ಹಕ್ಕುಪತ್ರ ಒದಗಿಸಿ

ಮಾನ್ಯರೆ, ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿರುವ 165/3 ರ ಸರಕಾರಿ ಜಾಗದಲ್ಲಿ ಸುಮಾರು 20 ಬಡ ಕುಟುಂಬಗಳು ಕಳೆದ 10 ವರ್ಷಗಳಿಂದ ವಾಸ ಮಾಡಿಕೊಂಡಿರುತ್ತೇವೆ. 10 ವರ್ಷದಿಂದ 2 ಚುನಾವಣೆಗಳು ನಡೆದು ಈ ಬಾರಿಯ ಚುನಾವಣೆ ಮೂರನೆಯದಾಗಿರುತ್ತದೆ. ಶಾಸಕರಾದ ಅಪ್ಪಚ್ಚು ರಂಜನ್ ಅವರನ್ನು ಮೂರು ಬಾರಿಯೂ ನಾವು ಗೆಲ್ಲಿಸಿರುತ್ತೇವೆ. ಮಾನ್ಯ ಶಾಸಕರು ಕೊಡಗಿನ ಉಸ್ತುವಾರಿ ಹಾಗೂ ಕ್ರೀಡಾ ಸಚಿವರಾಗಿ ಹಾಗೆಯೇ ಅಕ್ರಮ-ಸಕ್ರಮದ ಅಧ್ಯಕ್ಷರೂ ಆಗಿದ್ದರು. ನಮ್ಮ ಮನವಿಯನ್ನು ಹಲವು ಬಾರಿ ಸಲ್ಲಿಸಿ ಅವರು ತಿಳಿಸಿದಂತೆ ಅಕ್ರಮ-ಸಕ್ರಮ (92ಸಿ)ಕ್ಕೆ ಅರ್ಜಿಯನ್ನೂ ಹಾಕಿದ್ದೆವು. 94ಸಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ಅರ್ಜಿಯನ್ನು ಅಂದು ಪರಿಗಣಿಸಲಿಲ್ಲ. ಆಮೇಲೆ ನಗರಕ್ಕೆ 94ಸಿಸಿ ಅರ್ಜಿಯನ್ನು ಹಾಕಲು ಹೇಳಿದ ಪ್ರಕಾರ ಅದನ್ನು ಸಲ್ಲಿಸಿದಾಗಲೂ ಸಹ ಪರಿಗಣಿಸದೇ ನಾಡಕಚೇರಿಯವರು ಹಲವಾರು ಕಾರಣಗಳನ್ನು ಹೇಳುತ್ತಿದ್ದಾರೆ. ಇಲ್ಲಿನ ನಮ್ಮ ಮಕ್ಕಳು ಎಲ್.ಕೆ.ಜಿ.ಯಿಂದ ಪದವಿಯವರೆಗೆ ಓದುತ್ತಾ ಇದ್ದಾರೆ. ಅವರಿಗೆ ಓದಲು ಯಾವದೇ ಮೂಲಭೂತ ಸೌಕರ್ಯಗಳು ಇರುವದಿಲ್ಲ.

ಇದೇ ಜಾಗ 165/3 ರಲ್ಲಿ 13 ಜನರಿಗೆ ಈಗಾಗಲೇ ಆರ್.ಟಿ.ಸಿ.ಯಲ್ಲಿ ಹೆಸರು ನೋಂದಣಿಯಾಗಿದೆ. ಇದೇ ಸರಕಾರಿ ಜಾಗದಲ್ಲಿ ವಾಸವಿರುವ ನಮ್ಮನ್ನು ಇಲ್ಲಿಂದ ತೆರವುಗೊಳಿಸಿ ಇದೇ ಜಾಗದಲ್ಲಿ ಅಪಾರ್ಟ್‍ಮೆಂಟ್ (ಬಹುಮಹಡಿ ಕಟ್ಟಡ) ನಿರ್ಮಿಸುತ್ತೇವೆಂದು ಪಟ್ಟಣ ಪಂಚಾಯಿತಿಯವರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮನೆ ಕಟ್ಟಿಕೊಂಡಿರುವ ನಮಗೆ ಅಪಾರ್ಟ್‍ಮೆಂಟ್ ಬೇಡ. ನಾವು ವಾಸವಿರುವ ಜಾಗಕ್ಕೆ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಿ. ಹಾಗೆಯೇ ಈ ಸರಕಾರಿ ಜಾಗದ ಸುತ್ತಮುತ್ತ ಕೆಲವು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗೆಯೇ 165/3 ರಲ್ಲಿ ಮನೆ ಇರುವವರಿಗೆ ಜಾಗವನ್ನು ಕೊಟ್ಟಿರುತ್ತಾರೆ. ಹೀಗಿರುವಾಗ ನಮ್ಮಂತಹ ಬಡ ಜನರನ್ನು ತೆರವುಗೊಳಿಸುವ ಕ್ರಮ ನ್ಯಾಯವೆ? ಈ ಹಿಂದೆ ಶಾಸಕರು ನಾವು ವಾಸವಿರುವ ಸ್ಥಳಕ್ಕೆ ಮೂರು ಬಾರಿ ಭೇಟಿ ಕೊಟ್ಟು ನಮ್ಮ ಕಷ್ಟ-ಸುಖವನ್ನು ಖುದ್ದು ನೋಡಿದ್ದಾರೆ. ಹಾಗೆಯೇ ಜಿಲ್ಲಾಧಿಕಾರಿಯವರೂ ಭೇಟಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಯವರನ್ನೂ ಭೇಟಿ ಮಾಡಿ ಅವರಿಗೂ ನಮ್ಮ ಮನವಿಯನ್ನು ಸಲ್ಲಿಸಿರುತ್ತೇವೆ. ಮಾನ್ಯ ಶಾಸಕರು ಜಿಲ್ಲಾಧಿಕಾರಿಯವರು ಚುನಾವಣೆಯ ನಂತರ ಪರಿಶೀಲಿಸುತ್ತೇವೆಂದು ಹೇಳಿರುತ್ತಾರೆ. ಇನ್ನಾದರೂ ನಮಗೆ ಜಾಗ ಮಂಜೂರಾತಿ ಮಾಡಿ ಕೊಡಿ ಎಂದು ಶಾಸಕರಲ್ಲಿ ವಿನಂತಿಸುತ್ತೇವೆ.

