ಕೂಡಿಗೆ, ಜೂ. 4 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡಿಗೆ ಕೊಪ್ಪಲು, ಹೆಗ್ಡಳ್ಳಿ, ಕೋಟೆ ವ್ಯಾಪ್ತಿಯ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್‍ರಾಯ ಮತ್ತು ಗ್ರಾಮಗಳ ಸೇವಾ ಸಮಿತಿಗಳಿಂದ ಗ್ರಾಮ ದೇವತೆ ದಂಡಿನಮ್ಮ ತಾಯಿಯ ವಾರ್ಷಿಕ ಹಬ್ಬದ ಅಂಗವಾಗಿ ಮುತ್ತತ್‍ರಾಯ ದೇವರ ಪೂಜೋತ್ಸವ ಕಾರ್ಯ ಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾವೇರಿಯ ನದಿಯ ಸಮೀಪವಿರುವ ಮುತ್ತತ್‍ರಾಯ ದೇವರ ಗುಡಿಯಿಂದ ದೇವರ ವಿಗ್ರಹವನ್ನು ಕಾವೇರಿ ನದಿಯಲ್ಲಿ ಪೂಜಿಸಿ ಹರಿಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಲಾಯಿತು. ಬೆಳಗ್ಗಿನ ಜಾವ ದೇವರಿಗೆ ಬಲಿ ಪೂಜೆ ಕಾರ್ಯಕ್ರಮ ನಡೆಯಿತು. ಹರಕೆ ಹೊತ್ತ ಭಕ್ತಾಧಿಗಳು ತಮ್ಮ ಹರಕೆಯನ್ನು ದೇವರಿಗೆ ಸಮರ್ಪಿಸಿದರು. ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನೆರವೇರಿತು.

ಪೂಜೋತ್ಸವದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು.

ದೇವಾಲಯ ಸಮಿತಿಯ ಕೆ.ಟಿ.ಕೃಷ್ಣ, ಕಾರ್ಯದರ್ಶಿ ಕೆ.ಎನ್.ಮಂಜುನಾಥ್, ಉಪಾಧ್ಯಕ್ಷ ಮಲ್ಲೇಶ್, ಸಹಕಾರ್ಯದರ್ಶಿ ಕೆ.ಎಂ. ಹರೀಶ್, ಸಲಹೆಗಾರರಾದ ಕೆ.ಎಸ್. ಚಂದ್ರಶೇಖರ್, ಕೆ.ಕೆ. ಸೋಮಶೇಖರ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳು ಹಾಗೂ ಗ್ರಾಮದ ಹಿರಿಯ ಮುಖಂಡರು, ಸುತ್ತಮುತ್ತಲ ಭಕ್ತಾಧಿಗಳು ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.