“ಚುನಾವಣೆ ಎಂಬ ನಾಟಕ ರಂಗದಿಂದ ಜನಾಂಗದ ಸಂಘಟನೆಗಳು ಸಮಾಜಗಳು, ಅದರ ಪ್ರಮುಖರು ದೂರವಿರುವುದರಿಂದ ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ಒಳಿತು”. ಕೊಡಗಿನ ರಾಜಕೀಯವೆಂಬ ಚದುರಂಗದಾಟ ಚುನಾವಣೆಯಲ್ಲಿ ಅಂತ್ಯ ಕಂಡಿದೆ. ರಾಜಕೀಯವೆಂಬುದು ಒಂದು ಸೈದ್ಧಾಂತಿಕ ಸಿದ್ಧಾಂತದ ಮೇಲೆ ನಡೆಯಬೇಕು. ಆದರೆ ಇಂದಿನ ರಾಜಕೀಯ ಚದುರಂಗದಾಟ ನಡೆಯುವುದೇ ಜಾತಿಯಾಧಾರಿತ, ಜಾತಿ ಪ್ರೇರಿತ ಮತ್ತು ಜಾತಿಯ ಹಿನ್ನೆಲೆಯಲ್ಲಿ ನಡೆಯುವುದು ಒಂದು ದುರದೃಷ್ಟಕರ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವದ ಅರ್ಥವನ್ನು ಕೊನೆಗಾಣಿಸುತ್ತದೆ. ದೇಶದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಚುನಾವಣೆಗಳು ಸೈದ್ಧಾಂತಿಕ ನಿಲುವಿನಲ್ಲಿ ನಡೆಯದೆ ಜಾತಿಯಾಧಾರದಲ್ಲಿ ನಡೆಯುವುದು ಮನುಕುಲದ ದುರಂತಗಳಲ್ಲೊಂದು. ನಾಗರಿಕ ಪ್ರಪಂಚದಲ್ಲಿ ಮುಂದಿನ ಪೀಳಿಗೆಗೆ ನಾವು ಏನನ್ನು ಬೋಧಿಸುತ್ತೇವೆಂಬದು ನಮ್ಮವರಿಗೆ ಅರ್ಥವಾಗದೇ ಇರುವುದು ದುರದೃಷ್ಟಕರ. ಮೊದಲು ದೇಶಕ್ಕಾಗಿ ಹೋರಾಡು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡು ಎಂಬ ಘೋಷಣೆಯೊಡನೆ ದೇಶಾಭಿಮಾನ ಬೆಳೆಸುತ್ತಿದ್ದರು. ನಂತರ ರಾಜ್ಯಗಳಿಗೆ ಆ ಚಿಂತನೆಗಳು ಸಂಕುಚಿತಗೊಂಡಿತು. ಇಂದು ರಾಜ್ಯ ರಾಜ್ಯಗಳ ನಡುವೆ ನಡೆಯುವ ಭಾಷೆ, ಗಡಿ, ನೀರಿನ (ಕುಡಿಯುವ ನೀರು ಸೇರಿದಂತೆ) ಸಮಸ್ಯೆಗಳು ದೇಶಾಭಿಮಾನ ಬಿಟ್ಟು ರಾಜ್ಯಾಭಿಮಾನಕ್ಕೆ ದಾರಿಯಾಯಿತು. ನಾವು ಸಂಕುಚಿತಗೊಂಡಿದ್ದರ ಪರಿಣಾಮವಾಗಿ ರಾಜ್ಯಗಳ ನಡುವೆ ಶೀತಲ ಸಮರ ಆರಂಭವಾಯಿತು. ಸ್ವಾತಂತ್ರ್ಯ ನಂತರ ದೇಶದಲ್ಲಿ ರಾಷ್ಟ್ರ ನಾಯಕರ ಆದರ್ಶಗಳನ್ನು ಪರಿಪಾಲಿಸುತ್ತಿದ್ದರು. ನಂತರದ ದಿನಗಳಲ್ಲಿ ಅದು ಜನಾಂಗಗಳ ನಾಯಕರ ಆದರ್ಶಗಳನ್ನು ಆ ಜನಾಂಗದ ಜನರೇ ಪಾಲಿಸುವಂತಾಗಿದೆ.