- ಬಡ ನಿವಾಸಿಗಳು (21 ಸಹಿ ಇದೆ) ಮಾರ್ಕೆಟ್ ರಸ್ತೆ, ಕುಶಾಲನಗರ.ವಿದ್ಯುತ್ ಮತ್ತು ಕಸ ಸಮಸ್ಯೆಗೆ ಕ್ರಮ ಅಗತ್ಯ

ಮಾನ್ಯರೆ, ಕುಶಾಲನಗರ ಸಮೀಪದ ಕೂಡುಮಂಗಳೂರು ವ್ಯಾಪ್ತಿಗೆ ಒಂದು ಸಣ್ಣ ಮಿಂಚು-ಗುಡುಗು ಅಥವಾ ಮಳೆ ಬಂದರೂ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಮಳೆ-ಮಿಂಚು ನಿಂತರೂ ಮರುದಿನ ಬೆಳಗಾಗುವ ತನಕ ವಿದ್ಯುತ್ ಸಂಪರ್ಕವನ್ನೇ ಕೊಡುವದಿಲ್ಲ. ಈ ಒಂದು ವ್ಯವಸ್ಥೆ ಬದಲಾಗಬೇಕು. ಮಿಂಚು-ಮಳೆ ನಿಂತ ಕೂಡಲೇ ಮತ್ತೆ ವಿದ್ಯುತ್ ಸಂಪರ್ಕವನ್ನು ಕೊಡುವಂತಾಗಬೇಕು.

ಮತ್ತೊಂದು ವಿಚಾರ ಕೂಡುಮಂಗಳೂರಿನಲ್ಲಿ ರಸ್ತೆ ಅಗಲೀಕರಣ ವೇಳೆ ರಸ್ತೆ ಬದಿಯಲ್ಲಿದ್ದ ಕಸದ ತೊಟ್ಟಿಗಳನ್ನು ಎತ್ತಂಗಡಿ ಮಾಡಲಾಗಿತ್ತು. ಹೀಗಾಗಿ ಜನರು ಕಸವನ್ನು ರಸ್ತೆ ಬದಿ - ಖಾಲಿ ನಿವೇಶನದಲ್ಲಿ ಹೀಗೆ ಕಂಡ ಕಂಡಲ್ಲಿ ಹಾಕುವಂತಾಗಿದೆ. ಈ ಕುರಿತು ಅನೇಕ ಬಾರಿ ಪಂಚಾಯಿತಿಗೆ ಮನವಿ ಮಾಡಿಕೊಂಡರೂ ಯಾವದೇ ಪರ್ಯಾಯ ವ್ಯವಸ್ಥೆ ಮಾಡಿರುವದಿಲ್ಲ. ಆದಷ್ಟು ಶೀಘ್ರದಲ್ಲಿ ಈ ವಿಭಾಗದಲ್ಲಿ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಪಂಚಾಯಿತಿಗೆ ಆದೇಶ ನೀಡುವಂತೆ ವಿನಂತಿ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವದರೊಂದಿಗೆ ನಮ್ಮ ಬಡಾವಣೆಗೆ ಪ್ರಕಾಶ ಬಡಾವಣೆ ಎಂದು ನಾಮಕರಣ ಮಾಡಲು ಸ್ಥಳೀಯ ಸಂಸ್ಥೆಗೆ ಸೂಚಿಸ ಬೇಕಾಗಿಯೂ ಕೇಳಿಕೊಳ್ಳುತ್ತೇನೆ.

- ಆಶಾ ಅಣ್ಣಪ್ಪ, ಕೂಡುಮಂಗಳೂರು.ಮಡಿಕೇರಿ ಕೋಟೆಯ ಪಾವಿತ್ರ್ಯತೆ ಕಾಪಾಡಿ

ಮಾನ್ಯರೆ, ಟ್ರಾಫಿಕ್ ಸಮಸ್ಯೆಯಂತೂ ಈಗ ಕೊಡಗಿನ ಎಲ್ಲಾ ನಗರಗಳಲ್ಲೂ ಇದೆ. ಅದರಲ್ಲೂ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು, ವೀರಾಜಪೇಟೆ, ಸೋಮವಾರಪೇಟೆ ಮುಂತಾದ ಹಲವು ಕಡೆ ಇದೆ. ಪ್ರವಾಸೋದ್ಯಮ ಬೆಳೆಯುತ್ತಿದೆ. ಮಾತ್ರವಲ್ಲ ಪಟ್ಟಣ, ನಗರಗಳೂ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆ, ಜನಸಂಖ್ಯೆ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಇರುವ ರಸ್ತೆಗಳ ಮೇಲೆ ವಿಪರೀತ ಒತ್ತಡವಾಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಂತೆ ಇಲ್ಲೂ ಸಮಸ್ಯೆ ಉಂಟಾಗುವ ಕಾಲ ದೂರವಿಲ್ಲ. ಇಲ್ಲಿ ಟ್ರಾಫಿಕ್ ಸಮಸ್ಯೆಗೆ ಪೊಲೀಸರಿಗೆ ಸಹಾಯಕವಾಗುವ ಕೆಲ ವ್ಯವಸ್ಥೆಗಳ ನಿರ್ಮಾಣವಾಗಬೇಕು. ಸಿಗ್ನಲ್ ಲೈಟ್ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಭವಿಷ್ಯದ ದೃಷ್ಟಿಯಿಂದ ಬದಲೀ ರಸ್ತೆಗಳಾಗಬೇಕು ಮತ್ತು ಅವು ಅಗಲ ವಾಗಿದ್ದು, ಸಮರ್ಪಕ ವಾಗಿರಬೇಕು.

