ಮಡಿಕೇರಿ, ಜೂ. 5: ದೇಶದಲ್ಲಿ ಹತ್ತು ಹಲವಾರು ದಿನಾಚರಣೆಗಳಿರುವಂತೆ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಿಸರ್ಗದತ್ತವಾದ ಪ್ರಕೃತಿಯನ್ನು ಆರಾಧಿಸುವದು, ಉಳಿಸಿ ಬೆಳೆಸುವದು ಈ ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿ ಮೂಡಿಸುವದು ಅರ್ಥಪೂರ್ಣವಾದ ಕಾರ್ಯಕ್ರಮವೇ ಸರಿ...

ಆದರೆ, ರಾಜ್ಯದಲ್ಲಿ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿರುವ ಸಹಜವಾದ ಪ್ರಾಕೃತಿಕ ನೋಟವನ್ನು ಹೊಂದಿರುವ ಗುಡ್ಡಗಾಡು ಪ್ರದೇಶವೂ ಆಗಿರುವ ಕೊಡಗು ಜಿಲ್ಲೆಯಲ್ಲಿಯೂ ಇತ್ತೀಚಿನ ಕೆಲವು ವರ್ಷಗಳಿಂದ ಪ್ರಕೃತಿಯನ್ನು ಉಳಿಸಿ-ಬೆಳೆಸಿ ಎಂಬ ಆಂದೋಲನಗಳು ನಡೆಯುವಂತಾಗಿರುವದು ವಿಪರ್ಯಾಸ.

ಕೊಡಗಿನಲ್ಲಿ ಬದುಕುತ್ತಿರುವ ಎಲ್ಲರಿಗೂ ಪ್ರಕೃತಿಯ ಮಹತ್ವದ ಅರಿವಿದೆ. ಇಲ್ಲಿನವರಿಗೆ ಈ ಬಗ್ಗೆ ಅಷ್ಟಾಗಿ ಹೇಳುವ ಅಗತ್ಯವಿಲ್ಲ. ಬಯಲು ಸೀಮೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಸಹಜ ಪರಿಸರ ಗೋಚರಿಸುತ್ತದೆ. ಅರಣ್ಯ ಪ್ರದೇಶಗಳು, ಬೆಟ್ಟಗುಡ್ಡಗಳು ಕೊಡಗಿನಲ್ಲಿ ಸಾಮಾನ್ಯ. ಇದರೊಂದಿಗೆ ಇಲ್ಲಿನ ನಿವಾಸಿಗಳು ಕೂಡ ಪ್ರಕೃತಿಯನ್ನು ಪೂಜಿಸುವದು ಕೂಡ ವಿಶೇಷ.

ಆದರೂ ವಿಶ್ವ ಪರಿಸರ ದಿನವಾದ ಜೂನ್ 5ನ್ನು ಕೊಡಗಿನ ಜನರು ಇತರೆಡೆಗಳಿಗಿಂತ ಹೆಚ್ಚು ಒತ್ತು ನೀಡಿ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಜಿಲ್ಲಾಡಳಿತದ ಕಾರ್ಯಕ್ರಮ, ಸಭೆ-ಸಮಾರಂಭ, ಜಾಥಾಗಳು ಈ ಬಗ್ಗೆ ಅರಿವು ಮೂಡಿಸ ಬಹುದಾದರೂ ನೈಜ ಕಾಳಜಿ ಅಗತ್ಯ. ಈ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವರ್ಷಂಪ್ರತಿ ಗಿಡ ನೆಡುವದರೊಂದಿಗೆ ಇದನ್ನು ಪೋಷಿಸಿಕೊಂಡು ಬರುತ್ತಾರೆ. ಇದು ಹೆಮ್ಮೆಯ ವಿಚಾರವೂ ಹೌದು.