ಇನ್ನು ಚುನಾವಣಾ ರಾಜಕೀಯಕ್ಕೆ ಬರೋಣ. ಚುನಾವಣೆ ಬಂತೆಂದರೆ ಜಾತಿವಾರು ಲೆಕ್ಕಾಚಾರ ಆರಂಭವಾಗುತ್ತದೆ. ನಮ್ಮ ಜಾತಿಯವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಎಲ್ಲಾ ಪಕ್ಷಗಳಿಗಳಿಗೆ ಜನಾಂಗದ ಸಂಘಟನೆಗಳ ಪ್ರಮುಖರು ಬಹಿರಂಗವಾಗಿ ಒತ್ತಾಯವನ್ನು ಪ್ರಾರಂಭಿಸುತ್ತಾರೆ. ನಮ್ಮ ಜನಾಂಗದ ವ್ಯಕ್ತಿಯೇ ಪ್ರತಿನಿಧಿಯಾದರೆ ಜನಾಂಗ ಉದ್ದಾರವಾಗುತ್ತದೆಂಬ ಅರ್ಥ ಕಲ್ಪಿಸುತ್ತಾರೆ. ಇಂತಹ ವ್ಯವಸ್ಥೆಗಳಿಂದ ಸಮೃದ್ಧ ಸಮಾಜದ ನಿರ್ಮಾಣ ಸಾಧ್ಯವೆ ? ಇಲ್ಲಿ ಒಂದು ಪ್ರಶ್ನೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಉತ್ತಮ ಸದೃಢ ಸಮಾಜದ ನಿರ್ಮಾಣಕ್ಕೆ ದಾರಿಯಾಗಬೇಕಾದ ಸಮಾಜದ ಸಂಘಟನೆಗಳು, ಚುನಾವಣೆ ಬಂತೆಂದರೆ ರಾಜಕೀಯ ಕ್ಷೇತ್ರಕ್ಕೆ ಕೈಯಾಡಿಸುವುದು ಎಷ್ಟು ಸಮಂಜಸ ? ಸಮಾಜದ ದೃಷ್ಟಿಯಿಂದ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವುದು ಒಳ್ಳೆಯ ಬೆಳವಣಿಗೆ. ಒಬ್ಬ ಚುನಾಯಿತ ಪ್ರತಿನಿಧಿಯಾದವರು ಒಂದು ಪಕ್ಷದ ಅಥವಾ ಒಂದು ವರ್ಗದ ಪ್ರತಿನಿಧಿಯಲ್ಲ. ಈಗ ಚುನಾವಣಾ ಪ್ರಕ್ರಿಯೆಯು ಜಾತಿಯಾಧಾರಿತವಾಗಿ ನಡೆಯುವುದು ದುರದೃಷ್ಟಕರ. ಕೊಡಗಿನಲ್ಲಿಯೂ ಕೂಡ ಇಂತಹ ಬೆಳವಣಿಗೆಗಳು ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಈಗ ಅದು ಪ್ರಸಾರ ಮಾಧ್ಯಮದಿಂದಾಗಿ ವೈಭವೀಕರಣಗೊಳ್ಳುತ್ತಿದೆ. ಚುನಾವಣೆಗೆ ಮೊದಲು ಹಾಗೂ ಚುನಾವಣೆಯ ನಂತರ ಸ್ನೇಹಮಯಿ ಜೀವನ ನಡೆಸುವ ಜನ ಚುನಾವಣೆಯಲ್ಲಿ ಮಾತ್ರ ಜಾತಿವಾದವನ್ನು ವೈಭವೀಕರಿಸಿಕೊಳ್ಳುತ್ತಾರೆ.