ನಗರಗಳಲ್ಲಿ, ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಬೀದಿ ದೀಪಗಳೇ ಇಲ್ಲದಿರುವ ಅನೇಕ ಸ್ಥಳಗಳಿವೆ. ಇವು ಕಳ್ಳತನ ಇತರ ಸಮಾಜಬಾಹಿರ ಕಾರ್ಯಗಳಿಗೆ ಕಾರಣವಾಗುತ್ತವೆ. ಇವುಗಳನ್ನು ಗುರುತಿಸಿ ಸರಿಪಡಿಸುವ ಕಾರ್ಯವಾಗ ಬೇಕು. ಅನೇಕ ಅಪಘಾತಗಳು ಸಂಭವಿಸಿರುವದನ್ನು ಗಮನಿಸಿದ್ದೇವೆ. ಈಗಾಗಲೇ ಹೊಸ ಬಸ್ ನಿಲ್ದಾಣ ಖಾಸಗಿ ಬಸ್‍ಗಳಿದ್ದು, ಇದನ್ನು ಆದಷ್ಟು ಬೇಗ ಪ್ರವೇಶಕ್ಕೆ ಮುಕ್ತಗೊಳಿಸಿ, ಸೂಕ್ತ ಮಾರ್ಗ ವ್ಯವಸ್ಥೆ ನಿರ್ಮಿಸಬೇಕು.

ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‍ಗಳ ಓಡಾಟವನ್ನು ಪ್ರಾರಂಭಿಸಿ ಸೂಕ್ತ ರೀತಿಯ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳು ಹೆಚ್ಚು ಆಗುವ ಕಾರಣ ಹೆಚ್ಚಿನ ಸಿಬ್ಬಂದಿ ನೇಮಕಗೊಳಿಸಬೇಕು. ವಿದ್ಯುತ್ ಕಡಿತ ಗಂಟೆ, ದಿನಗಳ ಕಾಲ ಆಗದಂತೆ ಎಚ್ಚರ ಅಗತ್ಯ. ಮಡಿಕೇರಿಯ ನೆಹರೂ ಮಂಟಪ, ಇನ್ನಿತರ ಗಿರಿಧಾಮಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳನ್ನಾಗಿಸಬೇಕು. ಅಂತೇ ಪರಿಸರವನ್ನು ರಕ್ಷಿಸುವ ಕೆಲಸ ಆಗಬೇಕು.

ಮುಖ್ಯವಾಗಿ ಕೋಟೆ ಮಡಿಕೇರಿಗೆ ಒಂದು ಬಹುದೊಡ್ಡ ಹೆಮ್ಮೆಯ ಸ್ಮಾರಕವಿದ್ದಂತೆ. ಇಂದು ಕೋಟೆಯ ಸ್ಥಿತಿ ಶೋಚನೀಯವಾಗಿದೆ. ಇದು ಸುಣ್ಣಬಣ್ಣ ಕಳೆದುಕೊಂಡು ಅವನತಿಯತ್ತ ಸಾಗಿದೆ. ಇದರ ಸಂರಕ್ಷಣೆಯಾಗಬೇಕಿದ್ದು, ಉತ್ತಮ ಸ್ಮಾರಕವಾಗಿ ಸ್ಥಳೀಯರಿಗೆ ಹಾಗೂ ಪ್ರವಾಸಿಗರ ಕಣ್ಮನ ತಣಿಸುವಂತಿರಬೇಕು. ಹಸಿರು ಕೊಡಗಿನ ಉಸಿರು, ನಗರ ಹಾಗೂ ಪಟ್ಟಣ, ಗ್ರಾಮಗಳಲ್ಲೂ ಉದ್ಯಾನವನ, ಮರಗಿಡ, ತೋಪುಗಳನ್ನು ಸ್ಥಾಪಿಸಿ ಬೆಳೆಸುವ ಕಾರ್ಯವಾಗಬೇಕು. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಶ್ರಮಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ. - ಹರೀಶ್ ಸರಳಾಯ, ಮಡಿಕೇರಿ.ಆಸ್ಪತ್ರೆಯ ಲಂಚಾವತಾರ ನಿಲ್ಲಿಸಿ

ಮಾನ್ಯರೆ, ಬಹಳ ಅಗತ್ಯವಾಗಿ ನಮ್ಮ ಶಾಸಕರು ಮಾಡಬೇಕಾಗಿರುವ ದೇನೆಂದರೆ ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು, ನರ್ಸ್‍ಗಳು, ಸಿಬ್ಬಂದಿಗಳು ರೋಗಿಗಳ ರಕ್ತ ಹೀರುವದನ್ನು ಮೊದಲು ತಡೆಯಬೇಕಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮಾತ್ರವಲ್ಲ ಕುರ್ಚಿ, ಮೇಜುಗಳು ಸಹ ಲಂಚಕ್ಕಾಗಿ ಪೀಡಿಸುವದನ್ನು ನಿಲ್ಲಿಸುವದಲ್ಲದೇ, ಕಚೇರಿಗಳಿಗೆ ಮೇಲಧಿಕಾರಿಗಳಂತೆ ಬಂದು ಕೆಲಸ ಮುಗಿಸಿಕೊಂಡು ಹೋಗುವ ಕಮಿಷನ್ ಏಜೆಂಟ್‍ಗಳನ್ನು ಮಟ್ಟಹಾಕಬೇಕಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರ ದಿಂದ ಬರುವ ಶಾಸಕರ ಅನುದಾನ ಮತ್ತು ವಿಶೇಷ ಅನುದಾನಗಳ ದುರ್ಬಳಕೆ ಆಗದಂತೆ ಎಲ್ಲಾ ಇಲಾಖಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಕೆಲಸ ಸಾಧಿಸಬೇಕಾಗಿರುವದು ಕೂಡ ಅವಶ್ಯಕ. ಇಂತಹ ಸಾಹಸಗಾಥೆಯ ಕೆಲಸ ಸಾಧನೆಗಾಗಿ ಸೇತುವಾಗಿರುವಂತ ಹಾಗೂ ನಿಷ್ಠಾವಂತ ಮಾಹಿತಿ ಹಕ್ಕು ಕಾರ್ಯಕರ್ತರ ತಂಡವೊಂದನ್ನು ರಚಿಸಿ ತಿಂಗಳಿಗೊಮ್ಮೆ ಅವರೊಂದಿಗೆ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತಾದರೆ ಸ್ವಲ್ಪಮಟ್ಟಿಗೆ ಭ್ರಷ್ಟಾಚಾರ ನಿಗ್ರಹ ಮಾಡಲು ಸಾಧ್ಯವಾದೀತು. ಶಾಸಕರಿಗೆ ಸಕಲ ಯಶಸ್ಸನ್ನು ಕೋರುವ, - ಹೊಸೋಕ್ಲು ದೇವಯ್ಯ, ಗುಡ್ಡೆಹೊಸೂರು.ರಸ್ತೆ ಅವ್ಯವಸ್ಥೆ ಹೋಗಲಾಡಿಸಿ

ಮಾನ್ಯರೆ, ಕುಶಾಲನಗರ ಐ.ಬಿ. ಹಿಂಭಾಗದಿಂದ ಹೋಗುವ ಗೊಂದಿಬಸವನಹಳ್ಳಿ ರಸ್ತೆಯು ಸಂಪೂರ್ಣ ಶಿಥಿಲಗೊಂಡಿದ್ದು, ಗೊಂದಿಬಸವನಗಳ್ಳಿ ಗ್ರಾಮಕ್ಕೆ ಒಂದು ಆಟೋ ಕರೆದರೂ ಬರುವದಿಲ್ಲ. ಬಂದರೂ ದುಬಾರಿ ಹಣ ನೀಡಬೇಕು. ರಾತ್ರಿ ಸಮಯದಲ್ಲಿ ಬೇರೆ ಊರಿಗೆ ಹೋಗಿ ಬಂದರೆ ದೇವರೆ ಕಾಪಾಡಬೇಕು. ಅಲ್ಲದೆ ದ್ವಿಚಕ್ರ ವಾಹನ (ಬೈಕ್)ಗಳು ಕೂಡ ಓಡಿಸಲು ಸಾಧ್ಯ ಇಲ್ಲದಂತಾಗಿದೆ. ಗ್ರಾಮದಲ್ಲಿ 8 ರಿಂದ 10 ಆಟೋಗಳಿದ್ದು, ಅವು ಸಮಯಕ್ಕೆ ಸರಿಯಾಗಿ ಸಿಗುವದಿಲ್ಲ. ರಸ್ತೆಯು ಬಲಮುರಿ ಗಣಪತಿ ದೇವಸ್ಥಾನದಿಂದ ಗುಡ್ಡೆಹೊಸೂರು, ಹಾರಂಗಿ ರಸ್ತೆಗೆ ಮೈನ್ ಕೋರೆ ಹತ್ತಿರ ಸಂಪರ್ಕವಿರುತ್ತದೆ. ಈ ರಸ್ತೆಯನ್ನು ಸಂಪೂರ್ಣ ದುರಸ್ತಿ ಮಾಡಿಸಬೇಕು. ಉತ್ತಮವಾದ ರಸ್ತೆ ನಿರ್ಮಿಸಿದರೆ ಹಾರಂಗಿ, ಗುಡ್ಡೆಹೊಸೂರು ಕಡೆಗೆ ಬಸ್‍ಗಳನ್ನೂ ಓಡಿಸಬಹುದಾಗಿದೆ. ಅಲ್ಲದೆ ಮಾದಪಟ್ಟಣ ಗ್ರಾಮದ ಗಂಧದಕೋಟೆ ಮುಂಭಾಗದಿಂದ ಗೊಂದಿಬಸವನಗಳ್ಳಿ ಹಾಗೂ ಮಾದಪಟ್ಟಣ ಗ್ರಾಮಸ್ಥರಿಗೆ ತುಂಬಾ ಉಪಯೋಗವಿದೆ. ಆದ್ದರಿಂದ ಶಾಸಕರು ಮೇಲ್ಕಾಣಿಸಿದ ಎರಡೂ ರಸ್ತೆಗಳನ್ನು ಸಂಪೂರ್ಣ ದುರಸ್ತಿ ಮಾಡಿಸಿ ಗ್ರಾಮಸ್ಥರಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕಾಗಿ ವಿನಂತಿ.