ಆದರೆ ಇದೇ ಕಾಳಜಿಯ ದುರುಪಯೋಗ ನಡೆಯಬಾರದು ಎಂಬದು ಹಲವರ ಆಶಯವಾಗಿದೆ. ನಿಸರ್ಗದತ್ತವಾಗಿ ಇಲ್ಲಿ ಅರಣ್ಯ ಬೆಳೆಯುವದರಿಂದ ಎಲ್ಲೆಲ್ಲಿ ಗಿಡಗಳನ್ನು ನೆಡಲಾಗಿದೆ, ಎಷ್ಟು ಸಂಖ್ಯೆ ಎಂಬದನ್ನು ನಿಖರವಾಗಿ ಹೇಳಲಾಗದು. ಅರಣ್ಯ ಇಲಾಖೆ ಇದಕ್ಕೆಂದೇ ಅದೆಷ್ಟೋ ಗಿಡಗಳನ್ನು ಬೆಳೆಯುತ್ತದೆ. ಇದಕ್ಕಾಗಿ ಅಪಾರ ವೆಚ್ಚವೂ ತಗಲುತ್ತದೆ. ಇವೆಲ್ಲವೂ ಕಡತಗಳ ದಾಖಲೆಯಲ್ಲಿರುತ್ತದೆ.

ಇಷ್ಟೆಲ್ಲಾ ಇದ್ದರೂ ಇಲ್ಲಿ ಆನೆಗಳಿಗೆ ಆಹಾರವಿಲ್ಲ. ಇತರ ವನ್ಯ ಜೀವಿಗಳಿಗೆ ಅಗತ್ಯ ಪರಿಸರದ ಕೊರತೆ ಎದುರಾಗುತ್ತಿರುವದು ಆತಂಕಕಾರಿಯಾಗಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಇಂದು ನೆಟ್ಟ ಗಿಡಗಳು ಬಿತ್ತಿದ ಬೀಜಗಳು ಸಾರ್ಥಕತೆ ಕಾಣುವಂತಾಗಬೇಕು. ಈ ಬಗ್ಗೆ ಯಾರೂ ಯಾರನ್ನೂ ಅವಲಂಬಿಸದೆ ಸ್ವಯಂ ಪ್ರೇರಿತ ಮುತುವರ್ಜಿ ತೋರಬೇಕಿದೆ. ನೆಟ್ಟ ಗಿಡಗಳು ಬೆಳೆದು ದೊಡ್ಡದಾದಲ್ಲಿ ಕೇವಲ ಕೊಡಗಿಗೆ ಮಾತ್ರವಲ್ಲ. ಇದರ ಉಪಯೋಗ ಇಲ್ಲಿನ ಮುಂದಿನ ಪೀಳಿಗೆಯೊಂದಿಗೆ ಇತರೆಡೆಗೂ ವರದಾನವಾಗಬಲ್ಲುದು...

ಈ ಹಿಂದೊಮ್ಮೆ ಏನಾಗಿತ್ತು...?

2016ರ ಸಂದರ್ಭ ಆಗಿನ ಜಿಲ್ಲಾ ಪಂಚಾಯಿತಿ ಆಡಳಿತದಲ್ಲಿ ಕೊಡಂದೇರ ಬಾಂಡ್ ಗಣಪತಿ ಅವರು ಸಾಮಾಜಿಕ ನ್ಯಾಯ ಸ್ಥಮಿತಿ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅವರು ಸಿಡಿಸಿದ್ದ ‘ಬಾಂಬ್’ವೊಂದು ಆಘಾತಕಾರಿಯಾಗಿತ್ತು. ಅದೇನೆಂದರೆ, ಸಾಮಾಜಿಕ ಅರಣ್ಯ ಇಲಾಖೆ ಪ್ರತಿವರ್ಷ ನಿಗದಿತ ನರ್ಸರಿಗಳಲ್ಲಿ 5 ಲಕ್ಷ ಗಿಡ ಬೆಳೆಯುವದು, ಇದನ್ನು ಅರಣ್ಯ ಇಲಾಖೆಯ ಇನ್ನೊಂದು ವಿಭಾಗ (ರೆಗ್ಯುಲರ್ ಫಾರೆಸ್ಟ್)ದಿಂದ ನೆಡುವದು ಹಾಗೂ ಇದರ ಪೋಷಣೆ ಎಂಬ ಲೆಕ್ಕ ತೋರಲಾಗಿತ್ತು.

