ಶನಿವಾರಸಂತೆ, ಜೂ. 4: ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದರೂ, ಪಟ್ಟಣದಲ್ಲಿ ಹಾಗೂ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಬ್ಯಾಗ್ ಬಳಕೆ ಹಾಗೂ ಮಾರಾಟ ಮಾಡುತ್ತಿದ್ದ ಕಾರಣ ಗ್ರಾ.ಪಂ. ವತಿಯಿಂದ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳಿಗೆ ದಂಡ ವಿಧಿಸಿ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

15 ದಿನಗಳ ಹಿಂದೆ ಗ್ರಾ.ಪಂ. ವತಿಯಿಂದ ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡದಂತೆ ನಿಷೇಧಿಸಿ ಮನವಿ ಮಾಡಿ, 15 ದಿನಗಳ ಗಡುವು ನೀಡಲಾಗಿತ್ತು. ತಪ್ಪಿದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು.

ಪಟ್ಟಣದಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿ ಹಾಗೂ ಪೊಲೀಸ್ ಠಾಣೆ ಪಿಎಸ್‍ಐ ಎನ್. ಆನಂದ್ ಮತ್ತು ಸಿಬ್ಬಂದಿ ಜಂಟಿ ಯಾಗಿ ಕಾರ್ಯಾಚರಣೆ ನಡೆಸಿದರು.

ಮಾರುಕಟ್ಟೆಯಲ್ಲಿ ವಿವಿಧ ಮಳಿಗೆಗಳ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಗ್ರಾಹಕರಿಗೆ ಪ್ಲಾಸ್ಟಿಕ್ ಬ್ಯಾಗ್‍ಗಳಲ್ಲಿ ವಸ್ತುಗಳನ್ನು ತುಂಬಿಸಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಕಾರ್ಯಾಚರಣೆ ತಂಡ ವ್ಯಾಪಾರಿಗಳಿಗೆ ರೂ. 200-500 ವರೆಗೆ ದಂಡ ವಿಧಿಸಿ, ಅವರಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ವಶಪಡಿಸಿ ಕೊಂಡರು. ನಂತರ ತಂಡದವರು ಪಟ್ಟಣದ ವಿವಿಧ ಅಂಗಡಿ, ಹೊಟೇಲ್, ಕ್ಯಾಂಟೀನ್, ಬೇಕರಿ, ದಿನಸಿ ಅಂಗಡಿ, ಪಾನಿಪೂರಿ ಅಂಗಡಿ, ಹಣ್ಣುಗಳ ಅಂಗಡಿಗಳಿಗೂ ಧಾಳಿ ನಡೆಸಿ ಪ್ಲಾಸ್ಟಿಕ್ ಬಳಸುತ್ತಿದ್ದ ವ್ಯಾಪಾರಿಗಳಿಗೂ ದಂಡ ವಿಧಿಸಿದರು. ವ್ಯಾಪಾರಿಗಳು ಮತ್ತೆ ಬಳಕೆ ಮಾಡುವದು ಕಂಡುಬಂದಲ್ಲಿ ರೂ. 2 ಸಾವಿರದಿಂದ 5 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.