- ಎಂ.ಕೆ. ಉಸ್ಮಾನ್, ಗ್ರಾ.ಪಂ. ಮಾಜಿ ಸದಸ್ಯ, ಗೊಂದಿಬಸವನಹಳ್ಳಿ.ಆಭರಣ ಸಾಲ ಮನ್ನಾ ಮಾಡಿ

ಮಾನ್ಯರೆ, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘದ ಸದಸ್ಯೆಯರಾದ ನಾವು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದು, ನಮ್ಮ ಕೌಟುಂಬಿಕ ಸಂಕಷ್ಟದ ಹಿನ್ನೆಲೆ ಹಲವಾರು ವರ್ಷಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ನಮ್ಮ ಆಭರಣಗಳನ್ನು ಅಡವಿಟ್ಟು ಪಡೆದ ಸಾಲವನ್ನು ತೀರಿಸಲಾಗದೆ ಕಾಲಕಾಲಕ್ಕೆ ಕಷ್ಟದಿಂದಲೇ ಬಡ್ಡಿ ಕಟ್ಟಿಕೊಂಡು ಬರುತ್ತಿದ್ದೇವೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸದೇ ಇರುವದರಿಂದ ಈ ಸಾಲದಿಂದ ಮುಕ್ತರಾಗಲು ಇಂದಿಗೂ ಸಾಧ್ಯವಾಗುತ್ತಿಲ್ಲ. ನಮ್ಮ ವಿವಾಹದ ಸಂದರ್ಭ ತವರಿನವರು ಹಾಕಿರುವ ಚಿನ್ನಾಭರಣ ಅನಿವಾರ್ಯ ಎಂಬಂತೆ ಬ್ಯಾಂಕ್‍ನ ಲಾಕರ್ ಸೇರಿದೆ. ಸರಕಾರ ರೈತರ ಸಾಲ ಮನ್ನಾ ಮಾಡುವ ರೀತಿಯಲ್ಲಿ ನಮ್ಮ ಆಭರಣ ಸಾಲವನ್ನೂ ಮನ್ನಾ ಮಾಡುವಂತೆ ಮಾನ್ಯ ಶಾಸಕರು ಸಹಕರಿಸುವಂತಾದಲ್ಲಿ ಮಹದುಪಕಾರವಾದೀತು.

- ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘದ ಸದಸ್ಯೆಯರು, ವೀರಾಜಪೇಟೆ, ಟಿ. ಶೆಟ್ಟಿಗೇರಿ.ವಿದ್ಯುತ್-ನೀರು-ರಸ್ತೆ ಬೇಕು

ಮಾನ್ಯರೆ, ಸರಕಾರದಿಂದ ಶನಿವಾರಸಂತೆಯಲ್ಲಿ ಒಂದು ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿದ್ದರೂ ಇಲ್ಲಿ ಸರಿಯಾದ ವೈದ್ಯರುಗಳ ನೇಮಕವೇ ಆಗಿರುವದಿಲ್ಲ. ಇದ್ದ ಒಬ್ಬರು ವೈದ್ಯರು ಎಲ್ಲಾ ನೋಡಿಕೊಳ್ಳಬೇಕಾಗುತ್ತದೆ. ತುರ್ತಾಗಿ ಏನಾದರೂ ತೊಂದರೆಯಾದರೆ ಹಾಸನ ಅಥವಾ ಸಕಲೇಶಪುರಕ್ಕೆ ಹೋಗಿ ಎಂದು ಶಿಫಾರಸ್ಸು ಮಾಡುತ್ತಾರೆ. ರೋಗಿಯನ್ನು ದೊಡ್ಡ ಆಸ್ಪತ್ರೆಗೆ ತಲಪಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆದುದರಿಂದ ಶನಿವಾರಸಂತೆ ಆಸ್ಪತ್ರೆಗೆ ಸೂಕ್ತ ವೈದ್ಯರುಗಳನ್ನು ನೇಮಿಸಬೇಕಾಗಿದೆ.

ರಸ್ತೆ: ಗುಡುಗಳಲೆ ಜಂಕ್ಷನ್‍ನಿಂದ ಹಾರೆ ಹೊಸೂರಿಗೆ ಹೋಗುವ ಮುಖ್ಯರಸ್ತೆ, ಶಿರಂಗಾಲ ಗ್ರಾಮದಿಂದ ಗೋಪಾಲಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಿಲ್ಲ ಹಾಗೂ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವದರಿಂದ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗುವದರಿಂದ ರಸ್ತೆಯು ತೀರಾ ಹದಗೆಟ್ಟಿದೆ. ಉಪಯೋಗಕ್ಕೆ ಯೋಗ್ಯವಿಲ್ಲದೆ ತೀರಾ ಕಳಪೆಯಾಗಿರುವ ಈ ರಸ್ತೆಯನ್ನು ಕೂಡಲೇ ಸರಿಪಡಿಸುವದಾಗಿ ನಂಬುತ್ತೇವೆ.

ವಿದ್ಯುತ್ ಕಣ್ಣಾಮುಚ್ಚಾಲೆ: ಶಿರಂಗಾಲ ಗ್ರಾಮದಲ್ಲಿ ಸಂಜೆಯಾದರೆ ವೋಲ್ಟೇಜ್ ಸಮಸ್ಯೆ ಮಾಮೂಲಿ. ನೀರಿನ ಮೋಟಾರ್ ಚಾಲೂ ಆಗುವದಿಲ್ಲ. ಗುಡುಗಳಲೆಯಲ್ಲಿ ಹೊಸದಾಗಿ 25 ಕೆ.ವಿ.ಎ. ಟ್ರಾನ್ಸ್‍ಫಾರ್ಮರ್ ಹಾಕಿದ್ದಾರೆ. ಅದು ತುಂಬಾ ಚಿಕ್ಕದಾಗಿರುವದರಿಂದ 63 ಕೆ.ವಿ.ಎ ಟ್ರಾನ್ಸ್‍ಫಾರ್ಮರ್ ಹಾಕಿಸಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

- ಜೆ.ಕೆ. ವೇಲಾಯುಧನ್, ಶನಿವಾರಸಂತೆ.

