಹುದಾಗಿದ್ದು, ಯಾರಾದರೂ ಮೂರು ತಿಂಗಳ ವಂತಿಗೆಯನ್ನು ಪಾವತಿಸಲು ತಪ್ಪಿದಲ್ಲಿ ಅಂತಹವರ ಸದಸ್ಯತ್ವ ರದ್ದಾಗುವದು ಮಾತ್ರವಲ್ಲದೆ ಒಮ್ಮೆ ರದ್ದಾದ ಸದಸ್ಯತ್ವನ್ನು ಮತ್ತೊಮ್ಮೆ ಪಡೆಯಲು ಅವಕಾಶವಿರುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ.ಪರಶಿವ, ಕಾರ್ಯದರ್ಶಿ ಅಚ್ಚುತನ್ ನಾಯರ್, ಖಜಾಂಚಿ ಬಿ.ಎಂ. ಭೀಮಯ್ಯ, ನಿರ್ದೇಶಕ ಎಂ.ಕೆ. ಮಾದಯ್ಯ ಹಾಜರಿದ್ದರು.