ಗೋಣಿಕೊಪ್ಪ ವರದಿ, ಜೂ. 5: ಯೋಗ ಭಾರತೀಯ ಸಂಸ್ಕøತಿಯ ಪ್ರಮುಖ ಭಾಗವಾಗಿದೆ ಮತ್ತು ಯೋಗಾಭ್ಯಾಸದಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂಬದು ಸಂಶೋಧನೆಗಳಿಂದ ಧೃಡಪಟ್ಟಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಬೋಧ ಸ್ವರೂಪಾನಂದ ಸ್ವಾಮೀಜಿ ತಿಳಿಸಿದರು.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯ ದಲ್ಲಿ ನಡೆಯಲಿರುವ ಉಚಿತ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಔಷದಿಗಳಿಂದ ಗುಣಪಡಿಸಲಾಗದ ಅನೇಕ ರೋಗಗಳಿಗೆ ಯೋಗ ಸೂಕ್ತವಾಗಿದೆ. ಆರೋಗ್ಯವಂತ ಜೀವನ ನಡೆಸಲು ಯೋಗ ಸಹಕಾರಿಯಾಗಿರುವ ಕಾರಣ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿನಿ ಪ್ರತಿಮಾ ಮಾತನಾಡಿ ಬದಲಾದ ಜೀವನ ಶೈಲಿಯಿಂದ ಮನುಷ್ಯ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾನೆ. ರೋಗಗಳಿಂದ ಮುಕ್ತಿ ಪಡೆಯಲು ಯೋಗ ಸಹಕಾರಿಯಾಗಿದೆ ಎಂದರು.
ತರಬೇತಿ ಶಿಬಿರ ಪ್ರತಿದಿನ ಬೆಳಿಗ್ಗೆ 6 ರಿಂದ 7 ರವರೆಗೆ ಹಾಗೂ ಸಂಜೆ 5.30 ಯಿಂದ 6.30 ಗಂಟೆಯ ವರೆಗೆ ನಡೆಯಲಿದೆ. ಅತಿಥಿಯಾಗಿ ಶ್ರೀ ರಾಮಕೃಷ್ಣ ಸೇವಾಶ್ರಮ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಆಸ್ಪತ್ರೆಯ ವೈದ್ಯೆ ಡಾ. ಮರಿಯಾ ಇದ್ದರು.