ನಮಗೆ ನೀರು-ರಸ್ತೆ ಎರಡೂ ಬೇಕು

ಮಾನ್ಯರೆ, ನಾನು ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದ ಸಂದರ್ಭ 1970 ರಿಂದ 2004 ರವರೆಗೆ ಕರ್ನಾಟಕ ರಾಜ್ಯವನ್ನು ಆಳಿದ ಎಲ್ಲಾ ರಾಜಕೀಯ ಪಕ್ಷಗಳ ಆಡಳಿತದಲ್ಲಿ ಸೇವೆ ಸಲ್ಲಿಸಿರುತ್ತೇನೆ. ನಿವೃತ್ತಿ ಹೊಂದಿದ ಬಳಿಕ ಯಾವದೇ ರಾಜಕೀಯ ಪಕ್ಷದ ಸದಸ್ಯನಾಗದೆ ಇವತ್ತಿನವರೆಗೂ ಉಳಿದಿರುತ್ತೇನೆ. 1996 ರಿಂದ 1997 ರವರೆಗೆ ನಾನು ವೀರಾಜಪೇಟೆ ವಿಭಾಗದ ಉಪಾಧೀಕ್ಷಕನಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭ ಅಂದಿನ ಶಾಸಕರಿಗೂ ನನಗೂ ಕ್ಷುಲ್ಲಕ ವಿಚಾರದಲ್ಲಿ ಮನಸ್ತಾಪವಿತ್ತು. ಇದರ ಫಲವಾಗಿ ನಮ್ಮ ಊರಿನ ಕೆಲವು ಭಾಗಕ್ಕೆ ನೀರು ಒದಗಿಸಲು ನೀರಿನ ಟ್ಯಾಂಕಿಯೊಂದನ್ನು 1996 ಕ್ಕೂ ಮೊದಲು ನಿರ್ಮಿಸಲಾಗಿತ್ತು. ಯಾವದೋ ಕಾರಣಕ್ಕೆ ನಿಂತು ಹೋಗಿತ್ತು. 2004 ರಲ್ಲಿ ನಾನು ನಿವೃತ್ತನಾಗಿ ಊರಿಗೆ ಬಂದ ಬಳಿಕ ಅಂದು ನಮ್ಮ ಕ್ಷೇತ್ರದ ಗ್ರಾಮ ಪಂಚಾಯಿತಿ ವತಿಯಿಂದ ಒಂದು ಕೊಳವೆ ಬಾವಿ ತೋಡಿಸಿದೆ. ದುರದೃಷ್ಟವಶಾತ್ ಆ ಗ್ರಾಮ ಪಂಚಾಯಿತಿ ನಮ್ಮ ಶಾಸಕರು ಆಯ್ಕೆಯಾದ ರಾಜಕೀಯ ಪಕ್ಷದ ವಿರೋಧ ಪಕ್ಷದವರ ಆಡಳಿತಕ್ಕೆ ಸೇರಿತ್ತು. ಇದೇ ಕಾರಣದಿಂದ ಆ ಕೊಳವೆ ಬಾವಿಯಿಂದ ನೀರು ಹರಿಯಲಿಲ್ಲ ಮಾತ್ರವಲ್ಲ ಯಾರಿಗೂ ಆ ನೀರು ಕುಡಿಯಲು ದಕ್ಕಲಿಲ್ಲ.

ಮುಂದಿನ ದಿನಗಳಲ್ಲಿ 2008 ರಲ್ಲಿ ಆಯ್ಕೆಯಾದ ಶಾಸಕರನ್ನು ವಿನಂತಿಸಿ ಈ ಪರಿಸ್ಥಿತಿಯನ್ನು ವಿವರಿಸಿ 12 ವರ್ಷಗಳ ಹಿಂದೆ ಕಟ್ಟಿಸಿದ ನೀರಿನ ಟ್ಯಾಂಕನ್ನು ತೋರಿಸಿ ಕುಡಿಯುವ ನೀರಿನ ಬವಣೆಯನ್ನು ಆ ಪ್ರದೇಶದಲ್ಲಿ ವಾಸಿಸುವ ಜನರು ಅನುಭವಿಸುವದನ್ನು ತಿಳಿಸಿದೆ. ಅದಕ್ಕೆ ಅವರು ಸ್ಪಂದಿಸಿದರು. 2013 ರ ಚುನಾವಣೆಗೆ ಸ್ವಲ್ಪ ಮೊದಲು ಒಂದು ಕೊಳವೆ ಬಾವಿ ತೋಡಲಾಯಿತು. ಆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಮುಂದೆ ಯಾವದೇ ಕಾಮಗಾರಿ ಕೈಗೊಳ್ಳದ್ದರಿಂದ ನೀರು ಯಾರಿಗೂ ಲಭ್ಯವಾಗಲಿಲ್ಲ. 2018 ರ ಚುನಾವಣೆಗೆ ಸ್ವಲ್ಪ ಮೊದಲು ಈ ಕೊಳವೆ ಬಾವಿಗೆ ಯಾರೋ ಕಲ್ಲು ಹಾಕಿದ್ದರಿಂದ ಅದನ್ನು ಪುನಃ ತೆಗೆಸಿ ಸ್ವಚ್ಛಗೊಳಿಸಿದರೂ ಯಾವದೇ ಕಾರ್ಯ ಮುಂದುವರಿಯಲಿಲ್ಲ. ಇದೇ ರೀತಿ ನಮ್ಮ ಊರಿನ ಎರಡು ಕಡೆ ರಸ್ತೆಗಳಿವೆ. ಇದರಲ್ಲಿ ಒಂದು ಕಡೆ ದಿನಕ್ಕೆ ಏಳೆಂಟು ಬಸ್‍ಗಳು ಓಡಾಡುತ್ತವೆ.