ಬಾಂಡ್ ಗಣಪತಿ ಅವರು ಈ ವಿಚಾರವನ್ನು ತಾಳೆ ಹಾಕಿ ಜಿ.ಪಂ. ಸಭೆಯಲ್ಲಿ ಗುಡುಗಿದ್ದರು. ಒಂದು ವರ್ಷಕ್ಕೆ 5 ಲಕ್ಷ ಗಿಡ ಅಂದರೆ ಐದು ವರ್ಷದ ಅವಧಿಯಲ್ಲಿ ಒಟ್ಟು ಕೊಡಗಿನಲ್ಲಿ ನೆಟ್ಟ ಗಿಡಗಳು ಸುಮಾರು 25 ಲಕ್ಷದಷ್ಟಾಗಬೇಕು. ಇದನ್ನು ಎಲ್ಲಿ ನೆಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದರು. ಈ ಸ್ಫೋಟಕ ಮಾಹಿತಿ ಅಲ್ಲೋಲಕಲ್ಲೋಲಕ್ಕೂ ಕಾರಣವಾಗಿತ್ತು. ಇದಕ್ಕೆ ಇಲಾಖೆಯವರು ನೀಡಿದ್ದ ಉತ್ತರದಲ್ಲಿ ಈ ಗಿಡಗಳನ್ನು ನೆಟ್ಟಂತೆ ತೋಡಿದ್ದ ಪ್ರದೇಶ ಬಹುತೇಕ ದಟ್ಟಾರಣ್ಯಗಳು. ಬಾಂಡ್ ಅವರ ಮಾತಿನಲ್ಲಿ ಹೇಳುವಂತಾದರೆ ಇಲ್ಲಿಗೆ ಸೂರ್ಯನ ಕಿರಣಗಳು ಕೂಡ ಬೀಳುವದಿಲ್ಲ.

ಕೊನೆಗೆ ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಯಿತು. ವೀರಾಜಪೇಟೆ ತಾಲೂಕಿಗೆ ಬಾಂಡ್ ಗಣಪತಿ, ಸೋಮವಾರಪೇಟೆ ತಾಲೂಕಿಗೆ ಭಾರತೀಶ್ ಹಾಗೂ ಮಡಿಕೇರಿ ತಾಲೂಕಿನಲ್ಲಿ ನೆಟ್ಟ ಗಿಡಗಳನ್ನು ಎಣಿಸಲು ಅವುಗಳ ಸ್ಥಿತಿಗತಿ ಅರಿಯಲು ಬೀನಾ ಬೊಳ್ಳಮ್ಮ ನೇತೃತ್ವದಲ್ಲಿ ಸಮಿತಿ ರಚಿಸಲು ಜಿ.ಪಂ. ಸಭೆ ನಿರ್ಧರಿಸಿತ್ತು. ಆದರೆ ಜಿ.ಪಂ.ನ ಅಧಿಕಾರಾವಧಿ ಮುಕ್ತಾಯಕ್ಕೆ ಕೆಲವೇ ಸಮಯ ಬಾಕಿ ಇದ್ದು ಅವಧಿ ಮುಗಿದು ಹೋದ ಕಾರಣ ಈ ತನಿಖೆಯೂ ಕಾಡುಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು...

ಬಹುಶಃ ಈಗಲೂ ಈ ಯೋಜನೆಗಳು ಮುಂದುವರಿಯುತ್ತಿವೆ. ಪರಿಸರದ ಹೆಸರಿನಲ್ಲಿ ಕೊಳ್ಳೆಹೊಡೆಯುವ ಕೆಲಸ ನಡೆಯದಿರಲಿ. ಪರಿಸರ ಪೋಷಣೆ ಅರ್ಥಗರ್ಭಿತವಾಗಿರಲಿ ಎಂಬದು ನೈಜ ಪ್ರಕೃತಿ ಪ್ರಿಯರ ಆಶಯವಾಗಿದೆ.

-ಶಶಿ ಸೋಮಯ್ಯ