ಪ್ರತಿಯೊಬ್ಬರಿಗೆ ಜಾತಿ ಅಭಿಮಾನ ಮುಖ್ಯ. ನಾವು ಈ ಸಮಾಜದಲ್ಲಿ ಶಿಸ್ತಿನಿಂದ ಬದುಕಲು ಕೆಲವು ಶಿಷ್ಟಾಚಾರದಡಿಯಲ್ಲಿ ಬದುಕನ್ನು ರೂಪಿಸಲು ಜಾತಿ ವ್ಯವಸ್ಥೆ, ಸಂಪ್ರದಾಯಗಳು ಮುಖ್ಯ. ಆದರೆ ಅದನ್ನು ರಾಜಕೀಯದಲ್ಲಿ ಬೆರೆಸಿ ಬೀದಿಗೇಕೆ ತರಬೇಕೆಂಬುದು ಯಕ್ಷ ಪ್ರಶ್ನೆ. ರಾಜಕೀಯ ಬೇರೆ ಜಾತಿ ವ್ಯವಸ್ಥೆ ಬೇರೆ ಎಂಬುದನ್ನು ನಾವಿನ್ನು ಅರ್ಥ ಮಾಡಿಕೊಳ್ಳಲಿಲ್ಲ. ಚುನಾವಣೆ ಬಂತೆಂದರೆ ಆರೋಪ ಪ್ರತ್ಯಾರೋಪ ಸರ್ವೇ ಸಾಮಾನ್ಯ. ಆದರೆ ಜಾತಿಯನ್ನು ಮುಂದಿಟ್ಟುಕೊಂಡು ವ್ಯಕ್ತಿಯೊಬ್ಬರ ತೇಜೋವಧೆ ಮಾಡುವುದು ಎಷ್ಟು ಸಮಂಜಸ ಎಂಬ ಚರ್ಚೆ ಸಮಾಜದಲ್ಲಿ ಮುಖ್ಯ. ಈ ವಿಷಯ ಏಕೆಂದರೆ ಕೊಡಗಿನ 2 ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಜಾತಿಯಾಧಾರಿತ ತೇಜೋವಧೆಗಳು, ವೈಯಕ್ತಿಕ ನಿಂದನೆಗಳು ಕೊಡಗಿನ ಸಂಸ್ಕøತಿಗೆ ಕಳಂಕ ತರುವಂತದ್ದು.

ವೀರರ ನಾಡು ಎಂಬ ನಾಣ್ಣುಡಿ ಹೊಂದಿರುವ ನಮಗೆ ಶೋಭೆಯಲ್ಲ. ನಾನು ಇಲ್ಲಿ ಯಾರ ಪರವೂ ಅಲ್ಲ. ಯಾರ ವಿರೋಧವೂ ಅಲ್ಲ. ಕೊಡಗಿನಲ್ಲಿ ಇಂತಹ ನಡವಳಿಕೆ ಮುಖ್ಯವೇ ಎಂಬುದು ಪ್ರಶ್ನೆ. ಕೊಡಗು ದೇಶ ಕಂಡ ಮಹಾನ್ ದಂಡ ನಾಯಕರನ್ನು ಸೇರಿ ರಕ್ಷಣಾ ಇಲಾಖೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಜಕೀಯ ಕ್ಷೇತ್ರದಲ್ಲಿ ನಮ್ಮ ರಾಜಕಾರಣಿಗಳು ಗೌರವವನ್ನು ಕಾಪಾಡಿಕೊಂಡಿದ್ದಾರೆ. ರಾಜ್ಯಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರÀುಗಳನ್ನು ನೀಡಿದ ಈ ಪುಟ್ಟ ಜಿಲ್ಲೆಯಲ್ಲಿ ಚುನಾವಣೆ ಬಂತೆಂದರೆ ಈ ಹಿಂದಿನಿಂದಲೂ ಕರಪತ್ರಗಳನ್ನು ಹಂಚುವ ಮೂಲಕ ತೇಜೋವಧೆ ಮಾಡುತ್ತಿದ್ದರು. ಈಗ ಸಂದೇಶಗಳ ಮೂಲಕ ವೈಭವೀಕರಣಗೊಳ್ಳುತ್ತಿದೆ. ಒಬ್ಬ ವ್ಯಕ್ತಿಯನ್ನು ಎದುರಿಸಬೇಕೆಂದರೆ ವಿಷಯಾಧಾರಿತವಾಗಿ ಎದುರಿಸಬೇಕೆ ಹೊರತು ಜಾತಿಯಾಧಾರಿತವಾಗಿಯಲ್ಲ. ಜನಾಂಗದ ಸಂಘಟನೆಗಳು, ಸಮಾಜಗಳು ಜನಾಂಗದ ಶೈಕ್ಷಣಿಕ, ಸಾಂಸ್ಕøತಿಕ ಅಭಿವೃದ್ಧಿಗೆ ಪ್ರಯತ್ನಿಸಬೇಕು. ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನೆಗಳ ಕಾರ್ಯದಲ್ಲಿ ರಾಜಕೀಯ ನುಸುಳಿದರೆ ವಿಷಾಯಾಧಾರಿತ ಚಿಂತನೆ ಬದಲು ಪಕ್ಷಾಧಾರಿತ ಚಿಂತನೆಗಳು ಆರಂಭವಾಗುತ್ತದೆ. ಈಗಾಗಲೇ ಜನಾಂಗದ ಸಮಾಜಗಳ ಆಡಳಿತ ಮಂಡಳಿಗಳ ಚುನಾವಣೆಯಲ್ಲಿ ರಾಜಕೀಯ ಕಾಣಿಸಿಕೊಳ್ಳುತ್ತಿದೆ. ರಾಜಕೀಯ ರಹಿತವಾದ ಸಹಕಾರ ಸಂಘಗಳು ಇಂದು ರಾಜಕೀಯ ಪ್ರೇರಿತವಾಗಿದೆ. ಇಂದು ಸಮಾಜ ಒಡೆದ ಕೈಗನ್ನಡಿಯಾಗಿದೆ. ಒಡೆದ ಕನ್ನಡಿಯನ್ನು ಹೇಗೆ ಒಂದುಗೂಡಿಸಲು ಸಾಧ್ಯವಿಲ್ಲವೋ ಹಾಗೆ ಒಡೆದ ಮನಸ್ಸನ್ನು ಒಂದುಗೂಡಿಸುವುದು ಅಸಾಧ್ಯ. ಮುಂದಿನ ದಿನಗಳಲ್ಲಿ ನಾವು ನೆಮ್ಮದಿಯ ಬದುಕನ್ನು ಹಾಗೂ ಸದೃಢ ಬದುಕನ್ನು ಜಾತ್ಯತೀತ ನಿಲುವಿನ ಚಿಂತನೆಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವುದು ಇಂದು ಅತ್ಯವಶ್ಯಕ. ಜಾತಿಯ ವರ್ತುಲವೆಂಬ ರಾಜಕೀಯದಿಂದ ಹೊರ ಬರೋಣ. ನಾಗರಿಕತೆಯ ಸಮಾಜದಲ್ಲಿ ತೇಜೋವಧೆಯ ಸಂದೇಶಗಳು, ಕರಪತ್ರಗಳ ಬದಲು ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಬದುಕನ್ನು ರೂಪಿಸೋಣ.

?ಬಾಳೆಯಡ ಕಿಶನ್ ಪೂವಯ್ಯ,

ವಕೀಲರು ಮತ್ತು ನೋಟರಿ, ಮಡಿಕೇರಿ.