ಇನ್ನೊಂದು ರಸ್ತೆ ನಾಪೋಕ್ಲು ಪಟ್ಟಣವನ್ನು ವೀರಾಜಪೇಟೆ ನಗರಕ್ಕೆ ಸೇರಿಸುವ ಹತ್ತಿರದ ರಸ್ತೆಯಲ್ಲಿ ಆರೇಳು ತಿಂಗಳು ತುಂಬಿ ಗರ್ಭಿಣಿಯರು ಪ್ರಯಾಣಿಸಿದರೆ ಒಂದೋ ಗರ್ಭಪಾತವಾಗಬಹುದು ಇಲ್ಲವೇ ಪ್ರಸವವಾಗಬಹುದು. ಕಾಯಿಲಸ್ಥರು ಪ್ರಯಾಣಿಸಿದರೆ ಅವರು ಹೃದಯಾಘಾತದಿಂದ ಸಾಯಲೂಬಹುದು. ಆ ರೀತಿ ಇದೆ ಇಲ್ಲಿನ ರಸ್ತೆ. ನನಗೆ ತಿಳಿದ ಪ್ರಕಾರ ಹಿಂದಿನ ಶಾಸಕರಿಗೂ ನನಗೂ ಇದ್ದ ಮನಸ್ತಾಪ ಮತ್ತು ಶಾಸಕರು ಪ್ರತಿನಿಧಿಸುತ್ತಿದ್ದ ಪಕ್ಷದ ವಿರೋಧ ಪಕ್ಷದವರ ಕಡೆಯಿಂದ ಮೊದಲಿನ ಕೊಳವೆ ಬಾವಿ ಕೊರೆಸಿದ ಕಾರಣವನ್ನು ಮುಂದಿಟ್ಟು ನಾನು ಅವರ ಪಕ್ಷದವನಲ್ಲ ಎಂದು ಈ ರೀತಿಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೋ ಏನೋ ಎಂದು ಅನಿಸುತ್ತಿದೆ.

ನನ್ನ ಮೇಲಿನ ಈ ಅಭಿಪ್ರಾಯದಿಂದಾಗಿ ಈ ಭಾಗದ ಹಲವಾರು ಕುಟುಂಬಗಳು ಬೇಸಿಗೆಯಲ್ಲಿ ನೀರಿಗಾಗಿ ಹಂಬಲಿಸುತ್ತಿದ್ದಾರೆ. ಈ ಅಸಮಾಧಾನವನ್ನು ಈಗಿನ ಶಾಸಕರಿಗೆ ಮುಕ್ತವಾಗಿ ತಿಳಿಸಿರುತ್ತೇನೆ. ಶಾಸಕರು ಎಲ್ಲಾ ಮತದಾರರು ಭಾರತೀಯ ಪ್ರಜೆಗಳೆಂದು ತಿಳಿದು ಆದ್ಯತೆಯ ಮೇಲೆ ಕುಡಿಯುವ ನೀರಿನ ಹಾಗೂ ಉತ್ತಮ ರಸ್ತೆಯ ಸೌಕರ್ಯಕ್ಕೆ ಮನಸ್ಸು ಮಾಡುವಂತೆ ವಿನಂತಿಸುತ್ತೇನೆ.

- ಮುಕ್ಕಾಟೀರ ಚೋಟು ಅಪ್ಪಯ್ಯ, ನಿವೃತ್ತ ಎಸ್.ಪಿ. ಕುಂಜೇರಿ.

ಕೊಳಕೇರಿ-ಕೋಕೇರಿ ರಸ್ತೆ ಸರಿಪಡಿಸಿ

ಮಾನ್ಯರೆ, ಕೊಳಕೇರಿಯಿಂದ ಕೋಕೇರಿಗೆ ತೆರಳುವ ಸುಮಾರು 6 ಕಿ.ಮೀ. ದೂರದವರೆಗಿನ ರಸ್ತೆಯು ತೀರಾ ಹದಗೆಟ್ಟಿದ್ದು ಕಳೆದ ಹತ್ತು-ಹದಿನೈದು ವರ್ಷಗಳಿಂದಲೂ ಅಭಿವೃದ್ಧಿ ಕಾಣದೇ ಉಳಿದಿದೆ. ಈ ಕುರಿತು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿಯೂ ಪ್ರಯೋಜನ ಆಗಲಿಲ್ಲ. ರಸ್ತೆ ಕಿರಿದಾಗಿದ್ದು, ಚರಂಡಿ ವ್ಯವಸ್ಥೆ ಕೂಡ ಇರುವದಿಲ್ಲ. ರಸ್ತೆಯ ಅವ್ಯವಸ್ಥೆಯಿಂದಾಗಿ ಈ ಹಿಂದೆ ಓಡಾಡುತ್ತಿದ್ದ ಬಸ್ ಕೂಡ ತನ್ನ ಓಡಾಟವನ್ನು ನಿಲ್ಲಿಸಿದೆ. ಹೀಗಾಗಿ ಅಸ್ವಸ್ಥರಿಗೆ, ವಯೋವೃದ್ಧರಿಗೆ, ಮಹಿಳೆಯರಿಗೆ ಬಹಳ ತೊಂದರೆ ಆಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಪಾಡು ಕೂಡ ಹೇಳತೀರದು.

ರಸ್ತೆಯ ನಡುವೆ ಇರುವ ಗುಂಡಿಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನಗಳು ತೆರಳಿದಾಗ ಕೆಸರು ನೀರು ಮೈಮೇಲೆ ಎರಚಲ್ಪಡುತ್ತದೆ. ಇನ್ನು ಕುಡಿಯುವ ನೀರಿನ ಸ್ಥತಿ ಕೂಡ ಅಷ್ಟಕಷ್ಟೆ. ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿರುವ ನಲ್ಲಿ ಕಟ್ಟುನಿಂತರೆ ಅನತಿ ದೂರದ ಹೊಳೆ ನೀರೇ ಗತಿ. ಆದುದರಿಂದ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ಸೌಲಭ್ಯಗಳಿಂದ ವಂಚಿತರಾಗಿರುವ ಈ ವಿಭಾಗದ ನಿವಾಸಿಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿ ಸಹಕರಿಸಿ. - ಎಂ.ಎ. ಮೊೈದು ಮತ್ತು ಗ್ರಾಮಸ್ಥರು, ಕೊಳಕೇರಿ.

ಯೋಗ್ಯ ರಸ್ತೆ ಬೇಕು

ಮಾನ್ಯರೆ, ನನಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಬ್ಲಾಕ್ ನಂ.13ರ ಸರ್ವೆ ನಂ. 23 ರಲ್ಲಿ 0.10 ಸೆಂಟ್ ಜಾಗವಿದ್ದು, ಅದರಲ್ಲಿರುವ ನನ್ನ ವಾಸದ ಮನೆಯಲ್ಲಿ ನಾನು ಕಳೆದ 28 ವರ್ಷದಿಂದ ನೆಲಸಿರುತ್ತೇನೆ. ನನ್ನ ಮನೆಗೆ ಹೋಗಲು ಬರಲು 10 ಅಡಿ ರಸ್ತೆಯಿಂದ ಕವಲೊಡೆದು ಬಂದು 6 ಅಡಿ ರಸ್ತೆ ಆಗಿದೆ. ಈ ದಾರಿಯು ನಾನು ಕ್ರಯಕ್ಕೆ ಪಡೆದು ಕೊಂಡಿದ್ದಾಗಿದ್ದು, ಶುದ್ಧ ಕ್ರಯ ಪತ್ರದಲ್ಲಿಯೂ ಇತರ ದಾಖಲೆ ಗಳಲ್ಲೂ ನಮೂದಿಸಲಾಗಿದೆ.

ಆದರೆ 6 ಅಡಿ ಇದ್ದ ಈ ರಸ್ತೆಯು ಕೆಲವು ಭಾಗದಲ್ಲಿ 5 ಅಡಿ ಇನ್ನು ಕೆಲವು ಭಾಗದಲ್ಲಿ ಅದಕ್ಕಿಂತಲೂ ಕಡಿಮೆ ಇರುತ್ತದೆ. ಈ ರಸ್ತೆಯನ್ನು ಎರಡು ಕಡೆಯವರು ಆಕ್ರಮಿಸಿಕೊಂಡಿರುತ್ತಾರೆ ಹಾಗೂ ಇದರ ವಿವರ ಅನೇಕ ಬಾರಿ ಸಂಬಂಧಿಸಿದ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಅರ್ಜಿ ಮುಖಾಂತರ ಸರಿಪಡಿಸಲು ವಿನಂತಿಸಿರುತ್ತೇನೆ ಹಾಗೂ ಬೇಕಾದ ಎಲ್ಲಾ ದಾಖಲೆ ಪತ್ರಗಳ ನಕಲು ಗಳನ್ನು ಕೂಡ ಕಾರ್ಯಾಲಯಕ್ಕೆ ತಲಪಿಸಿರುತ್ತೇನೆ. ಆದರೆ ಯಾವದೇ ಪ್ರಯೋಜನವಾಗಿರುವದಿಲ್ಲ. ಮೇಲ್ಕಂಡ ಅರ್ಜಿಯ ಪ್ರತಿ ಸಮೇತ ಶಾಸಕರ, ಕಾರ್ಯದರ್ಶಿಯವರ ಮುಖಾಂತರ ತಲುಪಿಸಿಯೂ ಇದುವರೆಗೆ ಯಾವದೇ ಕ್ರಮ ಜರುಗಿಸಿಲ್ಲ. ಇದೀಗ ನನ್ನ ಮನೆಗೆ ಆಟೋ ಕೂಡ ಬರಲು ಸಾಧ್ಯವಿಲ್ಲ. ಯಾವದೇ ಭಾರವಾದ ವಸ್ತು ಮನೆಗೆ ತಲುಪಿಸಲು ದುಪ್ಪಟ್ಟು ಖರ್ಚು ಮಾಡಬೇಕಾಗಿರುತ್ತದೆ. ಅನಾರೋಗ್ಯವಾದಲ್ಲಿ ಜನರೇ ಹೊತ್ತುಕೊಂಡು ಹೋಗುವ ಸನ್ನಿವೇಶವಾಗಿರುತ್ತದೆ.

ರಸ್ತೆ ಮೂಲಭೂತ ಸೌಕರ್ಯ ದಲ್ಲಿ ಒಂದಾಗಿರುತ್ತದೆ. ಈ ರಸ್ತೆಯನ್ನು ಸರಿಪಡಿ